ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ: ಹಿಜಾಬ್ ಹುಡುಗಿಯರ ಪರೀಕ್ಷಾ ಗೈರು ಮುಂದುವರಿದಿದೆ. ದ್ವಿತೀಯ ಪಿಯುಸಿ ವಿಜ್ಞಾನ (Science)ವಿಭಾಗದ ವಿದ್ಯಾರ್ಥಿಗಳು ಇವತ್ತು ಕೆಮೆಸ್ಟ್ರಿ ಪರೀಕ್ಷೆ ಬರೆಯತ್ತಿದ್ದರೆ, ಹಿಜಾಬ್ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿನಿಯರು ಸತತ ತಮ್ಮ ಎರಡನೇ ಪರೀಕ್ಷೆಯನ್ನೂ ಮಿಸ್ ಮಾಡಿದ್ದಾರೆ. ಒಂದು ಅಮೂಲ್ಯ ಶೈಕ್ಷಣಿಕ ವರ್ಷ ಕಳೆದುಕೊಂಡ ಇವರ ನಡೆಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.
ಹಿಜಾಬ್ (Hijab) ಕುರಿತ ವಿಚಾರಣೆ ಸುಪ್ರೀಂಕೋರ್ಟ್ (Supreme Court) ಮೆಟ್ಟಿಲೇರಿದೆ. ಶೀಘ್ರ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಮುಂದೆ ಕೋರಿಕೊಂಡ ಹೊರತಾಗಿಯೂ ಪರೀಕ್ಷೆಗೂ ಹಿಜಾಬ್ ಧರಿಸುವುದಕ್ಕೂ ಸಂಬಂಧವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ ಇದಕ್ಕಾಗಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿನಿಯರಿಗೆ (students) ಮಾತ್ರ ಶಿಕ್ಷಣಕ್ಕಿಂತಲೂ ಧರ್ಮವೇ ಮುಖ್ಯವಾಗಿದೆ. ದ್ವಿತೀಯ ಪಿಯುಸಿ ಜೀವನದ ಒಂದು ಟರ್ನಿಂಗ್ ಪಾಯಿಂಟ್. ಅದರಲ್ಲೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಒಂದೇ ಒಂದು ತರಗತಿಯನ್ನು ಮಿಸ್ ಮಾಡದೆ ಪರೀಕ್ಷೆ ಬರೆಯುತ್ತಾರೆ.
Udupi ಪರೀಕ್ಷೆ ಬರೆಯಲು ಬಂದ ಹಿಜಾಬ್ ಹೋರಾಟಗಾರ್ತಿಯರ ಹೈಡ್ರಾಮಾ
ಹಿಜಾಬ್ ಹೋರಾಗಾರ್ತಿಯರ ಪೈಕಿ ಮೂವರು ವಿಜ್ಞಾನ ವಿಭಾಗದಲ್ಲಿದ್ದು, ಸತತ ತಮ್ಮ ಎರಡನೇ ಪರೀಕ್ಷೆಯನ್ನು ಕೂಡ ಮಿಸ್ ಮಾಡಿಕೊಂಡಿದ್ದಾರೆ. ಇಂದು ಕೆಮೆಸ್ಟ್ರಿ ಪರೀಕ್ಷೆ (chemistry exam) ನಿಗದಿಯಾಗಿತ್ತು. ಪರೀಕ್ಷೆ ಬರೆಯಬೇಕಾಗಿದ್ದ ಅಲ್ಮಾಸ್ (Almas) ಎಂಬ ವಿದ್ಯಾರ್ಥಿನಿ ಈ ಹಿಂದೆಯೇ ಹಾಲ್ ಟಿಕೆಟ್ ಪಡೆದಿದ್ದರು. ಆಯಿಷಾ (Ayesha), ಹಝ್ರಾ (Hazra) ಎಂಬ ಹೆಸರಿನ ಮತ್ತಿಬ್ಬರು ಹೋರಾಟಗಾರ್ತಿಯರು ಹಾಲ್ ಟಿಕೆಟ್ ಕೊಡಾ ಪಡೆದಿರಲಿಲ್ಲ. ಮೊದಲ ಪರೀಕ್ಷೆ ತಪ್ಪಿಸಿಕೊಂಡು ಬಗ್ಗೆ ವ್ಯಾಪಕ ಚರ್ಚೆಯಾದ ಹಿನ್ನೆಲೆಯಲ್ಲಿ ಎರಡನೇ ಪರೀಕ್ಷೆಯಲ್ಲಾದರೂ ಭಾಗವಹಿಸುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಎಲ್ಲಾ ನಿರೀಕ್ಷೆಗಳು ಹುಸಿಯಾಗಿವೆ.
ಹುಡುಗಿಯರು ಮತ್ತೆ ತಮ್ಮ ಹೋರಾಟ ಮುಂದುವರಿಸಿದ್ದಾರೆ. ಹಿಜಬ್ ಧರಿಸಿಕೊಂಡೇ ಪರೀಕ್ಷೆ ಬರೆಯುವ ಬೇಡಿಕೆಗೆ ಅಂಟಿಕೊಂಡಿದ್ದಾರೆ. ಹುಡುಗಿಯರು ಆರಂಭಿಸಿರುವ ಹೋರಾಟದಿಂದ ರಾಜ್ಯದಲ್ಲಿ ಹಲವಾರು ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆ ತಪ್ಪಿಸಿಕೊಂಡಿದ್ದಾರೆ. ಉಡುಪಿ (Udupi) ಜಿಲ್ಲೆಯೊಂದರಲ್ಲೇ ಸುಮಾರು 25 ವಿದ್ಯಾರ್ಥಿನಿಯರು ಪಿಯುಸಿ ಪರೀಕ್ಷೆ ಬರೆದಿಲ್ಲ ಎಂದು ಹೇಳಲಾಗುತ್ತಿದೆ. ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ.
PUC Exams: ಹಿಜಾಬ್ ಬಿಟ್ಟು ಪಿಯು ಪರೀಕ್ಷೆ ಬರೆದ್ರು
ಮಕ್ಕಳ ಗೈರುಹಾಜರಾತಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಹಾಗೂ ಹಿಂದೂ ಮುಖಂಡ ಯಶಪಾಲ್ ಸುವರ್ಣ (Yashpal Suvarna), ಕಟುವಾದ ಮಾತುಗಳಲ್ಲಿ ಟೀಕಿಸಿದ್ದಾರೆ. ಈಗಾಗಲೇ ಫ್ರಾನ್ಸ್ ದೇಶದಲ್ಲಿ ಹಿಜಾಬ್ ಬ್ಯಾನ್ ಕುರಿತಂತೆ ಚರ್ಚೆ ಆರಂಭವಾಗಿದೆ. ನಮ್ಮ ದೇಶದಲ್ಲೂ ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ, ಫ್ರಾನ್ಸ್ ಗೂ ಮುನ್ನವೇ ದೇಶಾದ್ಯಂತ ಹಿಜಾಬ್ ಬ್ಯಾನ್ ಆದರೂ ಅಚ್ಚರಿಯಿಲ್ಲ. ಉಡುಪಿಯಲ್ಲಿ ಹಿಜಾಬ್ ಹೋರಾಟ ಆರಂಭವಾದ ನಂತರ, ಉಂಟಾಗಿರುವ ಧರ್ಮ ಸಂಘರ್ಷವನ್ನು ನೋಡಿದ್ದೇವೆ. ಈಗಾಗಲೇ ವ್ಯಾಪಾರ ಬಹಿಷ್ಕಾರ ಸೇರಿದಂತೆ ಹಲವು ಬಗೆಯ ತೊಂದರೆ ಉಂಟಾಗಿದೆ. ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಯರಿಗೆ ಇನ್ನಾದರೂ ಧರ್ಮಗುರುಗಳು ಆ ಮಕ್ಕಳ ಪೋಷಕರು ಬುದ್ಧಿವಾದ ಹೇಳಬೇಕು. ಇಲ್ಲವಾದರೆ ಮತ್ತಷ್ಟು ಅನರ್ಥಗಳು ಉಂಟಾಗಬಹುದು. ಸಮುದಾಯದ ಬಡವರಿಗೆ ಸಮಸ್ಯೆಗಳಾಗಬಹುದು. ಎಲ್ಲದಕ್ಕೂ ವಿದ್ಯಾರ್ಥಿನಿಯರು ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದ್ದಾರೆ.
ಈ ನಡುವೆ ಸುಪ್ರೀಂಕೋರ್ಟ್ ಹಿಜಾಬ್ ಕುರಿತಾದ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವ ಸೂಚನೆ ದೊರೆತಿದೆ. ಒಟ್ಟಾರೆ ಹಿಜಾಬ್ ಹೋರಾಟ ನಿರ್ಣಾಯಕ ಘಟ್ಟ ತಲುಪಿದೆ. ಕಾನೂನು ಹೋರಾಟ ಏನಾಗುತ್ತೋ ಕಾದು ನೋಡಬೇಕು.