Udupi Cylinder Blast: ಸ್ಫೋಟಕ್ಕೆ 2 ಬಲಿ, ಮೃತರೊಬ್ಬರ ಪತ್ನಿ 6 ತಿಂಗಳ ಗರ್ಭಿಣಿ

By Suvarna NewsFirst Published Mar 21, 2022, 3:01 PM IST
Highlights

ಉಡುಪಿ ಜಿಲ್ಲೆಯ ಕಾಪು ಮಲ್ಲಾರು ಸಮೀಪದ ಗುಜರಿ ಅಂಗಡಿ ಯೊಂದರಲ್ಲಿ ಅಗ್ನಿ ದುರಂತ ಸಂಭವಿಸಿದೆ. ಇಬ್ಬರು ಅಸುನೀಗಿದ್ದು ಮತ್ತೆ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತರ ಪೈಕಿ ಓರ್ವನ ಪತ್ನಿ ಆರು ತಿಂಗಳ ಗರ್ಭಿಣಿ. ಮತ್ತೋರ್ವನ ಪತ್ನಿ  ಬಾಣಂತಿ ಎಂದು ತಿಳಿದುಬಂದಿದೆ.

ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್, ಉಡುಪಿ

ಕಾಪು (ಮಾ.21): ಉಡುಪಿ (Udupi) ಜಿಲ್ಲೆಯ ಮಲ್ಲಾರಿನ ಮಸೀದಿಯೊಂದರ ಸಮೀಪದಲ್ಲಿದ್ದ ಬೃಹತ್ ಗುಜರಿ ಅಂಗಡಿಯಲ್ಲಿ ಇಂದು ಸಿಲಿಂಡರ್ ಸ್ಪೋಟಗೊಂಡಿದೆ. (Cylinder Blast) ಸ್ಪೋಟದ ತೀವ್ರತೆಗೆ ಇಬ್ಬರು ಸ್ಥಳದಲ್ಲೇ ಸಜೀವ ದಹನಗೊಂಡಿದ್ದಾರೆ. ಮೃತರನ್ನು ರಜಬ್ ಚಂದ್ರನಗರ ಮತ್ತು ರಜಬ್ ಮಲ್ಲಾರು ಎಂದು ಗುರುತಿಸಲಾಗಿದೆ. ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ ಮತ್ತೋರ್ವ ವ್ಯಕ್ತಿ ನಿಯಾಜ್ ಪರಿಸ್ಥಿತಿ ಗಂಭೀರವಾಗಿದೆ. ನಿಯಾಜ್ ಮೂಲತಃ ಸಾಗರ ದವರು ಎಂದು ತಿಳಿದುಬಂದಿದೆ.

ಈ ಗುಜರಿ ಅಂಗಡಿಯಲ್ಲಿ, ಕಬ್ಬಿಣದ ಪರಿಕರಗಳನ್ನು ತುಂಡರಿಸಲು ಕಟ್ಟಿಂಗ್ ಮಿಷನ್ ಇರಿಸಲಾಗಿದ್ದು, ಇದಕ್ಕೆ ಬಳಸುವ  ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಅವಘಡ ಸಂಭವಿಸಿರುವ ಸಾಧ್ಯತೆ ಇದೆ. ಈ ಗುಜರಿ ಅಂಗಡಿಯಲ್ಲಿ ಮೀನುಗಾರಿಕಾ ಬೋಟ್ ಗಳ ಅವಶೇಷಗಳಿದ್ದು, ಅದರಿಂದಲೂ ಗ್ಯಾಸ್ ಹೊರಹೊಮ್ಮುವ ಸಾಧ್ಯತೆಗಳಿವೆ. ಪ್ರತ್ಯಕ್ಷದರ್ಶಿಯೊಬ್ಬರು ಹೇಳುವ ಪ್ರಕಾರ, ಅಂಗಡಿಯೊಳಗೆ ಇದ್ದಕ್ಕಿದ್ದಂತೆ ಬೆಂಕಿ ಸ್ಫೋಟಗೊಂಡಿದೆ. ಬೆಂಕಿಯ ಕೆನ್ನಾಲಿಗೆ ಯಲ್ಲಿ ಇಬ್ಬರು ಸುಟ್ಟು ಕರಕಲಾಗಿದ್ದಾರೆ. ಉಳಿದ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬರಿಗೆ ಅಗ್ನಿಶಾಮಕದಳದ ಪೈಪ್ ನಿಂದ ಚಿಮ್ಮಿದ ನೀರು ಮುಖಕ್ಕೆ ತಗುಲಿ ಗಂಭೀರ ಗಾಯಗಳಾಗಿವೆ.

ಘಟನೆ ನಡೆದ ತಕ್ಷಣವೇ ಅಗ್ನಿಶಾಮಕದಳ ವನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಸ್ಥಳೀಯವಾಗಿ ಕಾರ್ಯಾಚರಿಸುವ ಕಚ್ಚಾ ತೈಲ ಸಂಗ್ರಹಗಾರ ಐಎಸ್ ಪಿ ಆರ್ ಎಲ್ ಕಂಪನಿಯಿಂದ ಫೈಯರ್ ಇಂಜಿನ್ ತರಿಸಲಾಗಿದೆ. ಬಳಿಕ ಸಾರ್ವಜನಿಕರ ನೆರವಿನೊಂದಿಗೆ ಅಗ್ನಿಶಾಮಕ ದಳದ ಸಹಾಯ ಪಡೆದು ಹಬ್ಬುತ್ತಿದ್ದ ಬೆಂಕಿಯನ್ನು ನಿಯಂತ್ರಣಕ್ಕೆ ಪಡೆಯಲಾಗಿದೆ.

ಚಿಕ್ಕಮಗಳೂರು: ಕಾಡುಕುರಿ‌, ಹಂದಿ ಶಿಕಾರಿ ಮಾಡಿದ ಆರೋಪಿಗಳು ಪರಾರಿ

ಗುಜರಿ ಅಂಗಡಿ ತುಂಬಾ ಹಳೆಯ ಫ್ರಿಜ್ಜು ಟಿವಿ ಇತ್ಯಾದಿ ವಸ್ತುಗಳಿದ್ದು, ನಿರಂತರ ಸ್ಫೋಟದ ಸದ್ದುಗಳು ಕೇಳಿ ಬರುತ್ತಿದ್ದವು ಎಂದು ಆಸುಪಾಸಿನ ಜನ ತಿಳಿಸಿದ್ದಾರೆ. ಅಕ್ಕಪಕ್ಕದಲ್ಲಿ ಹತ್ತಾರು ಮನೆಗಳಿದ್ದು, ಅಗ್ನಿಶಾಮಕದಳದ ಸಕಾಲಿಕ ಕಾರ್ಯಾಚರಣೆಯಿಂದ ಸಂಭಾವ್ಯ ಅವಘಡ ತಪ್ಪಿದೆ. ಇಲ್ಲವಾದಲ್ಲಿ ಅಕ್ಕಪಕ್ಕದ ಮನೆಗಳಿಗೆ ಬೆಂಕಿ ಹಬ್ಬವ ಸಾಧ್ಯತೆಯಿತ್ತು. ಸ್ಥಳಕ್ಕೆ ಮಾಜಿ ಸಚಿವ ವಿನಯಕುಮಾರ ಸೊರಕೆ ಭೇಟಿ ನೀಡಿದ್ದಾರೆ.

ಮೃತರಲ್ಲಿ ರಜಬ್ ಮಲ್ಲಾರು ಎಂಬವರ ಪತ್ನಿ 6 ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಮೊದಲ ಮಗುವನ್ನು ಹಡೆದು 15 ವರ್ಷಗಳ ಬಳಿಕ ಈಕೆ ಗರ್ಭಿಣಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ನಿಯಾಜ್ ಅವರ ಪತ್ನಿ ಬಾಣಂತಿ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಹೇಳಿಕೆ ಯಾರೂ ನೀಡಬಾರದು: ಆರಗ ಜ್ಞಾನೇಂದ್ರ

ಉಡುಪಿ ಜಿಲ್ಲೆಯಲ್ಲಿ ಇದು ಇತ್ತೀಚಿನ ತಿಂಗಳುಗಳಲ್ಲಿ ಗುಜರಿ ಅಂಗಡಿಯಲ್ಲಿ ಸಂಭವಿಸಿದ ಎರಡನೇ ಅಗ್ನಿ ದುರಂತ. ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಗ್ಯಾಸ್ ಸಿಲಿಂಡರ್ ಗಳು ಮತ್ತು ಅಪಾಯಕಾರಿ ವಸ್ತುಗಳನ್ನು ಇರಿಸುವುದರಿಂದ ಇಂತಹ ಅವಘಡಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ
 

click me!