ನೋವುಗಳನ್ನ ಮುಚ್ಚಿಟ್ಟುಕೊಂಡು ನಗ್ತಾ ನಗಿಸ್ತಾ ಇರ್ತಿದ್ರು ಮಹಾನಟಿ ಸರೋಜಾದೇವಿ. ಹೌದು ಸರೋಜಾದೇವಿ ವೈಯಕ್ತಿಯ ಬದುಕಿನಲ್ಲಿ ಕೂಡ ಎಲ್ಲರಂತೆ ನಾನಾ ನೋವುಗಳಿದ್ವು.
ಬಿ. ಸರೋಜಾದೇವಿ ತಮ್ಮ ವೈಯಕ್ತಿಕ ಬದುಕಿನಲ್ಲಿ ನಾನಾ ನೋವುಗಳನ್ನ ಅನುಭವಿಸಿದ್ರು. ಆದ್ರೆ ಅವರೆಂಥಾ ನಟಿ ಅಂದ್ರೆ ಅವರ ಮುಖದಲ್ಲಿ ಎಂದಿಗೂ ನೋವು ಕಾಣ್ತಾ ಇರಲಿಲ್ಲ. ನೋವುಗಳನ್ನ ಮುಚ್ಚಿಟ್ಟುಕೊಂಡು ನಗ್ತಾ ನಗಿಸ್ತಾ ಇರ್ತಿದ್ರು ಮಹಾನಟಿ ಸರೋಜಾದೇವಿ. ಹೌದು ಸರೋಜಾದೇವಿ ವೈಯಕ್ತಿಯ ಬದುಕಿನಲ್ಲಿ ಕೂಡ ಎಲ್ಲರಂತೆ ನಾನಾ ನೋವುಗಳಿದ್ವು. ಸರೋಜಾದೇವಿ ಅವರಿಗೆ ತಾಯಿ ರುದ್ರಮ್ಮ ಅಂದ್ರೆ ಅತೀವ ಪ್ರೀತಿ. ಸಿನಿಮಾ ಅಂದ್ರೆ ಮೂಗು ಮುರೀತಾ ಇದ್ದ ಕಾಲದಲ್ಲಿ ಮಗಳನ್ನ ಚಿತ್ರರಂಗಕ್ಕೆ ಕಳಿಸಿ, ಬೆಳೆಸಿದವರು ರುದ್ರಮ್ಮನವರು, ಇಂಥಾ ಅಮ್ಮ ಅಂದ್ರೆ ಸರೋಜಮ್ಮನಿಗೆ ಅಗಾಧ ಪ್ರೀತಿ. ಆದ್ರೆ ವೃತ್ತಿ ಜೀವನದ ಉತ್ತುಂಗದಲ್ಲಿ ಇದ್ದಾಗಲೇ ತಾಯಿ ಅಗಲಿದ್ದು ಅವರಿಗೆ ಅತೀವ ದುಃಖ ತಂದಿತ್ತು. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ತಾವು ವಾಸ ಇದ್ದ ಮನೆಗೆ ರುದ್ರಮ್ಮ ಅಂತಲೇ ತಾಯಿ ಹೆಸರಿಟ್ಟಿದ್ರು ಸರೋಜಾದೇವಿ.
ಇನ್ನೂ ಸರೋಜಾದೇವಿ ವೃತ್ತಿಯಲ್ಲಿ ಇಂಜೀನಿಯರ್ ಆಗಿದ್ದ ಶ್ರೀ ಹರ್ಷ ಅವರ ಜೊತೆಗೆ 1967ರಲ್ಲಿ ವಿವಾಹ ಆಗಿದ್ರು. ಇಬ್ಬರದ್ದೂ ಅನುರೂಪ ಜೋಡಿ. ಮದುವೆ ಬಳಿಕವೂ ಪತಿ ಶ್ರೀಹರ್ಷ ಸರೋಜಾದೇವಿ ಅವರ ನಟನಾ ಬದುಕಿಗೆ ಪ್ರೋತ್ಸಾಹ ಕೊಟ್ಟಿದ್ರು. ಆದ್ರೆ 1986ರಲ್ಲಿ ಶ್ರೀ ಹರ್ಷ ಅನಾರೋಗ್ಯದಿಂದ ಸಾವನ್ನಪ್ಪಿದ್ರು. ಆಗಿನಿಂದಲೂ ಸರೋಜಾದೇವಿ ಒಬ್ಬಂಟಿ ಆಗಿದ್ರು. ಕೊನೆವರೆಗೂ ಅಗಲಿದ ಪತಿಯ ನೆನಪಿನಲ್ಲೇ ಜೀವನ ಸಾಗಿಸಿದರು. ಸರೋಜಾದೇವಿ ಅವರಿಗೆ ಮಕ್ಕಳಾಗಲಿಲ್ಲ, ತಮ್ಮ ಸೋದರಿಯರ ಮೂವರು ಮಕ್ಕಳನ್ನ ದತ್ತು ಪಡೆದಿದ್ರು. ಅದ್ರಲ್ಲಿ ಹಿರಿಮಗಳು ಭುವನೇಶ್ವರಿ ಚಿಕ್ಕವಯಸ್ಸಲ್ಲೇ ತೀರಿಹೋಗಿದ್ರು. ಅಗಲಿದ ಮಗಳ ನೆನಪು ಸರೋಜಾದೇವಿಯವರನ್ನ ಕಾಡ್ತಾನೇ ಇತ್ತು. ಅಗಲಿದ ಪುತ್ರಿಯ ಹೆಸರಿನಲ್ಲಿ ಭುವನೇಶ್ವರಿ ದತ್ತಿ ಪ್ರಶಸ್ತಿಯನ್ನ ಸ್ಥಾಪಿಸಿ ಸಾಹಿತ್ಯ ಸಾಧಕರಿಗೆ ಸರೋಜಾದೇವಿ ಪ್ರಶಸ್ತಿ ಕೊಡ್ತಾ ಇದ್ರು.
ತಮ್ಮ ಹುಟ್ಟೂರಿನಲ್ಲಿ ಶಾಲೆಯೊಂದನ್ನ ಸ್ಥಾಪಿಸಿ ಗ್ರಾಮೀಣ ಮಕ್ಕಳ ವಿಧ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ರು. ಅನೇಕ ಶಾಲೆಗಳು, ಆಸ್ಪತ್ರೆಗಳಿಗೆ ಸರೋಜಾದೇವಿ ನೆರವು ನೀಡಿದ್ರು. ತಾಯಿ, ಪತಿ, ಪುತ್ರಿಯ ನೆನಪಿನಲ್ಲಿ ಹಲವು ಸಾಮಾಜಿಕ ಸೇವಾಕಾರ್ಯಗಳನ್ನ ಮಾಡಿದ್ದಾರೆ ಸರೋಜಮ್ಮ. ಸರೋಜಾದೇವಿ ಅವರ ಕಲಾಸೇವೆಯನ್ನ ಗುರುತಿಸಿ ಅನೇಕ ಪ್ರಶಸ್ತಿ, ಗೌರವಗಳು ಒಲಿದು ಬಂದಿವೆ. 1969ರಲ್ಲೇ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಸರೋಜಾದೇವಿ ಅವರಿಗೆ 1992ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಜೀವಮಾನ ಸಾಧನೆ ಪ್ರಶಸ್ತಿ, ಆಂಧ್ರದ ಎನ್.ಟಿಆರ್ ಅವಾರ್ಡ್, ಕರ್ನಾಟಕದಿಂದ ಡಾ.ರಾಜ್ಕುಮಾರ್ ಪ್ರಶಸ್ತಿಗಳು ಸರೋಜಾದೇವಿಗೆ ಒಲಿದು ಬಂದಿದ್ವು. 2006ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟ್ರೇಟ್ ನೀಡಿ ಗೌರವಿಸಿತ್ತು.ಇಂಥಾ ಸಾಧಕಿ, ಕಲಾಸರಸ್ವತಿ ಈಗ ನಮ್ಮಿಂದ ದೂರವಾಗಿದ್ದಾರೆ. ಬಿ.ಸರೋಜಾದೇವಿ ನಮ್ಮೊಂದಿಗೆ ಭೌತಿಕವಾಗಿ ಇರದೇ ಹೋದರೂ ಕಲಾಲೋಕದಲ್ಲಿ ಅವರು ಎಂದೆಂದೂ ಅಮರ..!