
ಬೆಂಗಳೂರು (ಜ.14): ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷ ಗಾದಿಗೇರುತ್ತಿದ್ದಂತೆ ಜಾಗತಿಕ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲ ಶುರುವಾಗಿದೆ. ವೆನುಜುವೇಲ ಅಧ್ಯಕ್ಷ ನಿಕೋಲಸ್ ಮಡುರೊ ಬಂಧನ, ಗ್ರೀನ್‌ಲ್ಯಾಂಡ್ ಖರೀದಿಸುವ ಹಠ ಹಾಗೂ ಇರಾನ್ ಮೇಲೆ ವಿಧಿಸುತ್ತಿರುವ ಕಠಿಣ ಆರ್ಥಿಕ ಸುಂಕಗಳು ಟ್ರಂಪ್ ಅವರ 'ಅಮೆರಿಕಾ ಫಸ್ಟ್' ನೀತಿಯ ಭೀಕರ ರೂಪವನ್ನು ತೋರಿಸುತ್ತಿವೆ.
ಟ್ರಂಪ್ ಅವರ ಈ ನಡೆಗಳನ್ನು ಹಲವರು 'ಸರ್ವಾಧಿಕಾರಿ ಧೋರಣೆ' ಎಂದು ಕರೆಯುತ್ತಿದ್ದಾರೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಅಮೆರಿಕ ಇತರ ದೇಶಗಳ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತಿದೆ ಎಂಬ ಚರ್ಚೆ ಶುರುವಾಗಿದೆ. ಇರಾನ್ ಮೇಲೆ ವಿಧಿಸಿರುವ ಶೇ. 25ರಷ್ಟು ಹೆಚ್ಚುವರಿ ಸುಂಕವು ಭಾರತದ ರಫ್ತು ಮತ್ತು ತೈಲ ಆಮದಿನ ಮೇಲೆ ನೇರ ಪರಿಣಾಮ ಬೀರಲಿದೆ. ಹೀಗಾಗಿ, ಭಾರತ ಸದ್ಯಕ್ಕೆ ಜಾಗರೂಕತೆಯ ನಿಲುವು ತಳೆದಿದ್ದು, ಅಮೆರಿಕದೊಂದಿಗೆ ಮಾತುಕತೆಯ ಮೂಲಕ ಸುಂಕದ ಹೊರೆ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ವಿಶ್ವಸಂಸ್ಥೆಯಂಥ ಜಾಗತಿಕ ಸಂಸ್ಥೆಗಳಿಗೂ ಕ್ಯಾರೆ ಎನ್ನದ ಟ್ರಂಪ್ ಅವರ ಈ 'ದಾದಾಗಿರಿ'ಗೆ ಅಂಕುಶ ಹಾಕುವವರು ಯಾರೂ ಇಲ್ಲದಂತಾಗಿದೆ. ಯುದ್ಧ ಮತ್ತು ಆರ್ಥಿಕ ನಿರ್ಬಂಧಗಳ ಮೂಲಕ ಟ್ರಂಪ್ ತುಳಿಯುತ್ತಿರುವ ದಾರಿ ಇಡೀ ವಿಶ್ವವನ್ನು ಮಹಾ ಗಂಡಾಂತರಕ್ಕೆ ತಳ್ಳುವ ಮುನ್ಸೂಚನೆ ನೀಡುತ್ತಿದೆ.