ನಟ ದಿನೇಶ್‌ ಮಂಗಳೂರಿಗೆ ಏನಾಗಿತ್ತು, ಸರ್ಜನ್‌ ಆಸ್ಪತ್ರೆಯ ಮುಖ್ಯಸ್ಥ ಡಾ. ವಿಶ್ವೇಶ್ವರ ರಾವ್‌ ಹೇಳಿದ್ದಿಷ್ಟು..

Published : Aug 25, 2025, 03:08 PM IST
dinesh mangaluru

ಸಾರಾಂಶ

ಕನ್ನಡ ಚಿತ್ರರಂಗದ ಹಿರಿಯ ನಟ ದಿನೇಶ್ ಮಂಗಳೂರು (66) ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕುಂದಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕುಟುಂಬದವರ ನಿರ್ಧಾರದಂತೆ ಮೃತದೇಹವನ್ನು ಬೆಂಗಳೂರಿಗೆ ರವಾನಿಸಲಾಗಿದೆ.

ಉಡುಪಿ (ಆ.25): ಕನ್ನಡ ಚಿತ್ರರಂಗದ ಹಿರಿಯ ನಟ ದಿನೇಶ್ ಮಂಗಳೂರು (66) ಕುಂದಾಪುರದ ಸರ್ಜನ್ಸ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೆಜಿಎಫ್‌, ಉಳಿದವರು ಕಂಡಂತೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ದಿನೇಶ್‌ ಮಂಗಳೂರು, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಕುಂದಾಪುರದಲ್ಲಿ ತಂಗಿದ್ದರು. ಕುಟುಂಬದ ನಿರ್ಧಾರದಂತೆ ಅವರ ಮೃತದೇಹವನ್ನು ಬೆಂಗಳೂರಿಗೆ ರವಾನಿಸಲಾಗಿದೆ.

ಹಲವು ವರ್ಷಗಳಿಂದ ಅನಾರೋಗ್ಯ: ದಿನೇಶ್ ಮಂಗಳೂರು ಅವರ ನಿಧನದ ಬಗ್ಗೆ ಮಾಹಿತಿ ನೀಡಿದ ಸರ್ಜನ್ ಆಸ್ಪತ್ರೆ ಮುಖ್ಯಸ್ಥ ಡಾ. ವಿಶ್ವೇಶ್ವರ ರಾವ್, ಸೋಮವಾರ ಉಸಿರಾಟದ ಸಮಸ್ಯೆ ತೀವ್ರಗೊಂಡು ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಿದರು. ಕುಟುಂಬದ ನಿರ್ಧಾರದಂತೆ ಮೃತ ಶರೀರ ಬೆಂಗಳೂರಿಗೆ ರವಾನೆ ಮಾಡಲಾಗಿದೆ ಎಂದು ಸರ್ಜನ್ ಆಸ್ಪತ್ರೆ ಮುಖ್ಯಸ್ಥ ಡಾ. ವಿಶ್ವೇಶ್ವರ ರಾವ್ ಹೇಳಿದ್ದಾರೆ.

ನಟ ದಿನೇಶ್ ಮಂಗಳೂರು ಅವರಿಗೆ 2012ರಿಂದ ಅನಾರೋಗ್ಯ ಇತ್ತು. ಗ್ಯಾಂಗ್ರಿನ್ ಆಗಿ ಬೆರಳುಗಳನ್ನು ಕಟ್ ಮಾಡಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಕಾಪಾಡಿಕೊಂಡಿದ್ದರು. ವರ್ಷದ ಹಿಂದೆ ಅವರಿಗೆ ಸ್ಟ್ರೋಕ್ ಆಗಿತ್ತು. ದೇಹದ ಒಂದು ಭಾಗ ಕಾರ್ಯ ನಿರ್ವಹಿಸುವುದು ಸ್ಥಗಿತಗೊಳಿಸಿತ್ತು. ಫಿಜಿಯೋಥೆರಪಿ ಮಾಡಲಾಗುತ್ತಿತ್ತು. ಇತ್ತೀಚೆಗೆ ಅವರಿಗೆ ಮತ್ತೊಮ್ಮೆ ಬ್ರೈನ್ ಹ್ಯಾಮರೇಜ್ ಉಂಟಾಯಿತು. ಮೆದುಳಿನಲ್ಲಿ ರಕ್ತನಾಳ ಒಡೆದ ಕಾರಣ ಬಹು ಅಂಗಾಂಗ ವೈಫಲ್ಯ ಉಂಟಾಯಿತು. ಬಿಪಿ , ಡಯಾಬಿಟಿಸ್, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಕೊನೆಯದಾಗಿ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸದರು.

ಕನ್ನಡ ಸಿನಿಮಾದ ಬಹುಬೇಡಿಕೆಯ ಪೋಷಕ ನಟರಾಗಿದ್ದ ದಿನೇಶ್‌ ಮಂಗಳೂರು, ಅನಾರೋಗ್ಯದ ಕಾರಣದಿಂದಾಗಿಯೇ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಕಾಂತಾರ ಚಿತ್ರದ ಶೂಟಿಂಗ್‌ ವೇಳೆಯಲ್ಲಿಯೇ ಅವರಿಗೆ ಸ್ಟ್ರೋಕ್‌ ಆಗಿತ್ತು. ಬೆಂಗಳೂರಿನ ಚಿಕಿತ್ಸೆ ಪಡೆದ ಬಳಿಕ ಅವರು ಸರಿಯಾದರೂ, ಮತ್ತೆ ಒಂದು ವಾರದ ಬಳಿಕ ಅಸ್ವಸ್ಥರಾಗಿದ್ದರು. ‘ಕಲಾ ನಿರ್ದೇಶಕ, ಕಲಾವಿದ, ನಿರ್ಮಾಪಕ, ಸನ್ಮಿತ್ರ ದಿನೇಶ್ ಮಂಗ್ಳುರ್ ಇನ್ನಿಲ್ಲ. ಹೋಗಿ ಬಾ ಮಿತ್ರಾ’ ಎಂದು ನಿರ್ದೇಶಕ ಪಿ. ಶೇಷಾದ್ರಿ ಅವರು ಶ್ರದ್ಧಾಂಜಲಿ ಅರ್ಪಿಸಿ ಬರೆದುಕೊಂಡಿದ್ದಾರೆ.

ಖ್ಯಾತ ನಟ ದಿನೇಶ್ ಮಂಗಳೂರು ಅವರು 1964ರಲ್ಲಿ ಜನಿಸಿದರು. ದಿನೇಶ್ ಕಾಲಸಸಿ ವೆಂಕಟೇಶ್ ಪೈ (ದಿನೇಶ್ ಕೆ.ವಿ. ಪೈ) ಎಂಬುದು ಅವರ ಮೂಲ ಹೆಸರು. ಅವರು ತಮ್ಮ ನಟನಾ ವೃತ್ತಿಜೀವನಕ್ಕಾಗಿ ದಿನೇಶ್ ಮಂಗಳೂರು ಎಂಬ ಹೆಸರನ್ನು ಅಳವಡಿಸಿಕೊಂಡರು. ಕಾಲೇಜು ದಿನಗಳಿಂದಲೇ ನಾಟಕಗಳಲ್ಲಿ ಸಕ್ರಿಯರಾಗಿದ್ದ ಅವರು, ನಂತರ ಅಭಿನಯದ ಬಗ್ಗೆ ಕಲಿತು ಚಿತ್ರರಂಗವನ್ನು ಪ್ರವೇಶಿಸಿದರು.

 

PREV
Read more Articles on
click me!

Recommended Stories

ಬಿಜೆಪಿ ದೇಶದ ಬದಲು ಧರ್ಮ ಕಟ್ಟುತ್ತಿದೆ, ಇದರಿಂದ ದೇಶಕ್ಕೆ ಉಪಯೋಗವಿಲ್ಲ: ಕಿಮ್ಮನೆ ರತ್ನಾಕರ್‌
ಉಡುಪಿ: ಬಿಜೆಪಿ ದೇಶ ಕಟ್ಟುವ ಬದಲು ಧರ್ಮ ಕಟ್ಟುತ್ತಿದ್ದಾರೆ: ಕಿಮ್ಮಾನೆ ರತ್ನಾಕರ್