37 ವರ್ಷದ ಮಗನಿದ್ದರೂ 59ನೇ ವಯಸ್ಸಿನಲ್ಲಿ 3ನೇ ಮಗುವಿನ ನಿರೀಕ್ಷೆಯಲ್ಲಿ ಆಂಕರ್, ಲೈವ್ ಟಿವಿ ಹೇಳಿಕೆ ಬೆನ್ನಲ್ಲೇ ಆಗಿದ್ದೇನು?

Published : Nov 18, 2026, 10:39 PM IST
Dr Renee Hoenderkamp

ಸಾರಾಂಶ

59ನೇ ವಯಸ್ಸಿನಲ್ಲಿ ಮೂರನೇ ಮಗುವಿಗೆ ಜನ್ಮ ನೀಡಲು ಸಿದ್ಧರಾಗಿರುವ ಬ್ರಿಟನ್‌ನ ಡಾ.ರೆನೀ ಹೊಂಡರ್‌ಕ್ಯಾಂಪ್ ಅವರ ಕಥೆ ಇದು. ಲೈವ್ ಟಿವಿಯಲ್ಲಿ ಈ ಸುದ್ದಿ ಹಂಚಿಕೊಂಡಾಗ ಟೀಕೆಗಳು ಎದುರಾದರೂ, ತಮ್ಮ ನಿರ್ಧಾರವನ್ನು ಅವರು ದಿಟ್ಟವಾಗಿ ಸಮರ್ಥಿಸಿಕೊಂಡಿದ್ದಾರೆ.

ಬ್ರಿಟನ್‌ನ ಜನಪ್ರಿಯ ಟಿವಿ ನಿರೂಪಕಿ ಹಾಗೂ ಆರೋಗ್ಯ ಸೇವಾ ಕ್ಷೇತ್ರದಲ್ಲಿ (NHS ನರ್ಸ್ ಪ್ರಾಕ್ಟೀಷನರ್) ಸೇವೆ ಸಲ್ಲಿಸುತ್ತಿರುವ ಡಾ.ರೆನೀ ಹೊಂಡರ್‌ಕ್ಯಾಂಪ್ ತಮ್ಮ 59ನೇ ವಯಸ್ಸಿನಲ್ಲಿ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಲೈವ್ ಟಿವಿ ಕಾರ್ಯಕ್ರಮದಲ್ಲೇ ತಾವು ಗರ್ಭಿಣಿಯಾಗಿರುವ ಸುದ್ದಿಯನ್ನು ಹಂಚಿಕೊಂಡ ಇವರಿಗೆ ಶುಭಾಶಯಗಳ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗಳೂ ಎದುರಾಗಿವೆ.

ಲೈವ್ ಟಿವಿಯಲ್ಲಿ ಸಿಹಿಸುದ್ದಿ

ಇತ್ತೀಚೆಗೆ GB News ವಾಹಿನಿಯ ಲೈವ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವೇಳೆ ರೆನೀ ದಿಢೀರನೆ ಸಿಹಿಸುದ್ದಿ ಪ್ರಕಟಿಸಿದರು. ನನಗೆ ಈಗಾಗಲೇ ದೊಡ್ಡವನಾದ ಮಗ ಮತ್ತು ಚಿಕ್ಕ ಮಗಳಿದ್ದಾಳೆ. ಇಲ್ಲಿರುವ ಯಾರಿಗೂ ಗೊತ್ತಿಲ್ಲದ ಒಂದು ವಿಷಯ ಹೇಳುತ್ತಿದ್ದೇನೆ. ನಾನು ಸದ್ಯದಲ್ಲೇ ಮೂರು ಮಕ್ಕಳ ತಾಯಿಯಾಗಲಿದ್ದೇನೆ. ಈಗ ನನಗೆ 12 ವಾರಗಳ ಗರ್ಭಿಣಿ ಎಂದು ಹೇಳಿದರು. ಇದನ್ನು ಕೇಳಿದ ಸಹ-ನಿರೂಪಕರು ಒಂದು ಕ್ಷಣ ಶಾಕ್ ಆದರು. ಬಳಿಕ ಎಲ್ಲರೂ ಅವರಿಗೆ ಶುಭಾಶಯ ಕೋರಿದರು. ಇದೊಂದು ಪವಾಡವೇ ಸರಿ ಎಂದು ಸಹ-ನಿರೂಪಕರು ಮೆಚ್ಚುಗೆ ವ್ಯಕ್ತಪಡಿಸಿದರು.

ರೆನೀ ಅವರಿಗೆ ಈಗಾಗಲೇ 37 ವರ್ಷದ ಮಗ ಮತ್ತು 8 ವರ್ಷದ ಮಗಳಿದ್ದಾಳೆ. 59ನೇ ವಯಸ್ಸಿನಲ್ಲಿ ಮತ್ತೆ ತಾಯಿಯಾಗುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಆನ್‌ಲೈನ್‌ನಲ್ಲಿ ಅನೇಕರು ಅವರನ್ನು ಟೀಕಿಸಲು ಆರಂಭಿಸಿದರು. ಈ ವಯಸ್ಸಿನಲ್ಲಿ ಮಗು ಪಡೆಯುತ್ತಿರುವುದು ಸರಿಯಲ್ಲ. ನೀವು ತುಂಬಾ 'ಸ್ವಾರ್ಥಿ' ಎಂದು ಟ್ರೋಲ್ ಮಾಡಿದರು. ಈ ಕಾಮೆಂಟ್‌ಗಳನ್ನು ನೋಡಿ ರೆನೀಗೆ ತುಂಬಾ ನೋವಾಯಿತು.

ತಮ್ಮ ವಿರುದ್ಧದ ಟೀಕೆಗಳನ್ನು ಅಸಹ್ಯಕರ ಎಂದು ಕರೆದಿರುವ ರೆನೀ, Daily Mail ಪತ್ರಿಕೆಗೆ ಲೇಖನ ಒಂದನ್ನು ಬರೆದಿದ್ದಾರೆ. ಅದರಲ್ಲಿ ತಮ್ಮ ಜೀವನ ಕತೆಯನ್ನ ಹಂಚಿಕೊಂಡಿದ್ದಾರೆ. ನಾನು 21ನೇ ವಯಸ್ಸಿನಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದೆ. ಆಗ ನನಗೆ ಅನುಭವ, ತಾಳ್ಮೆ ಅಥವಾ ಸರಿಯಾದ ಆರ್ಥಿಕ ಶಕ್ತಿ ಇರಲಿಲ್ಲ. ಮಗ ಹುಟ್ಟಿದ ಸ್ವಲ್ಪ ದಿನದಲ್ಲೇ ನಾನು ಪತಿಯಿಂದ ದೂರವಾದೆ. ಕೆಲಸಕ್ಕೆ ಹೋಗಲು ಮಗನನ್ನು ದಾದಿಯ ಬಳಿ ಬಿಡಬೇಕಿತ್ತು. ನಂತರ 30ನೇ ವಯಸ್ಸಿನಲ್ಲಿ ನನ್ನ ಅಂಡಾಣುಗಳನ್ನು ಫ್ರೀಜ್ (Egg Freeze) ಮಾಡಿಸಿದೆ.

40ನೇ ವಯಸ್ಸಿಗೆ ವೃತ್ತಿಜೀವನದಲ್ಲಿ ನೆಲೆ ನಿಂತೆ. 50ನೇ ವಯಸ್ಸಿನಲ್ಲಿ ಐವಿಎಫ್ ಮೂಲಕ ಮಗಳಿಗೆ ಜನ್ಮ ನೀಡಿದೆ. ಈಗ ವೈದ್ಯಕೀಯ ಪರೀಕ್ಷೆಗಳ ನಂತರ ಮೂರನೇ ಪ್ರಯತ್ನದಲ್ಲಿ ಮತ್ತೆ ಗರ್ಭಿಣಿಯಾಗಿದ್ದೇನೆ. ಮುಂದಿನ ವರ್ಷ ಮಗು ಹುಟ್ಟುವ ವೇಳೆಗೆ ನನಗೆ 60 ವರ್ಷ ತುಂಬಿರುತ್ತದೆ ಎಂದು ವಿವರಿಸಿದ್ದಾರೆ. ಟ್ರೋಲ್ ಮಾಡಿದವರಿಗೆ ನೇರ ಪ್ರಶ್ನೆ ಕೇಳಿರುವ ರೆನೀ, ನನ್ನ ಅರ್ಧ ವಯಸ್ಸಿನ ಅನೇಕ ಮಹಿಳೆಯರಿಗಿಂತಲೂ ನಾನು ಹೆಚ್ಚು ಫಿಟ್ ಆಗಿದ್ದೇನೆ. ಪ್ರೀತಿಯಿಂದ ಒಂದು ಮಗುವನ್ನು ಈ ಜಗತ್ತಿಗೆ ತಂದು ಚೆನ್ನಾಗಿ ಬೆಳೆಸುವುದು ಸ್ವಾರ್ಥವೇ ಎಂದು ಪ್ರಶ್ನಿಸಿದ್ದಾರೆ.

PREV
Read more Articles on
click me!

Recommended Stories

ನಾಗರಹೊಳೆ ಕಾಡಾನೆ ಮೇಲೆ ಕಲ್ಲೆಸೆದ ಕಿಡಿಗೇಡಿಗಳಿಗೆ ಕಾದಿದೆ ಗ್ರಹಚಾರ: ಸಚಿವ ರಾಮಲಿಂಗಾರೆಡ್ಡಿ ಖಡಕ್ ಆದೇಶ!
ಇದೇ ಮೊದಲ ಬಾರಿಗೆ ಬ್ರೆಜಿಲ್ ಅಮೆಜಾನ್ ಕಾಡಿನಿಂದ ಹೊರಜಗತ್ತಿಗೆ ಬಂದು ಆಹಾರ ಕೇಳಿದ 'ಅವಾ' ಬುಡಕಟ್ಟು ಗುಂಪು! ಅಪರೂಪದ ದೃಶ್ಯ ಸೆರೆ