
'ದಕ್ಷಿಣ ಭಾರತದ ಕೋಗಿಲೆ' ಎಸ್. ಜಾನಕಿ ಅವರು ಇಹಲೋಕ ತ್ಯಜಿಸಿ ವಾರ ಕಳೆದಿದ್ದರೂ, ಅವರ ನೆನಪುಗಳು ಇನ್ನೂ ಅಭಿಮಾನಿಗಳ ಮನಸ್ಸಿನಲ್ಲಿ ಜೀವಂತವಾಗಿವೆ. ತಮ್ಮ ಅದ್ಭುತ ಗಾಯನದ ಮೂಲಕ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದ ಜಾನಕಮ್ಮನ ಜೀವನದಲ್ಲಿ ಅನೇಕ ಅಪರೂಪದ ನೆನಪುಗಳಿವೆ. ಅವುಗಳಲ್ಲಿ ಈಗ ಹೆಚ್ಚು ಚರ್ಚೆಯಾಗುತ್ತಿರುವುದು ಅವರು ಯಾವಾಗಲೂ ತಮ್ಮೊಂದಿಗೆ ಕೊಂಡೊಯ್ಯುತ್ತಿದ್ದ ಪುಟ್ಟ ಡೈರಿ.
ಜೀ ಕನ್ನಡ ವಾಹಿನಿಯ ಜನಪ್ರಿಯ 'ಸರಿಗಮಪ' ಕಾರ್ಯಕ್ರಮದಲ್ಲಿ ಎಸ್. ಜಾನಕಿ ಅವರಿಗೆ ವಿಶೇಷ 'ಸ್ವರ ನಮನ' ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅವರ ಸಾಕು ಮಗನಂತಿದ್ದ ನವೀನ್ ಕಾರ್ಯಕ್ರಮಕ್ಕೆ ಆಗಮಿಸಿ, ಜಾನಕಮ್ಮ ಜೀವನದ ಅಮೂಲ್ಯ ನೆನಪಾದ ಆ ಡೈರಿಯನ್ನು ಎಲ್ಲರ ಮುಂದಿಟ್ಟರು. ಡೈರಿ ತೆರೆದ ಕ್ಷಣವೇ ಮೊದಲ ಪುಟದಲ್ಲಿ ಶಿರಡಿ ಸಾಯಿಬಾಬಾ ಅವರ ಚಿತ್ರ ಕಾಣಿಸಿಕೊಂಡಿದ್ದು, ಜಾನಕಮ್ಮ ಅವರ ಭಕ್ತಿಯ ಮತ್ತೊಂದು ಮುಖವನ್ನು ಅನಾವರಣಗೊಳಿಸಿತು.
ಆ ಡೈರಿಯ ಪ್ರತಿಯೊಂದು ಪುಟವೂ ಸಂಗೀತದ ನೆನಪುಗಳಿಂದ ತುಂಬಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಹಾಡುಗಳನ್ನು ಜಾನಕಮ್ಮ ಸ್ವತಃ ತಮ್ಮ ಕೈಬರಹದಲ್ಲಿ ಬರೆದುಕೊಂಡಿದ್ದರು. ಮೊಬೈಲ್, ಸೋಶಿಯಲ್ ಮೀಡಿಯಾ ಎಲ್ಲವೂ ಇದ್ದ ಕಾಲದಲ್ಲೂ ಹಾಡಿನ ಸಾಹಿತ್ಯವನ್ನು ಕೈಯಾರೆ ದಾಖಲಿಸಿಕೊಳ್ಳುವ ಅಭ್ಯಾಸವನ್ನು ಅವರು ಎಂದಿಗೂ ಬಿಟ್ಟಿರಲಿಲ್ಲ. ಎಲ್ಲಿಗೆ ಹೋದರೂ ಈ ಡೈರಿಯನ್ನು ಜೊತೆಯಲ್ಲೇ ಇಟ್ಟುಕೊಳ್ಳುತ್ತಿದ್ದರು. ಕಾರ್ಯಕ್ರಮದ ನಿರೂಪಕಿ ಅನುಶ್ರೀ ಆ ಡೈರಿಯನ್ನು ಪ್ರೇಕ್ಷಕರಿಗೆ ತೋರಿಸಿದ ಕ್ಷಣ ಸ್ಟುಡಿಯೋದಲ್ಲಿದ್ದವರನ್ನು ಭಾವುಕರನ್ನಾಗಿಸಿತು.
ಎಸ್. ಜಾನಕಿ ಅವರಿಗೆ ಮುರಳಿಕೃಷ್ಣ ಎಂಬ ಒಬ್ಬನೇ ಪುತ್ರನಿದ್ದು, ಅವರು ಈ ವರ್ಷದ ಜನವರಿಯಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದರು. ಅದರ ಬಳಿಕ ಜಾನಕಮ್ಮ ಅವರ ಆರೈಕೆಯ ಹೊಣೆಯನ್ನು ಮೈಸೂರಿನ ಅಭಿಮಾನಿ ನವೀನ್ ಹೊತ್ತಿದ್ದರು. ಕಾಲಕ್ರಮೇಣ ಅವರಿಬ್ಬರ ಸಂಬಂಧ ಅಭಿಮಾನಿ ಮತ್ತು ಕಲಾವಿದೆಯ ಗಡಿಯನ್ನು ದಾಟಿ ತಾಯಿ-ಮಗನ ಬಾಂಧವ್ಯವಾಗಿ ಬೆಳೆದಿತ್ತು. ಕೇವಲ 13ನೇ ವಯಸ್ಸಿನಲ್ಲೇ ಎಸ್. ಜಾನಕಿ ಅವರ ಅಭಿಮಾನಿಯಾಗಿದ್ದ ನವೀನ್, ಸುಮಾರು ಮೂರು ದಶಕಗಳ ಕಾಲ ಅವರನ್ನು ತಾಯಿಯಂತೆ ಆರಾಧಿಸಿದ್ದಾರೆ.
ನವೀನ್ ಅವರ ಪ್ರೀತಿ, ಕಾಳಜಿ ಮತ್ತು ನಿಸ್ವಾರ್ಥ ಸೇವೆಯಿಂದ ಮನಸೋತ ಜಾನಕಮ್ಮ, ತಮ್ಮ ಐಷಾರಾಮಿ ಜೀವನವನ್ನು ಬದಿಗಿಟ್ಟು ಅವರ ಮನೆಯಲ್ಲೇ ವಾಸಿಸಲು ನಿರ್ಧರಿಸಿದ್ದರು. ಅಪ್ಪಟ ತೆಲುಗು ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದರೂ ಯಾವುದೇ ಜಾತಿ-ಮತದ ಭೇದವಿಲ್ಲದೆ ಅಭಿಮಾನಿಯ ಮನೆಯನ್ನೇ ತಮ್ಮ ಮನೆಯನ್ನಾಗಿಸಿಕೊಂಡಿದ್ದರು. ಪ್ರೀತಿ, ವಿಶ್ವಾಸ ಮತ್ತು ಆತ್ಮೀಯತೆಗೆ ಮಹತ್ವ ನೀಡಿದ್ದ ಎಸ್. ಜಾನಕಿ, ತಮ್ಮ ಜೀವನದ ಕೊನೆಯ ದಿನಗಳನ್ನೂ ನವೀನ್ ಅವರ ಆರೈಕೆಯಲ್ಲೇ ಕಳೆದರು. ಅವರ ಸಂಗೀತದಂತೆಯೇ ಈ ಅಪರೂಪದ ಮಾನವೀಯ ಸಂಬಂಧವೂ ಸದಾ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದೆ ಉಳಿಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.