ಕಾಪು ಮಾರಿಪೂಜೆ ಗೆ ಇಂದು ಎರಡನೇ ದಿನ. ಇಂದು ಕೂಡ ಮುಸ್ಲಿಂ ವ್ಯಾಪಾರಿಗಳಿಗೆ ಜಾತ್ರೆ ಯಲ್ಲಿ ಭಾಗವಹಿಸಲು ಅವಕಾಶ ನೀಡಿಲ್ಲ. ಹಿಜಾಬ್ ವಿವಾದ ಈ ಮೂಲಕ ಮತ್ತೊಂದು ತಿರುವು ಪಡೆದುಕೊಂಡಂತಾಗಿದೆ.
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಮಾ.23): ಉಡುಪಿ (Udupi) ಜಿಲ್ಲೆಯ ಕಾಪು (Kapu) ಸೌಹಾರ್ದತೆಗೆ ಹೆಸರಾದ ಊರು. ವಿಶ್ವ ಪ್ರಸಿದ್ಧಿ ಪಡೆದ ಶಂಕರಪುರ ಮಲ್ಲಿಗೆಯನ್ನು ಈ ಊರಿನಲ್ಲಿ ಕ್ರಿಶ್ಚಿಯನ್ನರು ಹೆಚ್ಚಾಗಿ ಬೆಳೆಯುತ್ತಾರೆ, ಈ ಮಲ್ಲಿಗೆ ಹೂವನ್ನು ಮುಸ್ಲಿಂಮರು ವ್ಯಾಪಾರ ನಡೆಸುತ್ತಾರೆ, ಹಿಂದೂಗಳು ಖರೀದಿಸಿ ತಾಯಿ ಮಾರಿ ಅಮ್ಮನಿಗೆ (Mari amma) ಅರ್ಪಿಸುತ್ತಾರೆ. ಹೀಗಿದ್ದ ಸೌಹಾರ್ದತೆಯ ಕೊಂಡಿ ಇದೇ ಮೊದಲ ಬಾರಿಗೆ ಕಳಚಿದೆ. ಎರಡು ದಿನಗಳ ಜಾತ್ರೆಯಲ್ಲಿ ಒಂದೇ ಒಂದು ಮುಸ್ಲಿಂ ವ್ಯಾಪಾರಿಗೆ (Muslims Traders ) ಮಳಿಗೆ ಹಾಕಲು ಅವಕಾಶ ನೀಡಿಲ್ಲ.
ಹೆಚ್ಚಾಗಿ ಇಲ್ಲಿ ಮುಸ್ಲಿಮರು (Muslims) ಕುರಿ-ಕೋಳಿ ಮಾರಾಟ ಮಾಡಲು ಬರುತ್ತಾರೆ. ತಾಯಿಗೆ ಕುರಿ ಮತ್ತು ಕೋಳಿಯನ್ನು ಅರ್ಪಿಸುವುದೇ ಮಾರಿ ಪೂಜೆಯ ಪ್ರಧಾನ ಆಚರಣೆ. ಲಕ್ಷಾಂತರ ಕೋಳಿಗಳು ಅರ್ಪಣೆಯಾಗಿ ಕೋಟ್ಯಾಂತರ ವ್ಯವಹಾರ ನಡೆಯುವ ಜಾತ್ರೆ ಇದು. ಈ ಬಾರಿ ಹಿಂದೂ ವ್ಯಾಪಾರಿಗಳೇ ಕುರಿ,ಕೋಳಿ ಮಾರಾಟ ನಡೆಸಿದ್ದಾರೆ. ಉಳಿದಂತೆ ಕಲ್ಲಂಗಡಿ, ಫ್ಯಾನ್ಸಿ, ಸಿಹಿತಿಂಡಿ, ಜ್ಯೂಸ್, ಪಾರ್ಟಿಗೆ ಗಳ ವ್ಯಾಪಾರದಲ್ಲಿ ಮುಸಲ್ಮಾನರು ತೊಡಗಿಸಿಕೊಳ್ಳುತ್ತಿದ್ದರು.
ಎಲ್ಲಕ್ಕಿಂತ ಮುಖ್ಯವಾಗಿ ತಾಯಿಗೆ ಅರ್ಪಿಸುವ ಮಲ್ಲಿಗೆ ಹೂವಿನ ವ್ಯಾಪಾರದಲ್ಲಿ ಮುಸ್ಲಿಮರ ಮುಂಚೂಣಿಯಲ್ಲಿ ಇರುತ್ತಿದ್ದರು. ಆದರೆ ಈ ಬಾರಿ ಕೇವಲ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.
ZOMATO INSTANT ಸೇವೆ ಪ್ರಕಟಿಸಿದ ಬೆನ್ನಲ್ಲೇ, ಟೀಕೆಗೊಳಗಾದ ಸಂಸ್ಥಾಪಕ ಗೋಯಲ್
ಹಿಜಾಬ್ ತೀರ್ಪು ಬಂದಾಗ ನಡೆದ ಬಂದ್ ವೇಳೆ, ಕಾಪು ತಾಲೂಕಿನಲ್ಲಿ ಶೇಕಡ ನೂರರಷ್ಟು ಮುಸ್ಲಿಂ ವ್ಯಾಪಾರಿಗಳು ತಮ್ಮ ವ್ಯವಹಾರ ಸ್ಥಗಿತಗೊಳಿಸಿದ್ದರು. ಉಡುಪಿ ಜಿಲ್ಲೆಯ ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿ ಕಾಪು ಕೂಡ ಒಂದು, ವ್ಯಾಪಾರ ಬಂದ್ ಗೆ ಪ್ರತಿಕಾರವಾಗಿ ಇದೀಗ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಆರ್ಥಿಕ ಬಹಿಷ್ಕಾರ ಹೇರಲಾಗಿದೆ. ಧಾರ್ಮಿಕ ದತ್ತಿ ಕಾನೂನಿನ ಉಪಯೋಗ ಪಡೆದು ಈ ನಿರ್ಧಾರವನ್ನು ಆಡಳಿತ ಮಂಡಳಿ ತಳೆದಿದೆ.
ಹಿಂದೂ ಧಾರ್ಮಿಕ ಕೇಂದ್ರಗಳ ಆಸುಪಾಸಿನ ಪರಿಸರದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಗುತ್ತಿಗೆ ನೀಡಬಾರದು ಎಂಬ ನಿಯಮಾವಳಿ ಇದೆ. ಆದರೆ ಈ ನಿಯಮಾವಳಿಯ ಬಗ್ಗೆ ಈವರೆಗೆ ಯಾರೂ ಗಮನ ಸೆಳೆದಿರಲಿಲ್ಲ. ಇದೀಗ ಈ ಕಾನೂನು ಮುಂಚೂಣಿಗೆ ಬಂದಿದ್ದು ಕೇವಲ ಕಾಪು ಮಾತ್ರವಲ್ಲ, ಇಲಾಖೆಯ ಆಡಳಿತಕ್ಕೆ ಒಳಪಟ್ಟ ಎಲ್ಲಾ ದೇವಸ್ಥಾನಗಳನ್ನು ನಿಷೇಧ ಮುಂದುವರಿಯುವ ಸಾಧ್ಯತೆಯಿದೆ.
ಎಲ್ಲಿಯವರೆಗೆ ಈ ನಿಷೇಧ ಮುಂದುವರಿಯುತ್ತೆ ಎಂಬ ಪ್ರಶ್ನೆಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಬಜರಂಗದಳ ಪ್ರಾಂತ ಸಂಚಾಲಕ ಸುನೀಲ್ ಕೆಆರ್ ಹಲವು ವಿಚಾರ ಹಂಚಿಕೊಂಡಿದ್ದಾರೆ.
ಮುಂಬರುವ ಚುನಾವಣೆಯ ದೃಷ್ಟಿಯಿಂದ ಆರ್ಥಿಕ ಬಹಿಷ್ಕಾರ ಹೇರಿದ್ದೀರಾ?
ಚುನಾವಣೆ ಮತ್ತು ಮುಸ್ಲಿಮರ ಬಹಿಷ್ಕಾರಕ್ಕೆ ಯಾವುದೇ ಸಂಬಂಧವಿಲ್ಲ, ದೇಶದ ರಾಷ್ಟ್ರೀಯತೆಯನ್ನು ಪ್ರಶ್ನೆ ಮಾಡಿದ್ದಕ್ಕೆ ಈ ಹೋರಾಟ ಆರಂಭವಾಗಿದೆ.ಹೈಕೋರ್ಟ್ ತೀರ್ಪನ್ನು ವಿರೋಧಿಸಿದ್ದಕ್ಕೆ ಈ ಹೋರಾಟ ಆರಂಭವಾಗಿದೆ
ಬಹಿಷ್ಕಾರಕ್ಕೆ ಕೊನೆಯಿಲ್ಲವೇ?
ನೀವು ಬಂದ್ ಮಾಡಿದ್ದೀರಿ ನಾವು ಬಹಿಷ್ಕಾರ ಮಾಡುತ್ತೇವೆ, ಹಿಂದೂ ಸಮಾಜ ಜಾಗೃತಗೊಂಡಿದೆ. ಧಾರ್ಮಿಕ ದತ್ತಿ ಇಲಾಖೆ ಕಾನೂನು ಇದೆ. ಅನ್ಯ ಧರ್ಮೀಯ ವ್ಯಾಪಾರಿಗಳಿಗೆ ಅವಕಾಶವಿಲ್ಲ ಎಂದಿದೆ.
Bank Strike ಬ್ಯಾಂಕ್ ನಲ್ಲಿ ಕೆಲಸ ಕಾರ್ಯಗಳಿದ್ದರೆ ಈ ವಾರದಲ್ಲೇ ಮುಗಿಸಿಕೊಳ್ಳಿ
ಈ ಕಾನೂನು ಮೊದಲೇ ಇತ್ತಲ್ಲವೇ?
ಕಾನೂನ ಇತ್ತು ನಿಜ ಆದರೆ ಈಗ ಹಿಂದೂ ಸ್ವಾಭಿಮಾನಿಯಾಗಿದ್ದಾನೆ. ಹಿಂದೂ ಜಾಗೃತ ಸ್ಥಿತಿಯಲ್ಲಿದ್ದಾನೆ. ಈಗ ಎಲ್ಲವನ್ನೂ ಒಪ್ಪಿಕೊಂಡು ಬದುಕುವ ಸ್ಥಿತಿಯಲ್ಲಿ ಹಿಂದೂ ಸಮಾಜ ಇಲ್ಲ. ಹಿಂದೂ ಪ್ರಶ್ನೆ ಮಾಡುವ ಪರಿಸ್ಥಿತಿ ಬಂದಿದೆ. ಹಿಂದೂಗಳ ಹಣ ಬೇಕು ಆದರೆ ದೇಶದ ವಿರುದ್ಧ ಮಾತನಾಡುತ್ತೀರಿ. ಗೋವುಗಳನ್ನು ಕದ್ದು ಕೊಂಡು ಹೋಗಿ ತಿನ್ನುತ್ತೀರಿ. ಮತ್ತೆ ಬಂದು ನಮ್ಮ ಶೃದ್ದಾ ಕೇಂದ್ರಗಳಲ್ಲಿ ವ್ಯಾಪಾರ ಮಾಡುತ್ತೀರಿ. ಇದು ಸರಿನಾ?
ಆರ್ಥಿಕ ಬಹಿಷ್ಕಾರದಿಂದ ಏನೂ ತೊಂದರೆಯಾಗಿಲ್ಲ ಎಂದು ಎಸ್ಡಿಪಿಐ ಹೇಳುತ್ತದೆಯಲ್ಲ?
ಅದೊಂದು ಭಯೋತ್ಪಾದಕ ಸಂಘಟನೆ. ಶೇಕಡ 20 ಇರುವ ಮುಸಲ್ಮಾನರು ನಮ್ಮ ವ್ಯಾಪಾರ ಬಹಿಷ್ಕರಿಸಿದರೆ ಅಡ್ಡಿ ಇಲ್ಲ. ಭಾರತೀಯರು ಎಲ್ಲರೂ ಒಟ್ಟಾಗಿ ಬದುಕಬೇಕು. ಸೌಹಾರ್ದತೆ ಎಲ್ಲರಿಗೂ ಅನ್ವಯಿಸುತ್ತದೆ. ಇವರು ದೇಶವನ್ನು ಒಪ್ಪುವುದಿಲ್ಲ ಹಿಜಬ್ ತೀರ್ಪನ್ನು ಒಪ್ಪುವುದಿಲ್ಲ. ಹಿಂದೂ ಶೃದ್ದೆಯ ಮೇಲೆ ದಾಳಿ ಮಾಡಿ ಸೌಹಾರ್ದ ಎಂದರೆ ಆಗುತ್ತಾ?
ಮುಸಲ್ಮಾನ ಬಡ ವ್ಯಾಪಾರಿಗಳಿಗೆ ಕಷ್ಟವಾಗುತ್ತಿದೆ ಅನಿಸೋದಿಲ್ಲವಾ?
ಬಡವರು ಹಿಂದೂಗಳಲ್ಲೂ ಇದ್ದಾರೆ. ಹಿಂದೂ ಬಡ ವ್ಯಾಪಾರಿಗಳು ವ್ಯಾಪಾರ ಮಾಡಲಿ. ಇದರಿಂದ ಹಿಂದೂ ಸಮಾಜಕ್ಕೆ ಒಳ್ಳೆಯದಾಗುತ್ತೆ. ಮುಸ್ಲೀಂ ವ್ಯಾಪಾರಿಗಳನ್ನು ಬಹಿಷ್ಕರಿಸುವುದು ಒಳ್ಳೆಯ ವಿಚಾರ. ಮತ್ತಷ್ಡು ದೇವಸ್ಥಾನಗಳಲ್ಲಿ ನಿಷೇಧವಾಗುತ್ತದೆ .ಮುಸಲ್ಮಾನ ವ್ಯಾಪಾರಿಗಳು ಅರ್ಥಮಾಡಿಕೊಳ್ಳಿ.