
ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ರೀಲ್ಸ್ ಮೂಲಕ ಕೆಲವರು ಹೀರೋ ಆಗಿದ್ದು ಇದೆ, ಕೆಲವರು ಜೀರೋ ಆಗಿದ್ದಾರೆ. ರೀಲ್ಸ್ ದಾಸರಾವರು, ಅನಾರೋಗ್ಯ ಪೀಡಿತರಾದವರಿದ್ದಾರೆ, ಕೆಲಸಗಳ ಒತ್ತಡದ ನಡುವೆ ರೀಲ್ಸ್ ನೋಡುತ್ತಾ ಮನಸ್ಸನ್ನು ರಿಲ್ಯಾಕ್ಸ್ ಮಾಡಿಕೊಳ್ಳುವವರು ಇದ್ದಾರೆ. ರೀಲ್ಸ್ನಿಂದಲೇ ಜೀವನ ಮಾಡುವವರೂ ಇದ್ದಾರೆ, ರೀಲ್ಸ್ ನೋಡುತ್ತಾ, ಕೆಲಸ- ಕಾರ್ಯ ಬಿಟ್ಟು ಬೀದಿಗೆ ಬಂದವರೂ ಇದ್ದಾರೆ. ಹೀಗೆ ರೀಲ್ಸ್, ಒಬ್ಬೊಬ್ಬರ ಜೀವನದಲ್ಲಿ ಒಂದೊಂದು ರೀತಿಯ ಪಾತ್ರವನ್ನು ವಹಿಸುತ್ತದೆ.
ಆದರೆ ಇವೆಲ್ಲವುಗಳಿಗಿಂತಲೂ ಡಿಫರೆಂಟ್ ಎನ್ನಿಸುವ ಘಟನೆಯಿಂದ ಕೇರಳದಲ್ಲಿ ನಡೆದಿದೆ. 10 ಸೆಕೆಂಡ್ನ ಒಂದು ರೀಲ್ಸ್ ಒಬ್ಬ ವಿಶೇಷ ಚೇತನ ವ್ಯಕ್ತಿಯ ಜೀವನವನ್ನೇ ಬದಲಿಸಿಬಿಟ್ಟಿದೆ. 10 ವರ್ಷಗಳ ಹಿಂದೆ ಕಾಣೆಯಾಗಿದ್ದ ಈತನಿಗಾಗಿ ಹುಡುಕಿ ಸುಸ್ತಾಗಿದ್ದ ಕುಟುಂಬದವರು ಈ ರೀಲ್ಸ್ ನೋಡಿ, ತಮ್ಮ ಮನೆ ಮಗನನ್ನು ವಾಪಸ್ ಕರೆದುಕೊಂಡು ಬಂದಿರುವ ಭಾವುಕ ಘಟನೆ ನಡೆದಿದೆ.
ಕೇರಳದ ಕೋಳಿಕ್ಕೋಡ್ ಜಿಲ್ಲೆಯ ತಾಮರಶ್ಶೇರಿಯಲ್ಲಿ ಮಹಮ್ಮದ್ ಯಾಸೀರ್ ಎಂಬುವವರು ಸ್ವಾತಂತ್ರ್ಯ ದಿನಾಚರಣೆಯಂದು ವಿಶೇಷ ಚೇತನರ ಆಶ್ರಯ ತಾಣವಾದ 'ಕಾರುಣ್ಯದೀಪಂ ಪ್ರರೀಕ್ಷಾ ಭವನ'ಕ್ಕೆ ಭೇಟಿ ನೀಡಿದ್ದರು. ಅಲ್ಲಿ 10 ಸೆಕೆಂಡ್ ರೀಲ್ಸ್ ಮಾಡಿ ಶೇರ್ ಮಾಡಿದ್ದರು. ಅದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕುತೂಹಲ ಎನ್ನುವಂತೆ,
ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ಕೇರಳದಲ್ಲಿ ಚಿತ್ರೀಕರಿಸಲಾದ 10 ಸೆಕೆಂಡ್‌ಗಳ ವೀಡಿಯೊದಿಂದಾಗಿ, ಸುಮಾರು 10 ವರ್ಷಗಳ ಹಿಂದೆ ಕಾಣೆಯಾಗಿದ್ದ ಜಾರ್ಖಂಡ್ ಮೂಲದ ಯುವಕನೊಬ್ಬ ತನ್ನ ಕುಟುಂಬವನ್ನು ಸೇರಿಕೊಂಡಿದ್ದಾನೆ. ಜಾರ್ಖಂಡ್ನ ಕುಟುಂಬಸ್ಥರೂ ಈ ರೀಲ್ಸ್ ನೋಡಿದರು. ಅವರಿಗೆ ತಮ್ಮ ಕಣ್ಣುಗಳನ್ನೇ ನಂಬಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ, ಆ ರೀಲ್ಸ್ನಲ್ಲಿ ಇದ್ದ ಒಬ್ಬ ವ್ಯಕ್ತಿ ತಮ್ಮ ಮನೆ ಮಗನನ್ನೇ ಹೋಲುತ್ತಿದುದು. 10 ವರ್ಷಗಳ ಹಿಂದೆ ಕಾಣೆಯಾದ ಮಗ, ಇವನೇ ಎಂದು ತಿಳಿದು ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಕೊನೆಗೆ, ಆಶ್ರಮಕ್ಕೆ ಬಂದು ತಮ್ಮ ಮಗನನ್ನು ಕುಟುಂಬಸ್ಥರು ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಜಾರ್ಖಂಡ್ ಮೂಲದ ಯುವಕನೊಬ್ಬ ಹತ್ತು ವರ್ಷಗಳ ಹಿಂದೆ ಮುಂಬೈ ರೈಲು ನಿಲ್ದಾಣದಿಂದ ನಾಪತ್ತೆಯಾಗಿದ್ದ. ಯಾವುದೋ ರೈಲು ಹತ್ತಿಬಿಟ್ಟಿದ್ದ. ಅದು ಕೇರಳದ ಕಡೆಗೆ ಹೋಗುವ ರೈಲಾಗಿತ್ತು. ಅಲ್ಲಿ ಇಳಿದಿದ್ದ ಆತ, ದಿಕ್ಕು ತೋಚದೇ ಕಂಗಾಲಾಗಿದ್ದ. ವಿಶೇಷ ಚೇತನ ಆಗಿದ್ದರಿಂದ ತನ್ನವರ ಬಗ್ಗೆ ಹೇಳಲೂ ಆತನಿಗೆ ಸಾಧ್ಯವಾಗಿರಲಿಲ್ಲ. ಕೊನೆಗೆ, ವಿಶೇಷ ಚೇತನರ ಆಶ್ರಯ ತಾಣವಾದ 'ಕಾರುಣ್ಯದೀಪಂ ಪ್ರರೀಕ್ಷಾ ಭವನ'ಕ್ಕೆ ಆತನನ್ನು ಕರೆದುಕೊಂಡು ಹೋಗಲಾಗಿತ್ತು. ಅವರ ಆರೈಕೆಯಲ್ಲಿ ಆತ ಬೆಳೆಯುತ್ತಿದ್ದ. ರೀಲ್ಸ್ನಿಂದಾಗಿ ಮಗ ಮನೆಯವರಿಗೆ ವಾಪಸ್ ಸಿಕ್ಕಿದ್ದಾನೆ.