
ಬೆಂಗಳೂರು (ಜೂ.23): ಕನ್ನಡ ರಿಯಾಲಿಟಿ ಶೋ 'ಬಿಗ್‌ಬಾಸ್' ಖ್ಯಾತಿಯ ನಿವೇದಿತಾ ಗೌಡ ಹಾಗೂ ಕಿಶನ್ ಬಿಳಗಲಿ ಅವರು ಈಗ ಹೊಸದೊಂದು ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೈಜ ನವಿಲುಗರಿಗಳಿಂದ ತಯಾರಿಸಲಾದ ಉಡುಪುಗಳನ್ನು ಧರಿಸಿ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಹಾಗೂ ವಿಡಿಯೋ ಪ್ರದರ್ಶನ ಮಾಡಿರುವ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧವೂ ಅರಣ್ಯ ಇಲಾಖೆಗೆ ಅಧಿಕೃತ ದೂರು ದಾಖಲಾಗಿದೆ. ಖ್ಯಾತ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಈ ಸಂಬಂಧ ಬೆಂಗಳೂರು ಪ್ರಾದೇಶಿಕ ನಗರ ವಿಭಾಗದ ವ್ಯಾಪ್ತಿಯ ಕಗ್ಗಲಿಪುರ ಅರಣ್ಯ ವಲಯ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದು, ತಕ್ಷಣವೇ ಇಬ್ಬರನ್ನೂ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಭಾರತದ ರಾಷ್ಟ್ರೀಯ ಪಕ್ಷಿಯಾಗಿರುವ ನವಿಲು (Peacock), ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಸಂರಕ್ಷಿಸಲ್ಪಟ್ಟ ಪ್ರಭೇದವಾಗಿದೆ. ನವಿಲಿನ ಗರಿಗಳು, ಅಂಗಾಂಗಗಳು ಅಥವಾ ಅವುಗಳಿಂದ ತಯಾರಿಸಲಾದ ಯಾವುದೇ ವಸ್ತುಗಳ ಅನಧಿಕೃತ ಸಂಗ್ರಹಣೆ, ವಾಣಿಜ್ಯ ವ್ಯಾಪಾರ ಮತ್ತು ಪ್ರದರ್ಶನ ಮಾಡುವುದು ಕಾನೂನುಬಾಹಿರವಾಗಿದೆ.
"ವಿಡಿಯೋದಲ್ಲಿ ಬಳಸಿರುವ ಉಡುಪುಗಳಲ್ಲಿ ಅಸಾಮಾನ್ಯ ಪ್ರಮಾಣದ ನವಿಲು ಗರಿಗಳು ಗೋಚರಿಸುತ್ತಿವೆ. ಇಷ್ಟು ದೊಡ್ಡ ಪ್ರಮಾಣದ ಗರಿಗಳು ಈ ನಟರಿಗೆ ಎಲ್ಲಿಂದ ಬಂದವು? ಅವುಗಳ ಮೂಲ ಯಾವುದು? ಯಾವುದೇ ಅನುಮತಿ ಪತ್ರ ಅಥವಾ ದಾಖಲೆಗಳಿವೆಯೇ ಎಂಬುದರ ಕುರಿತು ಸಮಗ್ರ ತನಿಖೆ ನಡೆಸುವುದು ಅತ್ಯಗತ್ಯವಾಗಿದೆ" ಎಂದು ದಿನೇಶ್ ಕಲ್ಲಹಳ್ಳಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಅನುಯಾಯಿಗಳನ್ನು (Followers) ಹೊಂದಿರುವ ಪ್ರಭಾವಿ ವ್ಯಕ್ತಿಗಳು ಇಂತಹ ವಸ್ತುಗಳನ್ನು ಪ್ರಚಾರಕ್ಕಾಗಿ ಬಳಸುವುದರಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಸಾರ್ವಜನಿಕರಲ್ಲಿ ನವಿಲು ಗರಿಗಳ ಬಳಕೆ ಮಾಡುವುದು ಸುಲಭ ಎನ್ನುವಂತೆ ಮಾಡುತ್ತದೆ. ಇದರಿಂದಾಗಿ ನವಿಲುಗಳ ಮೇಲೆ ಅಕ್ರಮ ಬೇಟೆ ಹಾಗೂ ಕಳ್ಳಸಾಗಣೆ ಚಟುವಟಿಕೆಗಳು ಹೆಚ್ಚಾಗುವ ಆತಂಕವನ್ನು ದೂರುದಾರರು ವ್ಯಕ್ತಪಡಿಸಿದ್ದಾರೆ.
ದೂರಿನಲ್ಲಿ ಹಲವು ನಿಯಮಗಳನ್ನೂ ಅವರು ಉಲ್ಲೇಖಿಸಿದ್ದಾರೆ. ತಕ್ಷಣವೇ ಇದರ ಪ್ರಕರಣ ದಾಖಲಿಸಿ, ವಿಡಿಯೋ ಹಾಗೂ ಛಾಯಾಚಿತ್ರಗಳ ತಾಂತ್ರಿಕ ಪರಿಶೀಲನೆ ನಡೆಸಬೇಕು. ಬಳಸಲಾದ ಗರಿಗಳು ನೈಜವಾಗಿವೆಯೇ ಅಥವಾ ಕೃತಕವಾಗಿವೆಯೇ ಎಂಬುದನ್ನು ವೈಜ್ಞಾನಿಕವಾಗಿ ದೃಢೀಕರಿಸಬೇಕು. ನೈಜ ನವಿಲುಗರಿಗಳಾಗಿದ್ದರೆ ಆ ಉಡುಪುಗಳನ್ನು ವಶಕ್ಕೆ ಪಡೆದು, ಇವುಗಳನ್ನು ಪೂರೈಸಿದ ಜಾಲದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಗಿದೆ.
ಈ ಹಿಂದೆ ಬಿಗ್‌ಬಾಸ್ ಮನೆಯ ಒಳಗಡೆಯೇ ಇದ್ದ ವರ್ತೂರು ಸಂತೋಷ್ ಅವರು ಕೊರಳಿಗೆ ಹುಲಿ ಉಗುರಿನ ಲಾಕೆಟ್ ಧರಿಸಿದ್ದ ಫೋಟೋ ಮತ್ತು ವಿಡಿಯೋ ಭಾರಿ ವಿವಾದ ಸೃಷ್ಟಿಸಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ನೇರವಾಗಿ ಬಿಗ್‌ಬಾಸ್ ಸೆಟ್‌ಗೇ ಲಗ್ಗೆ ಇಟ್ಟು, ವರ್ತೂರು ಸಂತೋಷ್ ಅವರನ್ನು ವಶಕ್ಕೆ ಪಡೆದು ಜೈಲಿಗಟ್ಟಿದ್ದರು. ಈ ಘಟನೆ ಇಡೀ ರಾಜ್ಯಾದ್ಯಂತ ದೊಡ್ಡ ಸಂಚಲನ ಮೂಡಿಸಿತ್ತು. ಅದರ ಬೆನ್ನಲ್ಲೇ ಹಲವು ಸಿನೆಮಾ ತಾರೆಯರು, ಪ್ರಭಾವಿ ವ್ಯಕ್ತಿಗಳ ಮನೆಗಳ ಮೇಲೆಯೂ ಅರಣ್ಯ ಇಲಾಖೆ ದಾಳಿ ನಡೆಸಿತ್ತು.
ಈಗ ಅದೇ ಬಿಗ್‌ಬಾಸ್ ವೇದಿಕೆಯಿಂದ ಪ್ರಸಿದ್ಧಿ ಪಡೆದ ನಿವೇದಿತಾ ಗೌಡ ಮತ್ತು ಕಿಶನ್ ಇಬ್ಬರೂ ನವಿಲುಗರಿ ಉಡುಪಿನ ವಿಚಾರವಾಗಿ ಅರಣ್ಯ ಇಲಾಖೆಯ ರಡಾರ್‌ಗೆ ಸಿಲುಕಿರುವುದು ಸ್ಯಾಂಡಲ್‌ವುಡ್ ವಲಯದಲ್ಲಿ ತಲ್ಲಣ ಮೂಡಿಸಿದೆ. ತನಿಖೆಯ ಅವಧಿಯಲ್ಲಿ ಯಾವುದೇ ಪ್ರಭಾವ ಅಥವಾ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ ಪಾರದರ್ಶಕ ಕ್ರಮ ಜರುಗಿಸಬೇಕೆಂದು ಸಾರ್ವಜನಿಕ ವಲಯದಲ್ಲಿ ಆಗ್ರಹ ಕೇಳಿಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.