
ಉಡುಪಿ (ಜ.28): ಉಡುಪಿಯ ಕೋಡಿಬೆಂಗ್ರೆ ಅಳಿವೆ (ಡೆಲ್ಟಾ ಬೀಚ್) ಬಳಿ ಸಂಭವಿಸಿದ ಭೀಕರ ದೋಣಿ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮೈಸೂರಿನ ಯುವತಿ ದಿಶಾ (23) ಇಂದು ಕೊನೆಯುಸಿರೆಳೆದಿದ್ದಾರೆ. ಗೆಳತಿಯ ಸಾವಿಗೆ ಪ್ರಖ್ಯಾತ ಯೂಟ್ಯೂಬರ್‌ಗಳಾದ ಮಧು ಗೌಡ ಹಾಗೂ ನಿಶಾ ಕಣ್ಣೀರಿಟ್ಟಿದ್ದಾರೆ.
ಸೋಮವಾರ ಮಲ್ಪೆ ಸಮೀಪದ ಪ್ರಸಿದ್ಧ ಪ್ರವಾಸಿ ತಾಣವಾದ ಡೆಲ್ಟಾ ಬೀಚ್‌ನಲ್ಲಿ 14 ಮಂದಿ ಪ್ರವಾಸಿಗರಿದ್ದ ದೋಣಿಯು ಸಮುದ್ರದ ಬಲವಾದ ಅಲೆಗಳ ಹೊಡೆತಕ್ಕೆ ಸಿಲುಕಿ ಮಗುಚಿ ಬಿದ್ದಿತ್ತು. ಈ ವೇಳೆ ನೀರಿನಲ್ಲಿ ಮುಳುಗಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೈಸೂರಿನ ಉದಯಗಿರಿ ನಿವಾಸಿಯಾದ ದಿಶಾ ಅವರು ಇಂದು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.
ಈ ದುರಂತದಲ್ಲಿ ಈಗಾಗಲೇ ಶಂಕರಪ್ಪ ಹಾಗೂ ಸಿಂಧೂ ಎಂಬುವವರು ಮೃತಪಟ್ಟಿದ್ದು, ದಿಶಾ ಅವರ ಸಾವಿನೊಂದಿಗೆ ಒಟ್ಟು ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಮೃತ ದಿಶಾ ಅವರು ಯೂಟ್ಯೂಬರ್ ಮಧು ಗೌಡ ಮತ್ತು ನಿಶಾ ಅವರ ಆಪ್ತ ಸ್ನೇಹಿತೆಯಾಗಿದ್ದು, ಅನೇಕ ಪ್ರಸಿದ್ಧ ವ್ಲಾಗ್‌ಗಳಲ್ಲಿ (Vlogs) ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದರು. ಪ್ರೀತಿಯ ಗೆಳತಿಯನ್ನು ಕಳೆದುಕೊಂಡ ಮಧು ಹಾಗೂ ನಿಶಾ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಕಂಬನಿ ಮಿಡಿದಿದ್ದಾರೆ.
ಪ್ರವಾಸಿಗರು ಲೈಫ್ ಜಾಕೆಟ್ ಧರಿಸದೆ ದೋಣಿ ಪ್ರಯಾಣ ಮಾಡಿದ್ದೇ ಈ ದುರಂತಕ್ಕೆ ಮುಖ್ಯ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದೋಣಿ ಮಾಲೀಕರು ಮತ್ತು ಪ್ರವಾಸಿಗರು ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿದ್ದರಿಂದ ಮೂವರು ಜೀವ ಕಳೆದುಕೊಳ್ಳುವಂತಾಗಿದೆ. ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.