
ಒಂದು ಕಂಪನಿಯಲ್ಲಿ 23 ವರ್ಷಗಳ ಕಾಲ ಕೆಲಸ ಮಾಡುವುದು ಅಂದರೆ ಅಷ್ಟು ಸುಲಭದ ಮಾತಲ್ಲ. ಆ ಸಂಸ್ಥೆಯೊಂದಿಗೆ ಉದ್ಯೋಗಿಯ ಬದುಕಿನ ಬಹುಪಾಲು ಸಮಯ ಕಳೆದುಹೋಗಿರುತ್ತದೆ. ಸಹೋದ್ಯೋಗಿಗಳೊಂದಿಗೆ ಆತ್ಮೀಯತೆ, ಕೆಲಸದ ಜವಾಬ್ದಾರಿ, ಪ್ರತಿದಿನದ ದಿನಚರಿ ಎಲ್ಲವೂ ಜೀವನದ ಭಾಗವಾಗಿರುತ್ತವೆ. ಆದರೆ ಇಷ್ಟೆಲ್ಲ ವರ್ಷ ದುಡಿದ ಉದ್ಯೋಗಿಯನ್ನು ಕಂಪನಿಯೊಂದು ಏಕಾಏಕಿ ಕೆಲಸದಿಂದ ತೆಗೆದುಹಾಕಿದರೆ ಹೇಗಿರಬಹುದು? ಅದೂ ಸಹೋದ್ಯೋಗಿಗಳಿಗೆ ವಿದಾಯ ಹೇಳಲು ಕೂಡ ಅವಕಾಶ ನೀಡದೆ ಕಳುಹಿಸಿದರೆ? ಇಂತಹದ್ದೊಂದು ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಅಮೆರಿಕದ ಹೌಸ್‌ವೇರ್ (ಮನೆ ಬಳಕೆಯ ವಸ್ತುಗಳು) ಕಂಪನಿಯೊಂದರಲ್ಲಿ ಸುಮಾರು 23 ವರ್ಷಗಳ ಕಾಲ ಕೆಲಸ ಮಾಡಿದ್ದ ವ್ಯಕ್ತಿಯೊಬ್ಬರು ತಮ್ಮ ಅನುಭವವನ್ನು ರೆಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇವರು ಕೊನೆಯದಾಗಿ ಜಿಲ್ಲಾ ವ್ಯವಸ್ಥಾಪಕ (ಡಿಸ್ಟ್ರಿಕ್ಟ್ ಮ್ಯಾನೇಜರ್) ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ತಮ್ಮನ್ನು ಕೆಲಸದಿಂದ ತೆಗೆದುಹಾಕುವ ನಿರ್ಧಾರವನ್ನು ಕಂಪನಿ ಫೋನ್ ಕರೆ ಮೂಲಕ ತಿಳಿಸಿತು ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ, ಕಚೇರಿಯಲ್ಲಿದ್ದ ವಸ್ತುಗಳನ್ನು ಖಾಲಿ ಮಾಡಲು, ಕೆಲಸದ ಖರ್ಚುಗಳ ಲೆಕ್ಕ ಸಲ್ಲಿಸಲು ಮತ್ತು ತಮ್ಮ ಕಾರಿನಲ್ಲಿದ್ದ ಕಂಪನಿಗೆ ಸೇರಿದ ವಸ್ತುಗಳನ್ನು ಹಿಂದಿರುಗಿಸಲು ಕೇವಲ ನಾಲ್ಕು ಗಂಟೆಗಳ ಸಮಯ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.
ಈ ನಿರ್ಧಾರದಿಂದ ಮತ್ತೊಬ್ಬ ಜಿಲ್ಲಾ ವ್ಯವಸ್ಥಾಪಕ ಹಾಗೂ ಕಂಪನಿಗೆ ಹೊಸದಾಗಿ ಸೇರಿದ ಮೂವರು ಉದ್ಯೋಗಿಗಳೂ ಕೆಲಸ ಕಳೆದುಕೊಂಡಿದ್ದಾರೆ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ. ಕೆಲಸದಿಂದ ತೆಗೆದುಹಾಕಿದವರಿಗೆ ಯಾವುದೇ ಹೆಚ್ಚುವರಿ ಪರಿಹಾರ ನೀಡುವುದಿಲ್ಲ. ಆದರೆ ಬಳಕೆಯಾಗದೆ ಉಳಿದ ರಜೆಗಳ ಹಣವನ್ನು ಪಾವತಿಸುವುದಾಗಿ ಕಂಪನಿ ತಿಳಿಸಿದೆ ಎಂದು ಹೇಳಿದ್ದಾರೆ.
ಕೆಲಸದಿಂದ ತೆಗೆದುಹಾಕಿದ ಬಳಿಕ ತಮ್ಮ ಸಂದೇಹಗಳಿಗೆ ಉತ್ತರ ಪಡೆಯಲು ಮಾನವ ಸಂಪನ್ಮೂಲ ವಿಭಾಗವನ್ನು (HR) ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆ ಸಿಗಲಿಲ್ಲ ಎಂಬುದು ಅವರ ಅಳಲು.
23 ವರ್ಷಗಳ ಕಾಲ ಕೆಲಸ ಮಾಡಿದ ಸಂಸ್ಥೆಯಿಂದ ಸರಿಯಾದ ವಿದಾಯ ಹೇಳಲು ಕೂಡ ಅವಕಾಶ ಸಿಗದಿರುವುದು ಅವರಿಗೆ ಹೆಚ್ಚು ನೋವು ತಂದಿದೆ. 'ನಾನು ಈ ಕೆಲಸಕ್ಕೆ ಸರಿಯಾಗಿ ವಿದಾಯ ಹೇಳಲೂ ಸಾಧ್ಯವಾಗಲಿಲ್ಲ. ನಾಳೆಯಿಂದ ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ' ಎಂಬ ಅರ್ಥದಲ್ಲಿ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ತಕ್ಷಣದ ಆರ್ಥಿಕ ಸಮಸ್ಯೆ ಇಲ್ಲದಿದ್ದರೂ, ಇಷ್ಟು ವರ್ಷಗಳ ಕೆಲಸದ ನಂತರ ದಿಢೀರ್ ಆಗಿ ದಿನಚರಿ ಬದಲಾಗಿರುವುದನ್ನು ಒಪ್ಪಿಕೊಳ್ಳುವುದು ಕಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಹಲವು ಉದ್ಯೋಗಿಗಳು ತಮ್ಮ ಕೆಲಸದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಎಷ್ಟೇ ವರ್ಷ ಕಂಪನಿಗಾಗಿ ದುಡಿದರೂ ಉದ್ಯೋಗ ಭದ್ರತೆ ಖಚಿತವಲ್ಲ. ಹೀಗಾಗಿ ಕೆಲಸದ ಜೊತೆಗೆ ವೈಯಕ್ತಿಕ ಜೀವನ, ಆರೋಗ್ಯ ಮತ್ತು ಕುಟುಂಬಕ್ಕೂ ಆದ್ಯತೆ ನೀಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಒಟ್ಟಿನಲ್ಲಿ, ಈ ಘಟನೆ ಉದ್ಯೋಗಿ ಮತ್ತು ಕಂಪನಿಯ ನಡುವಿನ ಸಂಬಂಧ, ಕೆಲಸದ ಸ್ಥಳದಲ್ಲಿ ಮಾನವೀಯತೆ ಹಾಗೂ ಉದ್ಯೋಗಿಗಳ ನಿಷ್ಠೆಗೆ ಸಂಸ್ಥೆಗಳು ನೀಡುವ ಮೌಲ್ಯದ ಬಗ್ಗೆ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ.