ತುಳಸಿಯನ್ನು ಮಗ ಸಮರ್ಥ್ ಧಾರೆಯೆರೆದು ಕೊಟ್ಟಿದ್ದಾನೆ. ಈ ವಯಸ್ಸಿನಲ್ಲಿ ಮದುವೆಯಾಕೆ ಎನ್ನುತ್ತಿದ್ದ ಮನಸ್ಸುಗಳು ಈಗ ಬದಲಾಗುತ್ತಿವೆ...
ಕಾಲಕ್ಕೆ ತಕ್ಕಂತೆ ಮನಸ್ಥಿತಿಯೂ ಬದಲಾಗುತ್ತದೆ, ಬದಲಾಗಬೇಕು, ಕಾಲಚಕ್ರ ಉರುಳಿದಂತೆ ಕೆಲವಷ್ಟು ಸಂಪ್ರದಾಯಗಳೂ ಬದಲಾಗಲೇಬೇಕು ಎನ್ನುವ ಮಾತನ್ನು ಹಲವರು ಆಡುವುದು ಇದೆ. ಅದೊಂದು ಕಾಲವಿತ್ತು. ಗಂಡ ಸತ್ತಾಗ ಹೆಣ್ಣು ಕೂಡ ಗಂಡನ ಚಿತೆಯನ್ನು ಏರಿ ಸತಿ ಎನಿಸಿಕೊಳ್ಳುತ್ತಿದ್ದಳು. ಜೀವಂತವಾಗಿ ಪತಿಯ ಚಿತೆಯನ್ನು ಏರುವ ಆ ಸಂಪ್ರದಾಯವನ್ನು ನೆನಪಿಸಿಕೊಂಡರೆ ಮೈ ಝುಂ ಎನ್ನಿಸುವುದು. ಪತ್ನಿ ಸತ್ತರೆ ಗಂಡನಿಗೆ ಇನ್ನೊಂದು ಮದುವೆ ನಡೆಯುತ್ತಿತ್ತು. ಆದರೆ ಅಂದು ಹೆಣ್ಣಿನ ಪಾತ್ರ ಅಷ್ಟೇ. ಆಕೆಯನ್ನು ಸಜೀವವಾಗಿ ದಹಿಸುವಾಗ ಬಹುಶಃ ಯಾರಿಗೂ ಏನೂ ಅನ್ನಿಸುತ್ತಿರಲಿಲ್ಲವೆ? ಅಷ್ಟು ಕಠೋರ ಸಮಾಜ ನಮ್ಮದಾಗಿತ್ತೆ ಎನ್ನುವುದು ಈಗ ಅನ್ನಿಸದೇ ಇರಲಾರದು. ಆದರೂ ಹೆಣ್ಣಿನ ಮೇಲೆ ಸಂಪ್ರದಾಯದ ಹೆಸರಿನಲ್ಲಿ ದೌರ್ಜನ್ಯ, ಕ್ರೌರ್ಯ, ಹಿಂಸೆ ಈಗಲೂ ಇಲ್ಲವೆಂದೇನಲ್ಲ. ಅಲ್ಲಲ್ಲಿ ಇಂಥ ಕ್ರೌರ್ಯಗಳನ್ನು ನೋಡುತ್ತಲೇ ಇರುತ್ತೇವೆ.
ಅದರಲ್ಲಿಯೂ ವಿಧವೆಯೊಬ್ಬಳಿಗೆ ಮರು ಮದುವೆ ಎನ್ನುವುದು ಇಂದಿಗೂ ಎಷ್ಟೋ ಮನೆಗಳಲ್ಲಿ ನುಂಗಲಾಗದ ವಿಷಯವೇ. ಗಂಡ ಕಳೆದುಕೊಂಡ ಹೆಣ್ಣನ್ನು ಅದೆಷ್ಟೋ ಶಾಸ್ತ್ರ, ಸಂಪ್ರದಾಯಗಳಿಂದ ದೂರ ಇಡುವುದು ಅದೆಷ್ಟು ಕಡೆಗಳಲ್ಲಿ ಇಂದಿಗೂ ಇಲ್ಲ? ಇನ್ನು ಮರು ಮದುವೆ ಎನ್ನುವುದು ದೂರದ ಮಾತೇ. ಅದರಲ್ಲಿಯೂ ಎತ್ತರಕ್ಕೆ ಬೆಳೆದು ನಿಂತ ಮಕ್ಕಳು ಇರುವಾಗ ಅಮ್ಮನಿಗೆ ಮದುವೆಯೆ? ಅಬ್ಬಾ ಭಾರತದಲ್ಲಂತೂ ಸದ್ಯದ ಸ್ಥಿತಿಯಲ್ಲಿ ಇದನ್ನು ಅರಗಿಸಿಕೊಳ್ಳದ ಮನಸ್ಥಿತಿಗಳು ಅದೆಷ್ಟೋ. ಆದರೆ ಇದಕ್ಕೆ ಮಿಗಿಲಾಗಿ ನಿಂತಿರುವುದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು ಶುಭಮಸ್ತು ಸೀರಿಯಲ್. ಮಕ್ಕಳಿಗೆ ಮದುವೆಯಾಗಿದೆ. ಖುದ್ದು ಮಾವ ಮತ್ತು ಸೊಸೆಯೇ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ಈ ಸೀರಿಯಲ್ ಆರಂಭದಲ್ಲಿ ಇದರ ಬಗ್ಗೆ ಆಡಿಕೊಂಡು ನಕ್ಕವರು ಹಲವರೇ ಇದ್ದಾರೆ ಬಿಡಿ. ಇದು ಸೀರಿಯಲ್, ನಿಜ ಜೀವನದಲ್ಲಿ ಸಾಧ್ಯವೇ ಇಲ್ಲ ಎಂದವರೂ ಇದ್ದಾರೆ.
undefined
ಎಷ್ಟು ಸಲ ಸಿಹಿಯನ್ನು ಕಿಡ್ನಾಪ್ ಮಾಡಿಸ್ತೀರಾ? ಸೀತಾರಾಮ ವಿರುದ್ಧ ರೊಚ್ಚಿಗೆದ್ದ ಸೀರಿಯಲ್ ಪ್ರೇಮಿಗಳು
ಆದರೆ ಇದೀಗ ಕೆಲವು ಮಟ್ಟಿಗಾದರೂ ಮನಸ್ಥಿತಿಗಳು ಬದಲಾದ ಹಾಗೆ ಕಾಣಿಸುತ್ತಿವೆ. ಇದಕ್ಕೆ ಸಾಕ್ಷಿಯಾಗಿ ನಿಂತಿದೆ ಇದೀಗ ಬಿಡುಗಡೆಯಾಗಿರುವ ಸೀರಿಯಲ್ ಪ್ರೊಮೋಕ್ಕೆ ಬಂದಿರುವ ಕಮೆಂಟ್ಗಳು. ತುಳಸಿ ಮತ್ತು ಮಾಧವ್ ಮದುವೆಯಾಗಿ ಒಂದು ವರ್ಷ ಆಗಿರುವ ಹಿನ್ನೆಲೆಯಲ್ಲಿ ಅವರ ಮದುವೆಯನ್ನು ಮತ್ತೊಮ್ಮೆ ಮಾಡಿದ್ದಾರೆ ಕುಟುಂಬದವರು. ಇದಕ್ಕೆ ಕಾರಣವೂ ಇದೆ. ಅದೇನೆಂದರೆ ಇವರು ಮದುವೆಯಾದ ಸ್ಥಿತಿಯೇ ಬೇರೆಯಾದದ್ದು. ತುಳಸಿಯ ಮಾವ ದತ್ತ ಖುದ್ದು ನಿಂತು ತನ್ನ ಸೊಸೆ ಮತ್ತು ಮಾಧವ್ ಮದುವೆ ಮಾಡಿಸಿದ್ದ. ಆದರೆ ಮದುವೆಯ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಇದೇ ಕಾರಣಕ್ಕೆ ತುಳಸಿಯನ್ನು ಕಂಡರೆ ಎಲ್ಲರೂ ಉರಿದು ಬೀಳುತ್ತಿದ್ದರು. ಇದೀಗ ತುಳಸಿ ಎಲ್ಲರಿಗೂ ಹತ್ತಿರವಾಗಿರುವ ಕಾರಣ, ಮದುವೆಯನ್ನು ತಾವು ನೋಡಿಲ್ಲ ಎನ್ನುವ ಕಾರಣ ನೀಡಿ ಮತ್ತೊಮ್ಮೆ ಮದುವೆ ಮಾಡಿಸಿದ್ದಾರೆ. ಅತ್ತ ಸಮರ್ಥ್ ತಮ್ಮ ಅಮ್ಮನಿಗೆ ಧಾರೆ ಸೀರೆ ತಂದಿದ್ದರೆ, ಇತ್ತ ಅವಿ ಕೂಡ ಅಮ್ಮನಿಗೆ ಧಾರೆ ಸೀರೆ ತಂದಿದ್ದ. ಇಬ್ಬರ ಸೀರೆಯನ್ನು ಹೇಗೆ ಉಡುವುದು ಎಂದು ತಿಳಿಯದೇ ಪೇಚಿಗೆ ಸಿಲುಕಿದ್ದಳು ತುಳಸಿ. ಇದೀಗ ಇಬ್ಬರಿಗೂ ನ್ಯಾಯ ಒದಗಿಸಿದ್ದಾಳೆ ತುಳಸಿ, ಇಬ್ಬರೂ ಕೊಟ್ಟ ಸೀರೆಯಲ್ಲಿ ವಿಭಿನ್ನ ರೀತಿಯಲ್ಲಿ ಉಟ್ಟು ಬಂದಿದ್ದಾಳೆ. ಅತ್ತ ಮಾಧವ್ನನ್ನು ಮದುಮಗನನ್ನಾಗಿ ಮಾಡಲಾಗಿದೆ. ಅಮ್ಮನ ಮೇಲೆ ಬೆಟ್ಟದಷ್ಟು ಪ್ರೀತಿ ಇದ್ದರೂ ಹೇಳದೇ ಮದುವೆಯಾದ ಕಾರಣಕ್ಕೆ ಹುಸಿಮುನಿಸು ತೋರುತ್ತಿದ್ದ ಸಮರ್ಥ್ ಅಮ್ಮನನ್ನು ಧಾರೆ ಎರೆದು ಕೊಟ್ಟಿದ್ದಾನೆ. ಅಮ್ಮಾ ಎನ್ನುವ ಬದಲು ಹೆತ್ತ ಮಗನೇ ಮೇಡಂ ಎನ್ನುತ್ತಿರುವ ಕಾರಣ, ಆ ಅಮ್ಮನ ಮನಸ್ಸು ಅದೆಷ್ಟು ಭಾರವಾಗಿತ್ತು. ಇದೀಗ ಮಗ ಧಾರೆ ಎರೆದು ಕೊಟ್ಟಿದ್ದಕ್ಕೆ ತುಳಸಿ ಖುಷಿಯಾಗಿದ್ದಾಳೆ. ಮಗನಿಗೆ ಪ್ರೀತಿಯ ಧಾರೆ ಹರಿಸಿದ್ದಾಳೆ. ತುಳಸಿಯನ್ನು ಮನೆಯಿಂದ ಬೀಳ್ಕೊಡುವಾಗ ಮಗ ಸಮರ್ಥ್ ಕೂಡ ಕಣ್ಣೀರಾಗಿದ್ದಾನೆ. ಅಮ್ಮ-ಮಗನ ಈ ಸುಂದರ ಕ್ಷಣವನ್ನು ನೋಡಿರುವ ನೆಟ್ಟಿಗರು, ಇವರಿಬ್ಬರ ಅಭಿನಯಕ್ಕೆ ಫಿದಾ ಆಗಿದ್ದಾರೆ. ತುಳಸಿಯ ಬಾಳು ಚೆನ್ನಾಗಿ ಇರಲಿ ಎಂದು ಹಾರೈಸುತ್ತಿದ್ದಾರೆ.
ಈ ಮೊದಲು ಮದುವೆಯ ಪ್ರೊಮೋ ಬಿಡುಗಡೆ ಮಾಡಿದಾಗ ಮದುವೆ ಓಕೆ, ಹನಿಮೂನ್, ಸೀಮಂತ ಎಲ್ಲಾ ತೋರಿಸಬೇಡಿ ಎಂದು ಕೆಲವು ನೆಟ್ಟಿಗರು ಕಾಲೆಳೆದಿದ್ದರು. ಇದರ ಹೊರತಾಗಿಯೂ ತುಳಸಿಯಂಥ ಮಹಿಳೆಯ ಮದುವೆಯನ್ನು ಒಪ್ಪಿಕೊಳ್ಳುವಷ್ಟರ ಮಟ್ಟಿಗೆ ಕೆಲವರ ಮನಸ್ಥಿತಿಯಾದರೂ ಬದಲಾಗಿದೆ ಎನ್ನುವುದು ಕಮೆಂಟ್ಗಳ ಮೂಲಕ ತಿಳಿಯುತ್ತದೆ. ಅಷ್ಟಕ್ಕೂ ಸೀರಿಯಲ್ಗಳು ಇಂದು ಕೇವಲ ಸೀರಿಯಲ್ಗಳಾಗಿ ಉಳಿದಿಲ್ಲ. ಇದು ಎಷ್ಟೋ ಮನೆ ಮನೆಗಳನ್ನು ತುಂಬಿಬಿಟ್ಟಿವೆ. ಅದು ಹಲವು ಮನಸ್ಸುಗಳ ಮೇಲೆ ಅದರಲ್ಲಿಯೂ ಮಹಿಳೆಯರ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿವೆ. ಇಂಥ ಒಳ್ಳೆಯ ಸಂದೇಶವನ್ನು ಕೊಟ್ಟರೆ ಸಮಾಜದ ಮನಸ್ಥಿತಿಯೂ ಬದಲಾಗುವುದರಲ್ಲಿ ಸಂದೇಹವಿಲ್ಲ ಎಂದು ಕೆಲವು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಮಧ್ಯರಾತ್ರಿಯ ಸ್ನೇಹಿತ ಯಾರು? ಯಾವ ಆಸನ ಇಷ್ಟ.... ಅಂತೆಲ್ಲಾ ಕೇಳಿದ ಪ್ರಶ್ನೆಗೆ ಶಿಲ್ಪಾ ಕೊಟ್ಟ ಉತ್ತರ ವೈರಲ್