ವಾರದಲ್ಲಿಯೇ ಅಪ್ಪ-ಅಮ್ಮನನ್ನು ಅಗಲಿದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ! ನೇತ್ರದಾನ ಮಾಡಿ ಧನ್ಯತೆ

By Suchethana DFirst Published Sep 19, 2024, 6:05 PM IST
Highlights

ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ವಿಲನ್​ ರೋಲ್ ಮಾಡುತ್ತಿರುವ ನಟಿ ಅಕ್ಷತಾ ಮಾಯಸಂದ್ರ ಅವರ ಅಪ್ಪ-ಅಮ್ಮ ವಾರದ ಅಂತರದಲ್ಲಿ ಅಗಲಿದ್ದಾರೆ. ಕಣ್ಣುಗಳನ್ನು ದಾನ ಮಾಡಲಾಗಿದ್ದು, ಪತಿ ರಾಧಾಕೃಷ್ಣ ಕೌಂಡಿನ್ಯ ಭಾವುಕ ನುಡಿನಮನ ಹೀಗೆ ಸಲ್ಲಿಸಿದ್ದಾರೆ. 
 

‘ಪುಟ್ಟಕ್ಕನ ಮಕ್ಕಳು’ ಸೀರಿಯಲ್​ನಲ್ಲಿ ಸಹನಾ ಅತ್ತೆಯಾಗಿ ವಿಲನ್​ ಪಾತ್ರ ಮಾಡುತ್ತಿರುವ ನಟಿ ಅಕ್ಷತಾ ಮಾಯಸಂದ್ರ ಅವರು ಒಂದೇ ವಾರದಲ್ಲಿಯೇ ತಮ್ಮ ತಂದೆ ಮತ್ತು ತಾಯಿಯನ್ನು ಅಗಲಿದ್ದಾರೆ. ನನ್ನರಸಿ ರಾಧೆ ಸೇರಿದಂತೆ ಕೆಲವು ಸೀರಿಯಲ್​ಗಳಲ್ಲಿ ನಟಿಸಿರುವ ಅಕ್ಷತಾ ಅವರು ಪಾಲಕರ ಕಣ್ಣುಗಳನ್ನು ದಾನ ಮಾಡುವ ಮೂಲಕ ದೃಷ್ಟಿಹೀನರ ಬಾಳಿನಲ್ಲಿ ಹೊಸ ಚೈತನ್ಯ ತುಂಬಿದ್ದಾರೆ.  ಅಕ್ಷತಾ ಅವರು, ಕಿರುತೆರೆಯ ಕಲಾವಿದೆ ಮಾತ್ರವಲ್ಲದೇ ರಂಗಭೂಮಿ ಕಲಾವಿದೆಯೂ ಹೌದು, ಲೇಖಕಿ, ಕಲಾ ಮಾರ್ಗದರ್ಶಿಯೂ ಆಗಿದ್ದಾರೆ. ಅಕ್ಷತಾ ಅವರ ಪತಿ ರಾಧಾಕೃಷ್ಣ ಕೌಂಡಿನ್ಯ ಅವರು ಪ್ರಕಾಶಕರಾಗಿದ್ದು, ಬರಹಗಾರರು ಹೌದು. 

ತಮ್ಮ ಅತ್ತೆ ಮತ್ತು ಮಾವನ ಸಾವಿನ ಕುರಿತು ಅವರು ಅದ್ಭುತ ಸಾಲುಗಳಿಂದ ಭಾವುಕರಾಗಿರುವ ಬರಹವೊಂದನ್ನು ಫೇಸ್​ಬುಕ್​ ಪೇಜ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಅವರ ಈ ಪೋಸ್ಟ್​ ಸಾವು-ಬದುಕು ಹಾಗೂ ಅಪ್ಪ-ಅಮ್ಮ ಸತ್ತಾಗ ಉಂಟಾಗುವ ನೋವು ಎಲ್ಲವುಗಳನ್ನೂ ಹಿಡಿದಿಟ್ಟಿದೆ. 
ಅವರು ಪೋಸ್ಟ್ ಮಾಡಿರುವುದು ಹೀಗಿದೆ: 
 ಬದುಕು ವಿಸ್ಮಯಗಳ ಹುತ್ತ. 
ಯಾವಾಗ ಏನು, ಎಲ್ಲಿಂದ ಹೆಡೆ ಎತ್ತುವುದು ಎಂಬುದೇ ಅನೂಹ್ಯ. 
ವಿನಾಯಕ ಚೌತಿಗೆ ಪೂಜೆ ಮುಗಿಸಿ, ಬದುಕು ಸಾಕೆನಿಸಿ ಮುನ್ನಡೆದರು ಅಕ್ಷತಾಳ ತಾಯಿ. 
ಒಂದಿಷ್ಟಾದರೂ ಅಮ್ಮ ಉಳಿದಿರಲೆಂಬ ಸ್ವಾರ್ಥಕ್ಕೆ ಮಗಳೇ ಮುಂದಾಗಿ ಅಮ್ಮನ ನೇತ್ರದಾನ ಮಾಡಿಸಿದಳು. 
ಅವರ ವಿಯೋಗಕ್ಕೆ ಕಣ್ಣೀರು ಸುರಿಸಿ, ಅವರ ದೇಹವನು ದಹಿಸಿ, ಎದೆಯ ಉರಿಯಾರುವ ಮುನ್ನವೇ ಸಂಗಮಕೆ  ನಡೆದು, ಅಸ್ಥಿಯನು ನೀರ ಒಡಲಿಗೆ ಹಾಕಿ ಬಂದಿದ್ದಷ್ಟೇ...
ಎಲ್ಲರ ಎದೆಯಲ್ಲೂ ಮಡುಗಟ್ಟಿದ ನೋವು. ಅಕ್ಷತಾಗೆ ಅನಪೇಕ್ಷಿತ ಸಂಕಟ. ತಂದೆಯೇ ಪತ್ನಿಯ ಉತ್ತರಕ್ರಿಯೆ ಮಾಡಹೊರಟರು. 
ಅವರ ದೇಹ ದಣಿದಿತ್ತು, ಪ್ರಾಯಶಃ ಮನಸೂ ಬಸವಳಿದಿತ್ತು. ಬಾಳಗೆಳತಿ ದೇವರೆಡೆಗೆ ನಡೆದು ಹೋದದ್ದನ್ನು ಅವರಿಗೆ ಸಹಿಸಲಾಗಲಿಲ್ಲ. ಅದನ್ನೂ ಸಹ ಸಿಹಿಯಾಗಿಯೇ ಸಹಿಸಲು ಯತ್ನಿಸಿದರೇನೋ. ದೇಹದ ಸಕ್ಕರೆ ಮಟ್ಟ ಮಿತಿಮೀರಿ ಹೋಯಿತು.

Latest Videos

ಸೊಸೆಗಾಗಿ ಮಗನನ್ನೇ ಎಳೆದೊಯ್ದ ಅಮ್ಮ! ಜನ ಮೆಚ್ಚಿದ ಅತ್ತೆ ಇವಳೇ ಅಂತಿದ್ದಾರೆ ಫ್ಯಾನ್ಸ್: ನಿಮ್ಮ ಆಯ್ಕೆ ಯಾರು?

ದೇಹ, ಮನಸು ಹದ ತಪ್ಪಿದಾಗ ಆರೋಗ್ಯ ನಿರ್ವಹಣೆಗಾಗಿ ಬದುಕಿನಲ್ಲಿ ಮೊದಲ ಬಾರಿಗೆ ಒಂದು ಆಸ್ಪತ್ರೆವಾಸವೂ ಅವರಿಗಾಯಿತು.
ಇದರ ಮಧ್ಯೆ ತಾಯಿಯ ಊರ್ಧ್ವಗಮನದ ಪಯಣಕ್ಕೆ ಕ್ರಿಯಾದಿಗಳು, ಇತ್ತ ತಂದೆಯವರ ಆರೋಗ್ಯಕ್ಕೆ ಆಸ್ಪತ್ರೆಯ ಕಾರಿಡಾರುಗಳ ಕಾಯುವ ಒತ್ತಡ. ಬಹಳ ಸಂಕಟವಾಯಿತು ನನ್ನ ಬಾಳ ಗೆಳತಿಗೆ. 
ತಾಯಿಯ ಸಾವಿನ, ನೋವಿನ ಕಣ್ಣೀರು ಬತ್ತಿರಲಿಲ್ಲ. ಅದಾಗಲೇ ಆಸ್ಪತ್ರೆಯ ಕಾರಿಡಾರಿನಲ್ಲಿ ತಂದೆಯ ಆರೋಗ್ಯಕ್ಕೆ ಬೇಡುತ್ತಾ ಕಣ್ಣೀರು ಹರಿಸುವ ಪ್ರಸಂಗ.
ಯಾವ ಕಂಬನಿ ನೋವಿನದೋ, ಯಾವ ಕಂಬನಿ ಪ್ರಾರ್ಥನೆಯದೋ ಎಂಬ ಗೊಂದಲ ಗೂಡಿನ ಅಶ್ರುಧಾರೆ.  ಸಾವಿನದೋ, ನೋವಿನದೋ ಎಂಬ ಗೊಂದಲ ಪರಿಹರಿಸಲೆಂಬಂತೆ ನೋವಿನ ಕಣ್ಣೀರನ್ನೂ ಸಾವಿನ ಕಣ್ಣೀರೇ ಆಗಿಸಿದನೇನೋ ಆ ಜಗದೊಡೆಯ.
ಸಾವಿಗಾಗಿ ಅಳುವುದೂ ಸಹ  ಕ್ಲೀಷೆ ಎನಿಸುವ ವಿಚಿತ್ರ ಸಂದರ್ಭವಿದು
When going gets tough, the tough gets going ಎಂಬ ಮಾತು ಕಿವಿಯಲ್ಲಿ ಉಸುರಿದರೋ ಎಂಬಂತೆ ಕಾಲನ ಕರೆಗೆ ಎದುರಾಗಿ ಕಣ್ಣೀರು ತೊಡೆದು ನಿಂತಳು.
ತಂದೆ ಸಹ ಹೋದರು ಎಂದಾಕ್ಷಣವೇ ಮತ್ತೆ ಅವಳ ಸ್ವಾರ್ಥ ಜಾಗೃತವಾಯಿತು. ಮತ್ತೆ ನೇತ್ರದಾನ. 
ಅಕ್ಷತಾಳನ್ನು ಹುಟ್ಟಿದಾರಭ್ಯ ಕಾಪಾಡಿದ ಆ ನಾಲ್ಕು ಕಂಗಳು ಇಂದಿಗೂ ಆಸುಪಾಸಿನಲ್ಲಿಯೇ ಅವಳನ್ನು ಕಾಯುತ್ತಾ ಲೋಕದಲ್ಲಿದೆ ಎಂಬ ಭರವಸೆಯಲ್ಲಿ ಆಕೆ ಲೋಕದ ಜನರ ಕಂಗಳಲ್ಲಿ ತಂದೆ ತಾಯಿಯನ್ನು ಅರಸುತ್ತಾಳೆ.
ನೋವಿನೊಂದಿಗೆ ಮತ್ತು ನೋವನು ಮೀರಿ ಬದುಕು ಸಾಗಿ‌ಸುವುದನ್ನು ಕಲಿಸುತ್ತಿದ್ದಾರೆ ಅನಿಸ್ತದೆ. 
ಅಕ್ಷತಾ ಪ್ರೀತಿಯಿಂದ ಗುನುಗುವ ಗೀತೆಯ ಸಾಲುಗಳಿವು
ಚರಣ ಕಮಲಗಳಿಗೆ ನಮಿಸಿ ಬೇಡಿಕೊಳುವೆ ದೇವನೆ
ಕರುಣಿಸಯ್ಯ ದೀನಬಂಧು ಜೀವಕೋಟಿ ಕಾವನೇ
ಕಷ್ಟ ಸಮಯದಲ್ಲಿ ಕೈಯ ಬಿಡದೆ ಪಾರುಗಾಣಿಸು
ನೀತಿಮಾರ್ಗ ತ್ಯಜಿಸದಂತೆ ನಡೆಸು ನಿತ್ಯ ನಮ್ಮನು
ಇಹದ ಮೋಹ ಜಾಲದಿಂದ ದೂರವಿರಿಸು ಮನವನು
ಶರಣು ಬಂದೆ ಸಲಹೋ ದೇವ 
ಅಭಯ ವರದ ಹಸ್ತನೇ..

ಹೆಣ್ಣಾದ ಮೇಲೆ ದೇವರನ್ನು, ಗಂಡಸರನ್ನು ನೋಡುವಂತಿಲ್ಲ... ಹಾಲು- ಹುಂಜ ಮುಟ್ಟೋಹಾಗಿಲ್ಲ ಮತ್ತು...
 

click me!