
ಚೆನ್ನೈ (ಜ.3): ಮಲಯಾಳಂ ಸೀರಿಯಲ್ ನಟ ಸಿದ್ಧಾರ್ಥ್ ಪ್ರಭು ಅವರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಮಿಳುನಾಡಿನ 53 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೃತ ಥಂಕರಾಜ್ ತಮಿಳುನಾಡಿನ ತಿರುನಲ್ವೇಲಿಯ ಮೂಲದವರಾಗಿದ್ದು, ಲಾಟರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಕೊಟ್ಟಾಯಂನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಗುರುವಾರ ರಾತ್ರಿ ಅವರು ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ವಿಚಾರಣೆ ಪೂರ್ಣಗೊಂಡ ನಂತರ ಶುಕ್ರವಾರ ಶವಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದರು.
ಥಂಕರಾಜ್ ಸಾವಿನ ನಂತರ ಸಿದ್ಧಾರ್ಥ್ ಪ್ರಭು ಮೇಲೆ ಹೆಚ್ಚುವರಿ ಆರೋಪಗಳನ್ನು ಹೊರಿಸಲಾಗುವುದು ಎಂದು ಚಿಂಗವನಂ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ನಟನ ವಿರುದ್ಧ ಈ ಹಿಂದೆ ಕುಡಿದು ವಾಹನ ಚಲಾಯಿಸುವುದು, ಅಪಘಾತಕ್ಕೆ ಕಾರಣವಾದ ಅತಿವೇಗದ ಚಾಲನೆ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಆರೋಪಗಳ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಡಿಸೆಂಬರ್ 24 ರ ರಾತ್ರಿ ಕೊಟ್ಟಾಯಂನ ನಟ್ಟಕೋಮ್ ನಲ್ಲಿ ಈ ಅಪಘಾತ ಸಂಭವಿಸಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಥಂಕರಾಜ್ ಅವರಿಗೆ ಸಿದ್ಧಾರ್ಥ್ ಅವರ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ನಂತರ, ಸ್ಥಳೀಯ ನಿವಾಸಿಗಳು ವಾಹನವನ್ನು ತಡೆಯಲು ಪ್ರಯತ್ನಿಸಿದರು, ನಂತರ ನಟ ಅವರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಥಳೀಯರು ಪೊಲೀಸರು ಮಾಹಿತಿ ನೀಡಿದ ಬಳಿಕ ನಟನನ್ನು ವಶಕ್ಕೆ ಪಡೆಯಲಾಗಿತ್ತು. ಅವರು ಪೊಲೀಸ್ ಅಧಿಕಾರಿಗಳನ್ನು ಸಹ ನಿಂದಿಸಿದ್ದಾರೆ ಎನ್ನಲಾಗಿದೆ.
"ಅವರು ಪೊಲೀಸ್ ಠಾಣೆಯಲ್ಲಿಯೂ ಸಾಕಷ್ಟು ತೊಂದರೆ ಉಂಟುಮಾಡಿದರು ಮತ್ತು ಮರುದಿನ ಜಾಮೀನಿನ ಮೇಲೆ ಬಿಡುಗಡೆಯಾದರು" ಎಂದು ಅಧಿಕಾರಿ ಹೇಳಿದರು. "ನಂತರದ ವೈದ್ಯಕೀಯ ಪರೀಕ್ಷೆಯಲ್ಲಿ ನಟ ಮದ್ಯದ ಅಮಲಿನಲ್ಲಿದ್ದನೆಂದು ದೃಢಪಟ್ಟಿತು, ಆದರೆ ನಾವು ಆರಂಭದಲ್ಲಿ ಇತರ ವಸ್ತುಗಳ ಪ್ರಭಾವವನ್ನು ಅನುಮಾನಿಸಿದ್ದೇವೆ" ಎಂದು ಪೊಲೀಸರು ಹೇಳಿದರು.
ಥಂಕರಾಜ್ ಅವರ ತಲೆಗೆ ಗಂಭೀರ ಗಾಯ ಸೇರಿದಂತೆ ತೀವ್ರ ಗಾಯಗಳಾಗಿದ್ದವು. ಅಪಘಾತದ ನಂತರ ತಮಿಳುನಾಡಿನಿಂದ ಬಂದ ಅವರ ಕುಟುಂಬ ಸದಸ್ಯರು ಕೊಟ್ಟಾಯಂ ತಲುಪಿದರು ಮತ್ತು ಚಿಕಿತ್ಸೆಯ ಸಮಯದಲ್ಲಿ ಅವರ ಪಕ್ಕದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.