ಗೋಧ್ರಾ ಹತ್ಯಾಕಾಂಡದ ಬಳಿಕ ನಡೆದ ಗುಜರಾತ್ ಗಲಭೆಯ ಕುರಿತಾಗಿ ಬಿಬಿಸಿ ಮಾಡಿರುವ ಸಾಕ್ಷ್ಯಚಿತ್ರವನ್ನು ಕೇರಳದಾದ್ಯಂತ ಪ್ರದರ್ಶನ ಮಾಡಲಾಗಿದೆ. ಎಸ್‌ಎಫ್‌ಐ ನೇತೃತ್ವದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನವಾಗಿದ್ದರೆ, ಬಿಜೆಪಿ ಹಾಗೂ ಬಿಜೆಪಿ ಯುವ ಮೋರ್ಚಾದಿಂದ ರಾಜ್ಯದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿದೆ.
ತಿರುವನಂತಪುರ (ಜ.24): 2002ರ ಗುಜರಾತ್ ಗಲಭೆಗಳ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ 'ಇಂಡಿಯಾ: ಮೋದಿ ಕ್ವಶ್ಚನ್' ಅನ್ನು ಕೇರಳದಾದ್ಯಂತ ಎಸ್‌ಎಫ್‌ಐ ಪ್ರದರ್ಶನ ಮಾಡಿದೆ. ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ ನಡೆಸಿದ್ದ ಈ ಪ್ರದರ್ಶನಕ್ಕೆ ಬಿಜೆಪಿ ಹಾಗೂ ಯುವ ಮೋರ್ಚಾ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿವೆ.
ಕೇರಳ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಲ್ಲಿ ಈ ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡಲಾಗಿದೆ. ಇದರ ಬೆನ್ನಲ್ಲಿಯೇ ಬಿಜೆಪಿ ಹಾಗೂ ಯುವ ಮೋರ್ಚಾ ಕೂಡ ತನ್ನ ಪ್ರತಿಭಟನೆಯನ್ನು ತೀವ್ರ ಮಾಡಿದೆ. ಈ ನಡುವೆ ಸಾಕ್ಷ್ಯಚಿತ್ರಕ್ಕೆ ಅಚ್ಚರಿ ಎನ್ನುವಂತೆ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ ಅವರ ಪುತ್ರ ಅನಿಲ್ ಆಂಟನಿ ವಿರೋಧ ವ್ಯಕ್ತಪಡಿಸಿದ್ದಾರೆ.
ಬ್ಯಾನ್ ಆದರೂ ಹೈದರಾಬಾದ್ ವಿವಿಯಲ್ಲಿ ಮೋದಿ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ: ಕೇರಳ, ಜೆಎನ್‌ಯೂನಲ್ಲೂ ಸ್ಕ್ರೀನಿಂಗ್..!
ಪಾಲಕ್ಕಾಡ್‌ನ ವಿಕ್ಟೋರಿಯಾ ಕಾಲೇಜು ಮತ್ತು ಎರ್ನಾಕುಲಂನ ಸರ್ಕಾರಿ ಕಾನೂನು ಕಾಲೇಜಿನವರೆಗೆ ಯುವ ಮೋರ್ಚಾದಿಂದ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿತು. ಅಲ್ಲಿ ಎಸ್‌ಎಫ್‌ಐ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವ ಘೋಷಣೆ ಮಾಡಿತ್ತು.