ಕಿರುತೆರೆ ನಟ ಮಂಡ್ಯ ರವಿ ನಿಧನ: ಬಿಜಿಎಸ್ ಆಸ್ಪತ್ರೆ ಅಧಿಕೃತ ಘೋಷಣೆ

By Suvarna NewsFirst Published Sep 14, 2022, 6:56 PM IST
Highlights

Mandya Ravi Death: ಕನ್ನಡ ಕಿರುತೆರೆಯ ಖ್ಯಾತ ನಟ, ಮಗಳು ಜಾನಕಿ ಧಾರಾವಾಹಿಯ ಚಂದು ಭಾರ್ಗಿಯಾಗಿ ಪ್ರೇಕ್ಷಕರ ಹೃದಯ ಗೆದ್ದಿದ್ದ ನಟ ಮಂಡ್ಯ ರವಿ ನಿಧನರಾಗಿದ್ದಾರೆ. 

ಬೆಂಗಳೂರು (ಸೆ. 14): ಕನ್ನಡ ಕಿರುತೆರೆಯ ಖ್ಯಾತ ನಟ, ಮಗಳು ಜಾನಕಿ (Magalu Janaki) ಧಾರಾವಾಹಿಯ ಚಂದು ಭಾರ್ಗಿಯಾಗಿ ಪ್ರೇಕ್ಷಕರ ಹೃದಯ ಗೆದ್ದಿದ್ದ ನಟ ಮಂಡ್ಯ ರವಿ (Mandya Ravi) ನಿಧನರಾಗಿದ್ದಾರೆ. ಈ ಬಗ್ಗೆ ಬಿಜಿಎಸ್ ಆಸ್ಪತ್ರೆ ವೈದ್ಯರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಟ ರವಿ ಕಳೆದ ಒಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರಿನ (Bengaluru) ಬಿಜೆಎಸ್ ನಲ್ಲಿ ದಾಖಲಾಗಿದ್ದ ನಟ ರವಿ ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಟ ರವಿ ಮಗಳು ಜಾನಕಿ ಧಾರಾವಾಹಿ ಮೂಲಕ ಪ್ರಸಿದ್ಧಿ ಪಡೆದಿದ್ದರು. ಈ ಧಾರಾವಾಹಿಯಲ್ಲಿ ರವಿ ಚಂದುಭಾರ್ಗಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 

ಇನ್ನು ಈ ಬಗ್ಗೆ ಫೇಸ್ಬುಕ್‌ನಲ್ಲಿ ಮಾಹಿತಿ ನೀಡಿರುವ ನಿರ್ದೇಶಕ ಸೀತರಾಮ್  "ಮಗಳು ಜಾನಕಿ ಯ 'ಚಂದು ಭಾರ್ಗಿ' ರವಿ ಅಸ್ತಂಗತ. ಇನ್ನೂ 42..ನಾಲ್ಕು ಜನ್ಮಕ್ಕಾಗುವಷ್ಟು ಪ್ರತಿಭೆ..ಅತ್ಯಂತ ಆಘಾತಕಾರಿ" ಎಂದು ಬರೆದಿದ್ದಾರೆ. ನಿರ್ದೇಶಕ ಸೀತರಾಮ್ ಅವರು ಆಸ್ಪತ್ರೆಗೆ ಭೇಟಿ ನೀಡಿ ರವಿ ಆರೋಗ್ಯ ಕೂಡ ವಿಚಾರಿಸಿದ್ದರು.

ರಂಗಭೂಮಿ ಹಿನ್ನೆಲೆಯಿಂದ ಬಂದ ರವಿ: ಮಂಡ್ಯ ಮೂಲದ ನಟ ರವಿ ಅವರ ಸಂಪೂರ್ಣ ಹೆಸರು ರವಿ ಪ್ರಸಾದ್ (Ravi Prasad). ಖ್ಯಾತ ನಿರ್ದೇಶಕ ಟಿಎನ್ ಸೀತರಾಮ್ ಅವರ ಅನೇಕ ಧಾರಾವಾಹಿಗಳಲ್ಲಿ ರವಿ ಅವರು ನಟಿಸಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದ ರವಿ ಧಾರಾವಾಹಿ ಜೊತೆಗೆ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಎಂಎ ಎಲ್ ಎಲ್ ಬಿ ಓದಿರುವ ರವಿ ಅದ್ಭುತ ನಟನೆ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದರು.

ನಟ ರವಿ ಅನೇಕ ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. ಚಿತ್ರಲೇಖ, ಮಿಂಚು, ಮುಕ್ತ ಮುಕ್ತ, ವರಲಕ್ಷ್ಮೀ ಸ್ಟೋರ್ಸ್ ಮುಂತಾದ ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕ್ರೈಂ ಫೈಲ್ ಕಾರ್ಯಕ್ರಮವನ್ನು ರವಿಪ್ರಸಾದ್ ನಿರೂಪಣೆ ಮಾಡಿದ್ದರು.

click me!