
ಅವರಿಬ್ಬರೂ ಕಳೆದ ನಾಲ್ಕು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ನಿನ್ನನ್ನೇ ಮದುವೆಯಾಗ್ತೇನೆ ಅಂತ ಹುಡುಗ ಹುಡುಗಿಗೆ ಪ್ರಾಮೀಸ್ ಕೂಡಾ ಮಾಡಿದ್ದ, ಅದನ್ನು ನಂಬಿದ ಆಕೆ ಕೊನೆಗೆ ಅನುಭವಿಸಿದ್ದು ಮಾತ್ರ ದುರಂತ.
ಪ್ರಿಯಕರನ ಬಣ್ಣ ಬಣ್ಣದ ಮಾತುಗಳನ್ನ ನಂಬಿ ಸರ್ವಸ್ವವನ್ನೂ ಒಪ್ಪಿಸಿದ ಚೆಲುವೆ, ಆತನ ಮೋಸದಾಟಕ್ಕೆ ಬಲಿಯಾಗಿ ಹೆಣವಾಗಿದ್ದಾಳೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕುದರಿಹಾಳ ಗ್ರಾಮದ 25 ವರ್ಷ ವಯಸ್ಸಿನ ಸಿಂಧು ಪ್ರೀತಿ ಪಾಶಕ್ಕೆ ಸಿಲುಕಿ ಜೀವಬಿಟ್ಟ ದುರ್ದೈವಿ.
ಸಿಂಧು ಮೂಲತಃ ಬ್ಯಾಡಗಿ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದ ನಿವಾಸಿ. ತನ್ನ ಅಜ್ಜ ಅಜ್ಜಿ ಜೊತೆಗೆ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದಲ್ಲಿ ವಾಸವಿದ್ದಳು. ಸಿಂಧುಗೆ ತನ್ನ ಗೆಳತಿ ಮೂಲಕ ಪರಿಚಯವಾದವನೇ ಈತ ಶರತ್. ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿ ನಾಲ್ಕು ವರ್ಷ ಜತೆಯಲ್ಲಿ ಸುತ್ತಾಡಿದ್ರು. ಮದುವೆ ಆಗುವುದಾಗಿ ನಂಬಿಸಿ ಆಕೆ ಜತೆ ದೈಹಿಕ ಸಂಪರ್ಕ ಮಾಡಿದ್ದಾನೆ. ಆದ್ರೆ ಅದ್ಯಾವಾಗ ಸಿಂಧು ಮೂರು ತಿಂಗಳ ಗರ್ಭಿಣಿ ಅಂತಾ ಗೊತ್ತಾಯ್ತೋ ಶರತ್ ಉಲ್ಟಾ ಹೊಡೆದಿದ್ದಾನೆ. ಮದುವೆಯಾಗಲ್ಲ ಅಂತಾ ಕ್ಯಾತೆ ತೆಗೆದಿದ್ದಾನೆ. ಇದ್ರಿಂದ ಮನನೊಂದ ಸಿಂಧು ನಿನ್ನೆ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ.