ಆಂಬುಲೆನ್ಸ್ ವಿಳಂಬಕ್ಕೆ ಬ್ರೇಕ್! ಚಾಲಕನಿಗೆ ಸಮಯದ ನಿಗದಿ, ತಪ್ಪಿದ್ರೆ 5000 ರೂ. ದಂಡ

Published : Jul 05, 2026, 01:02 PM IST
ambulance

ಸಾರಾಂಶ

ರಾಜ್ಯದಲ್ಲಿ 108 ಆಂಬುಲೆನ್ಸ್ ಸೇವೆ ವಿಳಂಬದಿಂದಾಗುತ್ತಿರುವ ಸಾವುಗಳನ್ನು ತಡೆಯಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಕರೆ ಮಾಡಿದ 15 ನಿಮಿಷದೊಳಗೆ ಆಂಬುಲೆನ್ಸ್ ಸ್ಥಳಕ್ಕೆ ತಲುಪದಿದ್ದರೆ ಚಾಲಕನಿಗೆ ₹5,000 ದಂಡ ವಿಧಿಸುವ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆಯು ಹೈಟೆಕ್ ಕಂಟ್ರೋಲ್ ರೂಮ್, ಹೊಸ ವಾಹನಗಳು ಮತ್ತು ರಿಯಲ್-ಟೈಮ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ.

ಬೆಂಗಳೂರು: ರಸ್ತೆ ಅಪಘಾತ, ಹೆರಿಗೆ ನೋವು ಅಥವಾ ಹಠಾತ್ ಹೃದಯಾಘಾತ.. ಇಂತಹ ತುರ್ತು ಸಂದರ್ಭಗಳಲ್ಲಿ ಮನುಷ್ಯನ ಜೀವ ಉಳಿಸಲು ಪ್ರತಿ ಸೆಕೆಂಡ್ ಕೂಡ ಅಮೂಲ್ಯ. ಇಂತಹ ಹೊತ್ತಿನಲ್ಲಿ ನಮಗೆ ಮೊದಲು ನೆನಪಾಗುವುದೇ '108 ಆರೋಗ್ಯ ಕವಚ'. ದುರಂತ ಏನೆಂದರೆ ಕರೆ ಮಾಡಿದರೆ ಆಂಬುಲೆನ್ಸ್ ಬರುವುದು ಗಂಟೆಗಟ್ಟಲೆ ತಡವಾಗುತ್ತಿದೆ. ಈ ವಿಳಂಬದಿಂದಾಗಿ ರಾಜ್ಯದಲ್ಲಿ ನೂರಾರು ಪ್ರಾಣಗಳು ಹಾದಿಯಲ್ಲೇ ಹೋಗುತ್ತಿವೆ. ಈ ಗಂಭೀರ ಸಮಸ್ಯೆಗೆ ಮುಕ್ತಿ ಹಾಡಲು ಈಗ ರಾಜ್ಯ ಸರ್ಕಾರ ದೊಡ್ಡ ನಿರ್ಧಾರವೊಂದನ್ನು ಕೈಗೊಂಡಿದೆ.

ರಾಜ್ಯದಲ್ಲಿ ಪ್ರಕೃತಿ ವಿಕೋಪ ಅಥವಾ ದೊಡ್ಡ ದುರಂತಗಳು ಸಂಭವಿಸಿದಾಗ 108 ಆಂಬುಲೆನ್ಸ್‌ಗಳ ಸೇವೆ ಅತ್ಯಗತ್ಯ. ಆದರೆ ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷಗಳು, ಹಳೆಯ ವಾಹನಗಳು ಮತ್ತು ನಿರ್ವಹಣಾ ವೈಫಲ್ಯದಿಂದಾಗಿ ಆಂಬುಲೆನ್ಸ್‌ಗಳು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ತಲುಪುತ್ತಿಲ್ಲ. ನಗರ ಪ್ರದೇಶಗಳಲ್ಲಿ ಅರ್ಧ ಗಂಟೆ, ಗ್ರಾಮೀಣ ಭಾಗದಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಇದರಿಂದಾಗಿ 'ಗೋಲ್ಡನ್ ಅವರ್' (Golden Hour) ಚಿಕಿತ್ಸೆ ಸಿಗದೆ ರೋಗಿಗಳು ಸಾವನ್ನಪ್ಪುತ್ತಿದ್ದಾರೆ ಎಂಬ ದೂರುಗಳು ಹೆಚ್ಚಾಗಿತ್ತು.

ಸರ್ಕಾರದ ಹೊಸ ಹೆಜ್ಜೆ ಏನು?

ಈ ಸಾವಿನ ಸರಣಿಗೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ಈಗ 108 ಆಂಬುಲೆನ್ಸ್ ಸೇವೆಯನ್ನು ಸಂಪೂರ್ಣವಾಗಿ z ಮೇಲ್ದರ್ಜೆಗೇರಿಸಲು ಸಜ್ಜಾಗಿದೆ. ಉಡುಪಿಯಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಿರುವ ಆರೋಗ್ಯ ಸಚಿವ ಯುಟಿ ಖಾದರ್, ಉಡುಪಿ ರಾಜ್ಯದಲ್ಲಿ ಇನ್ನು ಮುಂದೆ ಆ್ಯಂಬುಲೆನ್ಸ್ ಚಾಲಕನಿಗೆ ಸಮಯದ ನಿಗದಿ ಮಾಡಲಾಗುವುದು. ಕರೆ ಮಾಡಿದ ಹದಿನೈದು‌ ನಿಮಿಷದಲ್ಲಿ ನಿಗದಿತ ಸ್ಥಳ ‌ತಲುಪದಿದ್ದರೆ 5 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು.

108 ಆ್ಯಂಬುಲೆನ್ಸ್ 15 ನಿಮಿಷದಲ್ಲಿ ತಲುಪಿಸಿದರೆ 90 ಶೇಖಡ‌ ಸಮಸ್ಯೆ ಸರಿಯಾಗುತ್ತದೆ. ಆ್ಯಂಬುಲೆನ್ಸ್ ತಲುಪುವ ಸಮಯ ಸರಿಯಾಗದಿದ್ದರೆ ವ್ಯವಸ್ಥೆ ಸರಿಯಾಗುವುದಿಲ್ಲ. 700 ರಿಂದ 800 ಆ್ಯಂಬುಲೆನ್ಸ್ ವ್ಯವಸ್ಥಿತವಾಗಿಡಬೇಕಾಗಿದೆ. ಭಾರತದಲ್ಲಿ ‌20 ನಿಮಿಷ ಆದರೆ ನಮ್ಮ ರಾಜ್ಯದಲ್ಲಿ ಇನ್ನು‌ ಮುಂದೆ 15 ನಿಮಿಷದಲ್ಲಿ ತಲುಪಬೇಕು. ಯಾರು ಆ ಸಮಯದಲ್ಲಿ ತಲುಪದಿಲ್ವೋ ಆ ಆ್ಯಂಬುಲೆನ್ಸ್ ಚಾಲಕನಿಗೆ 5 ಸಾವಿರ ದಂಡ. ಎಲ್ಲಿಂದ ಕರೆ ಬಂದರೂ ಹದಿನೈದು ನಿಮಿಷದಲ್ಲಿ ಬಂದು ತಲುಪಬೇಕು. ಈ‌ ಬಗ್ಗೆ ಮಾರ್ಗಸೂಚಿಗಳನ್ನು ತರುತ್ತೇವೆ ಎಂದು ಖಾದರ್ ಭರವಸೆ ನೀಡಿದ್ದಾರೆ.

ಸರ್ಕಾರದ ಪ್ಲಾನ್ ಏನು?

ಹೈಟೆಕ್ ಕಂಟ್ರೋಲ್ ರೂಮ್: ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕೇಂದ್ರೀಕೃತ ಕಂಟ್ರೋಲ್ ರೂಮ್ ಸ್ಥಾಪನೆ. ಇದರಿಂದ ಕರೆ ಮಾಡಿದವರ ನಿಖರ ಸ್ಥಳ (Location) ಪತ್ತೆ ಹಚ್ಚುವುದು ಸುಲಭವಾಗಲಿದೆ.

ರೆಸ್ಪಾನ್ಸ್ ಟೈಮ್ ಕಡಿತ: ನಗರ ಪ್ರದೇಶಗಳಲ್ಲಿ ಕರೆ ಮಾಡಿದ 15 ನಿಮಿಷದೊಳಗೆ ಹಾಗೂ ಗ್ರಾಮೀಣ ಭಾಗದಲ್ಲಿ 20 ರಿಂದ 25 ನಿಮಿಷದೊಳಗೆ ಆಂಬುಲೆನ್ಸ್ ಸ್ಥಳಕ್ಕೆ ತಲುಪುವಂತೆ ಕಟ್ಟುನಿಟ್ಟಿನ ಕ್ರಮ.

ಹೊಸ ವಾಹನಗಳ ಸೇರ್ಪಡೆ: ಹಳೆಯದಾದ ಮತ್ತು ಪದೇ ಪದೇ ಕೆಟ್ಟು ನಿಲ್ಲುವ ಆಂಬುಲೆನ್ಸ್‌ಗಳ ಬದಲಿಗೆ ಸುಸಜ್ಜಿತವಾದ ಹೊಸ 'ಲೈಫ್ ಸಪೋರ್ಟ್' ಆಂಬುಲೆನ್ಸ್‌ಗಳನ್ನು ರಸ್ತೆಗಿಳಿಸಲಾಗುತ್ತಿದೆ.

ರಿಯಲ್ ಟೈಮ್ ಟ್ರ್ಯಾಕಿಂಗ್: ಆಂಬುಲೆನ್ಸ್ ಎಲ್ಲಿದೆ? ಎಷ್ಟು ಹೊತ್ತಿಗೆ ಬರಲಿದೆ? ಎಂಬ ಮಾಹಿತಿಯನ್ನು ಈಗ ಊಬರ್ ಅಥವಾ ಓಲಾ ಮಾದರಿಯಲ್ಲಿ ಮೊಬೈಲ್ ಮೂಲಕವೇ ಟ್ರ್ಯಾಕ್ ಮಾಡುವ ವ್ಯವಸ್ಥೆ ಜಾರಿಗೆ ಬರಲಿದೆ.

ಸಿಬ್ಬಂದಿಗೆ ತರಬೇತಿ: ತುರ್ತು ಸಂದರ್ಭಗಳನ್ನು ನಿಭಾಯಿಸಲು ಚಾಲಕರು ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.

ಜೀವ ಉಳಿಸುವುದೇ ಮೊದಲ ಆದ್ಯತೆ

ಆಂಬುಲೆನ್ಸ್ ವಿಳಂಬದ ಕಾರಣಕ್ಕೆ ಇನ್ಮುಂದೆ ಯಾವುದೇ ಜೀವ ಹೋಗಬಾರದು ಎಂಬ ಉದ್ದೇಶದಿಂದ ಸರ್ಕಾರ ಈ ಬದಲಾವಣೆಗೆ ಮುಂದಾಗಿದೆ. ಟೆಂಡರ್ ಪ್ರಕ್ರಿಯೆ ಮತ್ತು ಹೊಸ ನಿಯಮಗಳ ಜಾರಿಯಿಂದಾಗಿ ಇನ್ನು ಕೆಲವೇ ದಿನಗಳಲ್ಲಿ ರಾಜ್ಯದಾದ್ಯಂತ ವೇಗದ ಮತ್ತು ಗುಣಮಟ್ಟದ 108 ಸೇವೆ ಲಭ್ಯವಾಗಲಿದೆ. ಒಟ್ಟಿನಲ್ಲಿ, ವ್ಯವಸ್ಥೆಯ ಲೋಪದಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದ ಜನಸಾಮಾನ್ಯರಿಗೆ ಸರ್ಕಾರದ ಈ ನಿರ್ಧಾರ ಹೊಸ ಆಶಾಕಿರಣ ಮೂಡಿಸಿದೆ.

PREV
Read more Articles on
click me!

Recommended Stories

ಬೆಂಗಳೂರು ಬಿಟ್ರೆ ಹೂಡಿಕೆಗೆ ರಾಜ್ಯದ ಈ ಜಿಲ್ಲೆಯೇ ಈಗ ನಂಬರ್ 1! ಇದರ ಅದ್ಭುತ ಬೆಳವಣಿಗೆ ಹಿಂದಿರುವ ಅಸಲಿ ಕಾರಣಗಳಿವು!
ಮಹಿಳೆ ಕಟ್ಟಿಹಾಕಿ ಹಲ್ಲೆ ಪ್ರಕರಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಎಫ್ಐಆರ್ ರದ್ದುಗೊಳಿಸಿದ ಹೈಕೋರ್ಟ್