
ಒಮ್ಮೊಮ್ಮೆ ಜೀವನದಲ್ಲಿ ಹೀಗೆ ಆಗಿಬಿಡುತ್ತದೆ. ಯಾವುದೋ ಒಂದು ಘಟನೆಯನ್ನು ಅಮ್ಮನ ಸ್ಥಾನದಲ್ಲಿ ನಿಂತು ನೋಡಿದರೆ ಅವಳು ಹೇಳುತ್ತಿರುವುದು, ಮಾಡುತ್ತಿರುವುದು, ತೆಗೆದುಕೊಂಡಿರೋ ನಿರ್ಧಾರ ಎಲ್ಲವೂ ಸರಿಯೆನಿಸುತ್ತದೆ. ಅದೇ ಮಕ್ಕಳ ಸ್ಥಾನದಲ್ಲಿ ನಿಂತು ನೋಡಿದರೆ ಅವರು ಮಾಡುತ್ತಿರುವುದರಲ್ಲಿ ತಪ್ಪೇನೂ ಇಲ್ಲ, ಪರಿಸ್ಥಿತಿ ಹೀಗೆಯೇ ಇರುವಾಗ ಅವರು ಮಾಡ್ತಿರೋದೇ ಸರಿ ಎನಿಸುತ್ತದೆ. ಈಗ ಪುಟ್ಟಕ್ಕನ ಜೀವನದಲ್ಲಿಯೂ ಅದೇ ಸ್ಥಿತಿ. ಒಂದು ಕಡೆ ಪುಟ್ಟಕ್ಕ, ಇನ್ನೊಂದು ಕಡೆ ಸಹನಾ. ಅವರವರ ಸ್ಥಾನದಲ್ಲಿ ನಿಂತು ನೋಡಿದರೆ ಇಬ್ಬರೂ ಸರಿಯೆನಿಸುತ್ತದೆ. ಆದರೆ...?ಇದಕ್ಕೆ ಉತ್ತರ ಕೊನೆಗೂ ಆದರೆಯಾಗಿಯೇ ಉಳಿದುಬಿಡುತ್ತದೆ.
ಯಾವುದೇ ಕಾರಣಕ್ಕೂ ಗಂಡನ ಮನೆಗೆ ಹೋಗುವುದಿಲ್ಲ ಎಂದು ಸಹನಾ ಪಟ್ಟುಹಿಡಿದಿದ್ದಾಳೆ. ಅವಳು ಹೇಳುತ್ತಿರುವುದು ಅಕ್ಷರಶಃ ನಿಜ ಕೂಡ. ವಿಷ ಉಣಿಸಿ ಕೊಲ್ಲಲು ಪ್ರಯತ್ನಿಸಿರೋ ಅತ್ತೆ, ತನ್ನ ಮೇಲೆ ಕಣ್ಣು ಹಾಕಿರೋ ಮೈದುನ, ಇದ್ಯಾವ ಸತ್ಯವನ್ನೂ ಅರಿಯದ, ಸತ್ಯ ಹೇಳಿದರೂ ಒಪ್ಪಿಕೊಳ್ಳಲು ರೆಡಿಯಿಲ್ಲದ ಗಂಡ... ಹೀಗಿರುವಾಗ ಯಾವ ಹೆಣ್ಣು ತಾನೇ ಅಲ್ಲಿ ಉಳಿಯಲು ಸಾಧ್ಯ? ಹೆಸರಿನಂತೆಯೇ ಸಹನಾ ಸಹನಾಮೂರ್ತಿಯೇ ಆಗಿದ್ದಳು. ಆದರೆ ಅತ್ತೆ ವಿಷ ಹಾಕಿ ಕೊಲ್ಲಲು ಬಂದಾಗ ಸಹನಾಳ ತಾಳ್ಮೆ ಒಡೆದಿದೆ. ತನ್ನನ್ನು ಮತ್ತು ಪತಿ ಮುರುಳಿಯನ್ನು ಬೇರೆ ಮಾಡಲು ಅತ್ತೆ ವಿಷಯಿಕ್ಕಿದ್ದರೂ, ಅದರಿಂದ ತಾನು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೂ ಈ ವಿಷಯವನ್ನು ಒಪ್ಪಿಕೊಳ್ಳಲು ಗಂಡ ರೆಡಿಯೇ ಇಲ್ಲ. ತನ್ನ ಅಮ್ಮ ಹಾಗೆಲ್ಲಾ ಮಾಡಲು ಸಾಧ್ಯವೇ ಇಲ್ಲ ಎನ್ನುತ್ತಿರುವ ಮುರಳಿ, ತನ್ನ ಪತ್ನಿ ಸಹನಾಳ ತಲೆ ಕೆಟ್ಟಿದೆ ಎಂದು ಆಕೆಯನ್ನೇ ಆಸ್ಪತ್ರೆಗೆ ಸೇರಿಸಲು ಹೊರಟವ. ಈಗಲೂ ಸಹನಾಳೇ ಸರಿಯಿಲ್ಲ ಎನ್ನುತ್ತಿದ್ದಾನೆ. ಹೀಗಿರುವಾಗ ಗಂಡನಿಗೆ ಡಿವೋರ್ಸ್ ಕೊಡಲು ರೆಡಿಯಾಗಿದ್ದಾಳೆ ಸಹನಾ.
ಶ್ರೇಷ್ಠಾ v/s ಪೂಜಾ: ಇಬ್ಬರಲ್ಲಿ ಗೆಲ್ಲುವವರು ಯಾರು? ಕುಸುಮಾಗೆ ಸತ್ಯ ಗೊತ್ತಾಗತ್ತಾ?
ಆದರೆ ಅಮ್ಮ ಪುಟ್ಟಕ್ಕನ ಸ್ಥಾನದಲ್ಲಿ ನಿಂತು ನೋಡಿದರೆ? ಬಂಗಾರಮ್ಮನ ಪಂಚಾಯಿತಿಯಲ್ಲಿ ಅತ್ತೆ ತಾಳಿ ಬಿಚ್ಚಿಕೊಡುವಂತೆ ತಾಕೀತು ಮಾಡಿದಾಗ ಹಿಂದೆ ಮುಂದೆ ನೋಡದೇ ಸಹನಾ ತಾಳಿ ಬಿಚ್ಚಿಕೊಟ್ಟಾಗಲೇ ಪುಟ್ಟಕ್ಕನಿಗೆ ಬರಸಿಡಿಲು ಬಡಿದಿತ್ತು. ಗಂಡ ಏನೇ ಮಾಡಿದರೂ ಆತ ಗಂಡನೇ ಎನ್ನುವ ಪುಟ್ಟಕ್ಕನಿಗೆ ಆಕಾಶವೇ ಕುಸಿದುಬಿದ್ದ ಅನುಭವ. ಇದೀಗ ಮನೆ ಸೇರಿರುವ ಸಹನಾ ಮತ್ತು ಗಂಡನನ್ನು ಹೇಗಾದರೂ ಒಂದು ಮಾಡಬೇಕು ಎನ್ನುವ ಪಣ ತೊಟ್ಟಿದ್ದಾಳೆ ಪುಟ್ಟಕ್ಕ. ಆದರೆ ತನ್ನ ಮೇಲೆಯೇ ಅನುಮಾನ ಪಡುವ ಗಂಡ-ಅತ್ತೆ ಜೊತೆ ಹೋಗಲು ಸಹನಾ ತಯಾರಿಲ್ಲ. ಡಿವೋರ್ಸ್ ಬೇಕಾದ್ರೆ ಕೊಡುತ್ತೇನೆ ಎನ್ನುತ್ತಿದ್ದಾಳೆ. ತನ್ನ ಕಣ್ಣೆದುರೇ ಮಗಳ ಸಂಸಾರ ಹಾಳಾಗುವುದನ್ನು ಯಾವ ತಾಯಿ ತಾನೆ ನೋಡಿಯಾಳು. ಅವಳದ್ದು ಒಂದೇ ಮಾತು. ಅಳಿಯ ಮತ್ತು ಮಗಳನ್ನು ಒಟ್ಟಿಗೇ ಕುಳ್ಳರಿಸಿ ಇರುವ ವಿಷಯವನ್ನು ಸಮಾಧಾನದಿಂದ ಮಾತನಾಡಿ ಸತ್ಯದ ಅರಿವು ಮಾಡಿಸುವುದು. ಈ ಮೂಲಕ ಮಗಳ ಬದುಕನ್ನು ಹಸನುಗೊಳಿಸುವುದು. ಆದರೆ ಏನೇ ಹೇಳಿದರೂ ಗಂಡ ಸತ್ಯ ಒಪ್ಪಲು ರೆಡಿ ಇಲ್ಲದ್ದರಿಂದ ಅದು ಸಾಧ್ಯವೇ ಇಲ್ಲ ಎನ್ನುವುದುದ ಸಹನಾ ಮಾತು.
ಈ ನೋವಿನ ವಿಷಯವನ್ನು ಬಂಗಾರಮ್ಮನ ಎದುರು ಸಹನಾ ಹೇಳಿಕೊಂಡಿದ್ದಾಳೆ. ಎಲ್ಲರಿಗೂ ಆಕೆಯ ಅತ್ತೆ ಕೆಟ್ಟವಳು ಎನ್ನುವ ಸತ್ಯ ಗೊತ್ತು. ಅದಕ್ಕಾಗಿಯೇ ಬಂಗಾರಮ್ಮ ಹಾಲು ಒಡೆದುಹೋಗಿದೆ. ಈಗ ಸರಿ ಮಾಡಲು ಬರುವುದಿಲ್ಲ ಎಂದಾಗ, ಪುಟ್ಟಕ್ಕ ಒಡೆದು ಹೋದ ಹಾಲಿನಿಂದಲೂ ಸಿಹಿ ಮಾಡಿ ಬಡಿಸಬಹುದಲ್ಲವೆ ಎನ್ನುತ್ತಿದ್ದಾಳೆ. ಅಲ್ಲಿಯೂ ಅವಳಿಗೆ ಒಳ್ಳೆಯದ್ದೇ ಕಾಣುತ್ತಿದೆಯೇ ವಿನಾ ಮಗಳ ಜೀವನ ಹಾಳಾಗುವುದನ್ನು ನೋಡಲು ಆಗುತ್ತಿಲ್ಲ. ಒಡೆದ ಹಾಲಿನಲ್ಲಿ ಸಿಹಿ ಮಾಡುವಷ್ಟು ಸುಲಭ ಈಗಿನ ಮಕ್ಕಳ ಸಂಸಾರದಲ್ಲಿ ಸಾಧ್ಯವಿಲ್ಲ, ಅದೆಲ್ಲಾ ನಮ್ಮ ಕಾಲದಲ್ಲಾಯ್ತು ಎನ್ನುತ್ತಿದ್ದಾಳೆ ಬಂಗಾಮ್ಮ. ಯಾರು ಸರಿ ಇಲ್ಲಿ?
ಬಿಂಕದ ಸಿಂಗಾರಿ ಎಂದ ಶ್ರೀರಸ್ತು ಶುಭಮಸ್ತು ಸೊಸೆಯಂದಿರು: ಅಲ್ಲೂ ಹೀಗೆ ಇರೋಕೆ ಏನಾಗತ್ತೆ ಕೇಳಿದ ಫ್ಯಾನ್ಸ್...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.