ಸಹಸ್ರಾರು ಮಹಿಳೆಯರಿಗೆ ಮಾದರಿ ಕಣಮ್ಮಾ ನೀನು, ನೀನೇ ಹೀಗಾದ್ರೆ ಹೇಗೆ? ಪುಟ್ಟಕ್ಕನ ವಿರುದ್ಧ ಫ್ಯಾನ್ಸ್​ ಆಕ್ರೋಶ!

By Suvarna NewsFirst Published Apr 2, 2024, 12:50 PM IST
Highlights

ಪುಟ್ಟಕ್ಕನ ವಿರುದ್ಧ ಯಾಕೋ ಅಭಿಮಾನಿಗಳು ಕೋಪ ಮಾಡಿಕೊಂಡಿದ್ದಾರೆ. ಆಗಿನ ಪುಟ್ಟಕ್ಕ ನಮಗೆ ಬೇಕು, ಈ ಪುಟ್ಟಕ್ಕ ಬೇಡ ಅನ್ನುತ್ತಿದ್ದಾರೆ. ಇದಕ್ಕೆ ಕಾರಣ ಏನು?
 

ಪುಟ್ಟಕ್ಕನ ಮಕ್ಕಳು ಸೀರಿಯಲ್​ ಪುಟ್ಟಕ್ಕ ಎಂದರೆ ಸಾಕು, ಎಷ್ಟೋ ಮಂದಿ ಮಹಿಳೆಯರು ಹೆಮ್ಮೆ ಪಡುವುದು ಇದೆ. ಸೀರಿಯಲ್​ ಪುಟ್ಟಕ್ಕನನ್ನೇ ನಿಜಜೀವನದ ಪುಟ್ಟಕ್ಕ ಎಂದುಕೊಂಡಿರುವ ಮಹಿಳೆಯರು ಸಾಕಷ್ಟು ಮಂದಿ ಇದ್ದಾರೆ. ಈ ಪುಟ್ಟಕ್ಕ ತನ್ನ ಹೆಣ್ಣುಮಕ್ಕಳನ್ನು ಸಾಕಲು ಏಕಾಂಗಿಯಾಗಿ ಹೋರಾಟ ಮಾಡಿದ್ದನ್ನು ನೆನಪಿಸಿಕೊಂಡು, ತಮ್ಮ ಜೀವನಗಾಥೆಯನ್ನು ಹೇಳಿಕೊಂಡು ಕಣ್ಣೀರು ಹಾಕಿದ ಮಹಿಳೆಯರು ಅದೆಷ್ಟೋ ಮಂದಿ. ಪುಟ್ಟಕ್ಕನ ಮಕ್ಕಳು ಸೀರಿಯಲ್ ಸಂತೆ ನಡೆದಾಗ, ವೇದಿಕೆ ಮೇಲೆ ನೀವೇ ನಮಗೆ ಮಾದರಿ, ನಮ್ಮದೂ ಇದೇ ಕಥೆ ಎಂದು ಪುಟ್ಟಕ್ಕನ ಪಾತ್ರಧಾರಿ ಉಮಾಶ್ರೀ ಎದುರು ಕಣ್ಣೀರಾಗಿದ್ದಾರೆ ಹಲವರು. ಇದು ಕೇವಲ ಧಾರಾವಾಹಿಯಲ್ಲ, ನಮ್ಮ ಬದುಕಿನ ಚಿತ್ರಣ, ನಿಜ ಜೀವನಕ್ಕೆ ತೀರಾ ಹತ್ತಿರವಾಗಿರುವ ಕಥೆ ಎಂದು ಕೆಲವು ಹೇಳಿದ್ದರೆ, ತಮ್ಮ ಗಂಡ ಕೈಕೊಟ್ಟು ಹೋದಾಗ, ಅಕಾಲದಲ್ಲಿ ಸಾವನ್ನಪ್ಪಿದಾಗ ತಮ್ಮ ಮಕ್ಕಳನ್ನು ಕಷ್ಟಪಟ್ಟು ಸಾಕಿದ ಬಗೆಯನ್ನು ಹೇಳಿಕೊಂಡಿದ್ದಾರೆ. ಆದ್ದರಿಂದ ಈ ಪುಟ್ಟಕ್ಕ ಅದೆಷ್ಟೋ ಮಂದಿಗೆ ದಾರಿದೀವಿಗೆಯಾದವಳು, ಮನೆಮನೆ ಮಾತಾದವಳು.

ಆದರೆ ಏಕೋ ಕೆಲವರು ಇದೀಗ ಈಗಿನ ಪುಟ್ಟಕ್ಕನ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪುಟ್ಟಕ್ಕ ನೀನ್ಯಾಕೆ ಹೀಗಾದೆ ಎನ್ನುತ್ತಿದ್ದಾರೆ. ಸಹಸ್ರಾರು ಹೆಣ್ಣುಮಕ್ಕಳಿಗೆ ಮಾದರಿಯಾದ ನೀನು ಮಾಡುತ್ತಿರುವುದನ್ನು ಸ್ವಲ್ಪವೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇದಕ್ಕೆ ಕಾರಣ, ಮಗಳು ಸಹನಾ. ಇಂದು ಸಹನಾ ಬದಲಾಗಿದ್ದಾಳೆ. ತಾಳ್ಮೆಯ ಪ್ರತಿರೂಪವಾಗಿದ್ದ ಸಹನಾ, ಕಾಳಿಯ ಅವತಾರ ಎತ್ತಿದ್ದಾಳೆ. ಕೆಟ್ಟದ್ದನ್ನು, ದೌರ್ಜನ್ಯವನ್ನು ಸಹಿಸಿಕೊಳ್ಳಬಾರದು ಎನ್ನುವುದನ್ನು ಕಲಿತಿದ್ದಾಳೆ. ಏನೇ  ಆದರೂ ಗಂಡನೇ ಸರ್ವಸ್ವ, ಗಂಡನ ಮನೆಯವರೇ ಶ್ರೇಷ್ಠ, ಸತ್ತರೂ, ಇದ್ದರೂ ಗಂಡನ ಮನೆಯಲ್ಲಿಯೇ ಬದುಕಬೇಕು ಎಂದೆಲ್ಲಾ ಹಿಂದೊಮ್ಮೆ ಅಂದುಕೊಂಡಿದ್ದ ಸಹನಾ ಈಗ ಹಾಗಿಲ್ಲ. ತಪ್ಪಾಗಿದ್ದ ಕಂಡರೆ ಸಿಡಿದೇಳುವ ತನ್ನ ತಂಗಿ ಸ್ನೇಹಳ ಹಾದಿ ಹಿಡಿದಿದ್ದಾಳೆ ಸಹನಾ. ಆದರೆ ಪುಟ್ಟಕ್ಕ?

ರಶ್ಮಿಕಾ ಮಂದಣ್ಣ ಹುಟ್ಟುಹಬ್ಬಕ್ಕೆ ಬರುತ್ತಿದ್ದಾಳೆ 'ಗರ್ಲ್​ಫ್ರೆಂಡ್'​! ಯಾರಿವಳು... ಯಾರಿವಳು...?

ಇಲ್ಲಿ ಸಹನಾಳ ತಾಳ್ಮೆ ಒಡೆದಿದೆ. ತನ್ನನ್ನು ಮತ್ತು ಪತಿ ಮುರುಳಿಯನ್ನು ಬೇರೆ ಮಾಡಲು ಅತ್ತೆ ವಿಷಯಿಕ್ಕಿದ್ದರೂ, ಅದರಿಂದ ತಾನು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೂ ಈ ವಿಷಯವನ್ನು ಒಪ್ಪಿಕೊಳ್ಳಲು ಗಂಡ ರೆಡಿಯೇ ಇಲ್ಲ. ತನ್ನ ಅಮ್ಮ ಹಾಗೆಲ್ಲಾ ಮಾಡಲು ಸಾಧ್ಯವೇ ಇಲ್ಲ ಎನ್ನುತ್ತಿರುವ ಮುರಳಿ, ತನ್ನ ಪತ್ನಿ ಸಹನಾಳ ತಲೆ ಕೆಟ್ಟಿದೆ ಎಂದು ಆಕೆಯನ್ನೇ ಆಸ್ಪತ್ರೆಗೆ ಸೇರಿಸಲು ಹೊರಟವ. ಈಗಲೂ ಸಹನಾಳೇ ಸರಿಯಿಲ್ಲ ಎನ್ನುತ್ತಿದ್ದಾನೆ. ಬಂಗಾರಮ್ಮನ ಪಂಚಾಯಿತಿಯಲ್ಲಿ ಅತ್ತೆ ತಾಳಿ ಬಿಚ್ಚಿಕೊಡುವಂತೆ ತಾಕೀತು ಮಾಡಿದಾಗ ಹಿಂದೆ ಮುಂದೆ ನೋಡದೇ ತಾಳಿ ಬಿಚ್ಚಿಕೊಟ್ಟಿದ್ದಾಳೆ. ಆದರೆ ಗಂಡ ಏನೇ ಮಾಡಿದರೂ ಆತ ಗಂಡನೇ ಎನ್ನುವ ಪುಟ್ಟಕ್ಕನಿಗೆ ಆಕಾಶವೇ ಕುಸಿದುಬಿದ್ದ ಅನುಭವ. ಇದೀಗ ಮನೆ ಸೇರಿರುವ ಸಹನಾ  ಮತ್ತು ಗಂಡನನ್ನು ಹೇಗಾದರೂ ಒಂದು ಮಾಡಬೇಕು ಎನ್ನುವ ಪಣ ತೊಟ್ಟಿದ್ದಾಳೆ ಪುಟ್ಟಕ್ಕ. ಆದರೆ ತನ್ನ ಮೇಲೆಯೇ ಅನುಮಾನ ಪಡುವ ಗಂಡ-ಅತ್ತೆ ಜೊತೆ ಹೋಗಲು ಸಹನಾ ತಯಾರಿಲ್ಲ. ಸತ್ಯ ಗಂಡನಿಗೆ ತಿಳಿಯುವವರೆಗೂ ತಾನು ಹೋಗಲ್ಲ ಎನ್ನುತ್ತಿದ್ದಾಳೆ.

ಒಂದು ಕಡೆ ಇದೇ ವಿಷಯವಾಗಿ ಬಂಗಾರಮ್ಮನ ಪಂಚಾಯಿತಿ ನಡೆಯುತ್ತಿದ್ದರೆ, ಅತ್ತೆಯ ವಿರುದ್ಧವೇ ದೌರ್ಜನ್ಯದ ಕೇಸ್​ ದಾಖಲು ಮಾಡಿದ್ದಾಳೆ ಸಹನಾ. ಅತ್ತೆ ಜೈಲುಪಾಲಾಗಿದ್ದಾಳೆ. ತನ್ನ ತಾಯಿ ವಿರುದ್ಧದ ಕೇಸ್​ ವಾಪಸ್​ ಪಡೆಯುವಂತೆ ಧಮ್ಕಿ ಹಾಕಿದ್ದಾನೆ ಮುರಳಿ. ಸಾಧ್ಯವೇ ಇಲ್ಲ, ಅದೇನಾಗುತ್ತೋ ನೋಡೇ ಬಿಡುತ್ತೇನೆ. ಸತ್ಯವನ್ನೇ ಹೇಳುತ್ತೇನೆ ಎಂದು ಪೊಲೀಸ್​ ಠಾಣೆಗೆ ಹೋಗಿದ್ದಾಳೆ ಸಹನಾ. ಆದರೆ ಇವೆಲ್ಲವನ್ನೂ ಪುಟ್ಟಕ್ಕನಿಗೆ ನೋಡಲು ಆಗುತ್ತಿಲ್ಲ. ಮಗಳಿಗೆ ಬುದ್ಧಿ ಹೇಳುತ್ತಿದ್ದಾಳೆ. ಇವಳು ಈ ಅವತಾರ ಎತ್ತಲು ಸಹನಾ ಕಾರಣ ಎಂದು ಅವಳ ಮೇಲೆ ಹರಿಹಾಯ್ದಿದ್ದಾಳೆ. ಗಂಡನೇ ಸರ್ವಸ್ವ, ತಾಳಿಯೇ ಸರ್ವಸ್ವ ಎಂದೆಲ್ಲಾ ಸಹನಾಳಿಗೆ ಬುದ್ಧಿ ಹೇಳುತ್ತಿದ್ದಾಳೆ ಪುಟ್ಟಕ್ಕ. ಇದ್ಯಾಕೋ ಪುಟ್ಟಕ್ಕನ ಅಭಿಮಾನಿಗಳಿಗೆ ಸರಿ ಕಾಣಿಸುತ್ತಿಲ್ಲ. ತಾಯಿಯ ಜಾಗದಲ್ಲಿ ನಿಂತು ಒಮ್ಮೆ ನೋಡಿದರೆ ಇದು ಸರಿ ಎನಿಸಬಹುದೇನೋ, ಆದರೆ ಮಗಳಿಗೆ ವಿಷ ಹಾಕಿದ ಅತ್ತೆಯ ಮನೆಗೆ ಹೋಗು, ಹೊಂದಾಣಿಕೆ ಮಾಡಿಕೋ, ಹುಚ್ಚಿ ಎಂದು ಹೇಳುತ್ತಿರುವ ಗಂಡನ ಜೊತೆ ಬದುಕು ಎಂದೆಲ್ಲಾ ಹೇಳುವ ಪುಟ್ಟಕ್ಕ ನಮಗೆ ಚೂರೂ ಇಷ್ಟವಾಗುತ್ತಿಲ್ಲ. ನೀನು ಮಾದರಿ ಹೆಣ್ಣು, ಮಾದರಿಯಾಗಿಯೇ ಇರು ಎಂದೆಲ್ಲಾ ಅಭಿಮಾನಿಗಳು ಹೇಳುತ್ತಿದ್ದಾರೆ. 

ಶ್ರೀದೇವಿ ಪುತ್ರಿ ಜಾಹ್ನವಿ ರಾಜಕೀಯ ಧುರೀಣನ ಸೊಸೆಯಾಗೋದು ಪಕ್ಕನಾ? ಅಪ್ಪ ಬೋನಿ ಕಪೂರ್​ ಹೇಳಿದ್ದೇನು?

click me!