ಬಿಗ್​ಬಾಸ್​ ಮನೆಗೆ ಕಾಂತಾರ ಚೆಲುವೆ ಸಪ್ತಮಿ ಗೌಡ! ಮುಟ್ಟಿನ ಕಪ್​ ಕುರಿತು ಜಾಗೃತಿ ಮೂಡಿಸಿದ ನಟಿ

By Suvarna News  |  First Published Dec 30, 2023, 6:00 PM IST

ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಕಾಂತಾರ ಚೆಲುವೆ ಸಪ್ತಮಿ ಗೌಡ! ಸರ್ಕಾರದ ರಾಯಭಾರಿಯಾಗಿ ಬಂದ ನಟಿ ಹೇಳಿದ್ದೇನು?
 


ಬಿಗ್​ಬಾಸ್​ ಕನ್ನಡ ಸೀಸನ್​ 10 ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಇದಾಗಲೇ ವೈಲ್ಡ್​ಕಾರ್ಡ್​ ಎಂಟ್ರಿಯೂ ಆಗಿದೆ, ಅತಿಥಿಗಳ ಆಗಮನವೂ ಆಗಿದೆ. ಇಷ್ಟೇ ಅಲ್ಲದೇ ಸ್ಪರ್ಧಿಗಳ ಅಪ್ಪ-ಅಮ್ಮನ ಎಂಟ್ರಿ ಕೂಡ ನಡೆದಿದೆ. ಕೆಲವೊಂದು ಹೈಡ್ರಾಮಾ ಸನ್ನಿವೇಶಗಳೂ ಆಗಿಹೋಗಿವೆ. ಒಟ್ಟೂ ಇದ್ದ 21 ಸ್ಪರ್ಧಿಗಳಲ್ಲಿ ಈಗ  10 ಮಂದಿ ಉಳಿದುಕೊಂಡಿದ್ದಾರೆ. ಈ ವಾರ  ಯಾರು ಮನೆಯಿಂದ ಹೊರಗಡೆ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.  ಟಿಆರ್​ಪಿ ರೇಟ್​ ನೋಡಿ ಇನ್ನೂ ಎರಡು ವಾರ ಮುಂದಕ್ಕೆ ಹೋಗಲಿದೆ ಬಿಗ್​ಬಾಸ್ ಎಪಿಸೋಡ್​ ಎನ್ನಲಾಗುತ್ತಿದೆ.  ಇದುಗಳ ಮಧ್ಯೆಯೇ ಇದೀಗ ಕಾಂತಾರ ಚೆಲುವೆ ಸ್ಯಾಂಡಲ್​ವುಡ್​ ನಟಿ ಸಪ್ತಮಿ ಗೌಡ ಎಂಟ್ರಿ ಕೊಟ್ಟಿದ್ದಾರೆ. ಹಾಗಿದ್ದರೆ ಅವರು ವೈಲ್ಡ್​ಕಾರ್ಡ್​ ಎಂಟ್ರಿ ಮೂಲಕ ಬಂದಿದ್ದಾರೆ ಅಂದುಕೊಂಡರೆ ಅದು ತಪ್ಪು. ಅವರು ಬಂದಿರುವುದು ಅತಿಥಿಯಾಗಿ. ಈ ಹಿಂದೆ ಅತಿಥಿಯಾಗಿ ಕೆಲವು ಸೆಲೆಬ್ರಿಟಿಗಳು ಬಂದಿದ್ದರು. ಆದರೆ ಇದೀಗ ಸಪ್ತಮಿ ಗೌಡ ಬಂದಿರುವುದು ಒಂದು ಕುತೂಹಲದ ಕಾರಣಕ್ಕೆ. ಅವರು ಇಲ್ಲಿಗೆ ಬಂದಿರುವುದು ಸರ್ಕಾರದ ರಾಯಭಾರಿಯಾಗಿ!

ಹೌದು. ಅವರು ಗುಲಾಬಿ ಬಣ್ಣದ ಡ್ರೆಸ್​ ಧರಿಸಿ ಬಂದಿದ್ದಾರೆ. ಅಷ್ಟಕ್ಕೂ ಈ ಡ್ರೆಸ್​ ಧರಿಸುವುದಕ್ಕೂ ಅವರು ಬಂದಿರುವ ಹಿಂದಿರುವ ಕಾರಣಕ್ಕೂ ಹೋಲಿಕೆ ಇದೆ. ಅದೇನೆಂದರೆ, ಮೊದಲೇ ಹೇಳಿದಂತೆ ನಟಿ ಬಂದಿರುವುದು ಸರ್ಕಾರದ ರಾಯಭಾರಿಯಾಗಿ. ಸರ್ಕಾರದ ಯೋಜನೆಯೊಂದನ್ನು ತಿಳಿಸುವ ಉದ್ದೇಶದಿಂದ ಅವರು ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.  ಅದೇನೆಂದರೆ, ಮೈತ್ರಿ ಮುಟ್ಟಿನ ಕಪ್​ ಪ್ರಚಾರ ಮಾಡಲು ಅವರು ಬಂದಿದ್ದಾರೆ.  ಹೆಣ್ಣು ಮಕ್ಕಳು ಋತುಸ್ರಾವವಾದಾಗ ಪ್ಯಾಡ್‌ ಬದಲು ಮುಟ್ಟಿನ ಕಪ್ ಬಳಸುವಂತೆ ಜಾಗೃತಿ ಮೂಡಿಸಿದ್ದಾರೆ ನಟಿ.  ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಕಡೆಯಿಂದ ಅವರು ಈ ಮನೆಯ ಹೆಣ್ಣು ಮಕ್ಕಳಿಗೆ ಮುಟ್ಟಿನ ಕಪ್ ಬಗ್ಗೆ ಮಾಹಿತಿ ನೀಡಿದ್ದಾರೆ.

Latest Videos

undefined

‘ಮೈತ್ರಿ ಮುಟ್ಟಿನ ಕಪ್’ ಯೋಜನೆಗೆ ಸಪ್ತಮಿ ಗೌಡ ರಾಯಭಾರಿ: ತಾಯಂದಿರು ಜಾಗೃತಿ ಮೂಡಿಸಬೇಕೆಂದ ನಟಿ

ನಾನು ಬಿಗ್ ಬಾಸ್​ ಮನೆಗೆ ಬರಲು ಕಾರಣ ಇದೆ. ನಮ್ಮ ಸರ್ಕಾರ  ಮೈತ್ರಿ ಮುಟ್ಟಿನ ಕಪ್ ಯೋಜನೆಗೆ ಆರಂಭಿಸಿದೆ. ನಾನು ಈ ಯೋಜನೆಯ ರಾಜಭಾರಿಯಾಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ಹೆಣ್ಣಿನ ಆರೋಗ್ಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪ್ಯಾಡ್ಸ್​ ನಿದ ಕಪ್ಸ್​ ಗಳತ್ತ ಹೆಣ್ಣು ಮಕ್ಕಳು ಕರೆತರುವ ಅಭಿಯಾನ ಮಾಡಲಾಗ್ತಿದೆ. ಈಗಾಗಲೇ ಶೇಕಡಾ 80ರಷ್ಟು ಹೆಣ್ಣು ಮಕ್ಕಳು ಬಳಸುತ್ತಿದ್ದಾರೆ ಎಂದು ಸಪ್ತಮಿ ಗೌಡ ಹೇಳಿದ್ದಾರೆ. ಬಿಗ್ ಬಾಸ್​ ಮನೆಯಲ್ಲೂ ಹೆಣ್ಣು ಮಕ್ಕಳಿರುವ ಕಾರಣ ತಾವು ಬಂದಿರುವುದಾಗಿ ಹೇಳಿದ ನಟಿ,  ಈ ಕಾರ್ಯಕ್ರಮದ ಮೂಲಕ  ಹೆಣ್ಣು ಮಕ್ಕಳಿಗೆ ಜಾಗೃತಿ ಮೂಡಿಸುವ ಉದ್ದೇಶ ಎಂದಿದ್ದಾರೆ.
 
ಮಾಮೂಲಿ ಬಳಸುವ ಪ್ಯಾಡ್​​ ಮತ್ತು ಮುಟ್ಟಿನ ಕಪ್​ ಕುರಿತು ಮಾಹಿತಿ ನೀಡಿದ ನಟಿ, ಹೆಣ್ಣು ಮಗಳೊಬ್ಬಳು ತನ್ನ ಮುಟ್ಟಿನ ಜೀವನದಲ್ಲಿ ಸುಮಾರು 200 ಕೆಜಿಯಷ್ಟು ಸ್ಯಾನಿಟರಿ ಪ್ಯಾಡ್ ತ್ಯಾಜ್ಯವನ್ನು ಸೃಷ್ಟಿಸುತ್ತಾಳೆ. ಅದಕ್ಕೆ ಪರ್ಯಾಯವಾಗಿ ಪರಿಸರ ಸ್ನೇಹಿಯಾಗಿ ಈ ಮೈತ್ರಿ ಕಪ್ ಬಳಕೆ ಮಾಡುವುದು ಉತ್ತಮ ಎಂದು ತಿಳಿಸಿದರು. ಸ್ಯಾನಿಟರಿ ನ್ಯಾಪ್​ಕಿನ್​ ಕೆಲವರಿಗೆ ಅಲರ್ಜಿಯಾಗುವ ಸಾಧ್ಯತೆ ಇದೆ. ಅದರ ಬದಲು ಕಪ್​ ಬಳಸಿದರೆ ನಿರಾಯಾಸವಾಗಿ ಇರಬಹುದು ಎನ್ನುವ ಕಾರಣಕ್ಕೆ ಹಲವು ಹೆಣ್ಣುಮಕ್ಕಳು ಇದನ್ನು ಬಳಕೆ  ಮಾಡುತ್ತಿದ್ದಾರೆ. ರಕ್ತಸ್ರಾವ ಹೆಚ್ಚಾದರೂ ಇದನ್ನು ಬಳಸಿದರೆ ಸಮಸ್ಯೆ ಇರುವುದಿಲ್ಲ. 

click me!