ಇಂದು ರಕ್ಷಾಬಂಧನ. ಅಮೃತಧಾರೆ ಸೀರಿಯಲ್‌ನಲ್ಲಿ ತಂಗಿಯನ್ನು ಧಾರೆ ಎರೆದು ಕೊಡುತ್ತಿದ್ದಾನೆ ಗೌತಮ್. ಅಣ್ಣನ ಪ್ರೀತಿ ಎಂಥಾದ್ದು ಅನ್ನೋದನ್ನು ಈ ಭಾಗದಲ್ಲಿ ಬಹಳ ಎಮೋಶನಲ್ ಆಗಿ ತೋರಿಸಲಾಗಿದೆ.
ಅಣ್ಣ ತಂಗಿ ಪ್ರೀತಿ ಬಗ್ಗೆ ಎಷ್ಟೆಷ್ಟೋ ಸಿನಿಮಾಗಳು ಬಂದು ಹೋಗಿವೆ. ಸೀರಿಯಲ್‌ಗಳಲ್ಲೂ ಅಲ್ಲೊಂದು ಕಡೆ ಇಲ್ಲೊಂದು ಕಡೆ ಬಂದಿದೆ. ಇದೀಗ ರಕ್ಷಾಬಂಧನದ ಟೈಮಲ್ಲೇ 'ಅಮೃತಧಾರೆ' ಸೀರಿಯಲ್‌ನಲ್ಲಿ ಅಣ್ಣ ತಂಗಿಯ ಬಾಂಧವ್ಯ ಯಾವ ರೀತಿಯದ್ದು ಅನ್ನೋದನ್ನು ತೋರಿಸೋ ದೃಶ್ಯಗಳು ಪ್ರಸಾರ ಆಗುತ್ತಿವೆ. ಇದರಲ್ಲಿ ಗೌತಮ್ ದಿವಾನ್ ಬಿಲಿಯನೇರ್ ಬ್ಯುಸಿನೆಸ್‌ಮೆನ್. ತಂದೆಯ ನಂತರ ಇಡೀ ಮನೆಯ ಜವಾಬ್ದಾರಿ ಅವನ ಹೆಗಲಿಗೇರಿದೆ. ತನ್ನಿಡೀ ಕುಟುಂಬಕ್ಕಾಗಿ ಆತ ತನ್ನ ಬದುಕನ್ನೇ ಮುಡಿಪಾಗಿಟ್ಟಿದ್ದಾನೆ. ತನ್ನ ಜೀವಕ್ಕಿಂತ ಹೆಚ್ಚಾಗಿ ಫ್ಯಾಮಿಲಿಯನ್ನು ಪ್ರೀತಿಸುತ್ತಾನೆ. ಇಂಥಾ ಟೈಮಲ್ಲೇ ತನ್ನ ತಂಗಿಯನ್ನು ಧಾರೆ ಎರೆದು ಕೊಡುವ ಘಳಿಗೆ ಬಂದಿದೆ. ಅಣ್ಣ ತಂಗಿಯರು ಚಿಕ್ಕವರಿಂದ ಅದೆಷ್ಟೇ ಕಚ್ಚಾಡಿಕೊಂಡು ಬೆಳೆದಿದ್ದರೂ, ಎಷ್ಟೊಂದು ಸಲ ಫೈಟಿಂಗ್ ಮಾಡಿದ್ದರೂ, ಸಿಟ್ಟು, ಗಲಾಟೆ ಎಲ್ಲ ಮಾಡ್ಕೊಂಡಿದ್ರೂ ಕೆಲವೊಂದು ಟೈಮಲ್ಲಿ ಬಹಳ ಎಮೋಶನಲ್ ಆಗಿ ಬಿಡ್ತಾರೆ.
ಅಂಥಾ ಒಂದು ಟೈಮ್ ಅಂದರೆ ತಂಗಿ ಅಥವಾ ಅಕ್ಕನ ಮದುವೆಯ ಸಂದರ್ಭ. ಅಲ್ಲಿಯವರೆಗೆ ಊಟ, ತಿಂಡಿ, ಬಟ್ಟೆ ಬರೆಯಿಂದ ಹಿಡಿದು ಅಪ್ಪನ ಅಮ್ಮನ ಪ್ರೀತಿಯವರೆಗೆ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದ ಸಹೋದರಿ ತನ್ನನ್ನ ಬಿಟ್ಟು ಹೋಗುತ್ತಿದ್ದಾಳೆ ಅನ್ನೋದೇ ಸಹೋದರಿಗೆ ಬಹಳ ನೋವಿನ ಕ್ಷಣ. ಆದರೆ ಇದೊಂದು ವಿಚಿತ್ರ ಪರಿಸ್ಥಿತಿ. ಅಲ್ಲಿ ನೋವಿನ ಜೊತೆಗೆ ಖುಷಿಯೂ ಇದೆ. ಅಗಲಿಕೆಯ ಜೊತೆಗೆ ಸಂಭ್ರಮವೂ ಇದೆ. ಸಹೋದರಿಯ ಮುಂದಿನ ಲೈಫು ಚೆನ್ನಾಗಾಗಲಿ ಅಂತ ಈ ಜಗತ್ತಿನಲ್ಲಿ ಅಪ್ಪ ಅಮ್ಮನನ್ನು ಬಿಟ್ಟು ಮನಸಾರೆ ಹಾರೈಸುವ ಮತ್ತೊಂದು ಜೀವ ಅಂದರೆ ಅದು ಸಹೋದರನದು.
ಈ ಸೀರಿಯಲ್ ಜೋಡಿಗಳಿಗೆ ರಿಯಲ್ ಲೈಫಲ್ಲೂ ಒಂದಾಗಲು ಫ್ಯಾನ್ಸ್ ಒತ್ತಡ!
ಆದರೆ ಅಮೃತಧಾರೆ ಸೀರಿಯಲ್‌ನಲ್ಲಿ ಗೌತಮ್ ದಿವಾನ್ ಪರಿಸ್ಥಿತಿ ಹೇಗಿದೆ ಅಂದರೆ ಆತ ತನ್ನ ತಂಗಿಗೆ ಹೇಗೆ ಒಬ್ಬ ಅಣ್ಣನೋ ಹಾಗೇ ಒಬ್ಬ ಅಪ್ಪನೂ ಹೌದು. ಅವಳ ಕಿರುನಗೆಯ ದೀಪ ಅವನದೆಯಲ್ಲಿ ಸದಾ ಜೀವಂತ. ಅಂಥಾ ಅಣ್ಣನಿಗೆ ಇದೀಗ ಮತ್ತೆ ಅಕ್ಷರಶಃ ಅಪ್ಪನ ಸ್ಥಾನ ಸಿಕ್ಕಿದೆ. ಅಂದರೆ ಆತನೇ ಕಾಲು ತೊಳೆದು ತನ್ನ ತಂಗಿಯ ಸಂಗಾತಿಯನ್ನು ಬರಮಾಡಿಕೊಳ್ಳುತ್ತಿದ್ದಾನೆ. ತಂದೆಯ ಸ್ಥಾನದಲ್ಲಿ ನಿಂತು ತಾನೇ ಕೈಯ್ಯಾರೆ ಅವಳನ್ನು ಅವಳು ಇಷ್ಟಪಟ್ಟ ಹುಡುಗನೊಂದಿಗೆ ಧಾರೆ ಎರೆದುಕೊಡುತ್ತಿದ್ದಾನೆ. ಒಂದು ಕಡೆ ತನ್ನ ತಂಗಿ ಆರಿಸಿರುವ ಹುಡುಗ ದಿ ಬೆಸ್ಟ್ (The best) ಅನ್ನೋದು ಆತನಿಗೆ ಗೊತ್ತಿದೆ. ಏಕೆಂದರೆ ಮಹಿಮಾಳನ್ನು ಕೈಹಿಡಿದ ಜೀವನ್ ಬಗ್ಗೆ ಆತನಿಗೆ ಈ ಮೊದಲೇ ಸ್ಪಷ್ಟ ಚಿತ್ರಣ ಸಿಕ್ಕಿದೆ. ತಾನೇ ಹುಡುಕಿದರೂ ಇಂಥಾ ಹುಡುಗನನ್ನು ಹುಡುಕುವುದು ಸಾಧ್ಯವಿಲ್ಲ ಅನ್ನೋದು ಗೊತ್ತಿದೆ. ಇನ್ನೊಂದು ಕಡೆ ತಂಗಿಯನ್ನು ಕಳಿಸಿಕೊಡುವುದು ಬಿಸಿ ತುಪ್ಪದ ಹಾಗಿದೆ.
ಈ ಕ್ಷಣವನ್ನು ನೋಡಿ ಬಹಳ ಮಂದಿ ವೀಕ್ಷಕರೂ ಹನಿಗಣ್ಣಾಗಿದ್ದಾರೆ. 'ಗೌತಮ್ ಸರ್ ನ ಈ ರೀತಿ ನೋಡೋದು ಬಹಳ ಕಷ್ಟವಾಗುತ್ತಿದೆ' ಅಂತೆಲ್ಲ ಪ್ರತಿಕ್ರಿಯೆ (comments) ನೀಡುತ್ತಿದ್ದಾರೆ. ಅತ್ತ ಅಣ್ಣ ಗೌತಮ್ ದಿವಾನ್ ಪಾತ್ರದಲ್ಲಿ ರಾಜೇಶ್ ನಟರಂಗ ಬಹಳ ಎಮೋಶನಲ್ ಆಗಿ ನಟಿಸಿದ್ದಾರೆ. ಗೌತಮ್ ಕಷ್ಟವನ್ನು ಅರ್ಥ ಮಾಡಿಕೊಳ್ಳುವ ಪ್ರೌಢ ಹೆಣ್ಮಗಳಾದ ಭೂಮಿಕಾ ಪಾತ್ರದಲ್ಲಿ ಛಾಯಾಸಿಂಗ್ ಆಕ್ಟಿಂಗ್‌ಗೂ (Acting) ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಆರಂಭದಿಂದಲೂ ಟಿಆರ್‌ಪಿಯಲ್ಲೂ (TRP) ಈ ಸೀರಿಯಲ್ ಮುಂದಿದೆ. ಇದೀಗ ತಂಗಿ ಮಹಿಮಾ, ಜೀವನ್ ಎಂಬ ಮಧ್ಯಮ ವರ್ಗದ ಹುಡುಗನ ಕೈ ಹಿಡಿದಿದ್ದಾಳೆ. ಮುಂದೆ ಅವನ ಲೈಫು ನೋವಿನಿಂದ ಕೂಡಿರಲಿದೆ ಅನ್ನೋದನ್ನು ವೀಕ್ಷಕರು ಈಗಲೇ ಗೆಸ್ (guess) ಮಾಡಬಹುದು. ಹಾಗೇ ಗೌತಮ್ ಕೈ ಹಿಡಿದು ಆತನ ಮಡದಿಯಾಗುವ ಭೂಮಿಕಾ ಆತನ ಬದುಕಲ್ಲಿ ಹೇಗೆ ತಂಗಾಳಿಯಾಗಿ ಬರಲಿದ್ದಾಳೆ ಅನ್ನೋದರ ಹಿಂಟ್ ಕೂಡ ಸಿಕ್ಕಿದೆ. ಸದ್ಯಕ್ಕಂತೂ ಈ ಸೀರಿಯಲ್ ಸಖತ್ ಇಂಟರೆಸ್ಟಿಂಗ್ ಆಗಿದೆ.
ಸೆಲೆಬ್ರಿಟಿಗಳನ್ನು ಬಿಟ್ಟಿಲ್ಲ ಕದಿಯೋ ಚಟ: ಚಿಪ್ಸ್ ಪ್ಯಾಕೇಟ್ ಕದ್ದ ಖ್ಯಾತ ನಟನ ಬಂಧನ