ವಿಶ್ವ ಪರ್ಯಟನೆ ಮಾಡುವ ಕ್ರೂಸ್‌ಗಳಲ್ಲಿ ಜಿಮ್ ಟ್ರೈನರ್ ಆಗಿರುವ ಬಸವರಾಜ್ ಕಟ್ಟಿ ಅವರು ಅಲಾಸ್ಕಾದ 900 ಅಡಿ ದಪ್ಪನೆಯ ಮಂಜಿನ ಬೆಟ್ಟದ ಮೇಲೆ ಕನ್ನಡ ಧ್ವಜವನ್ನು ಹಾರಿಸಿದ್ದಾರೆ.
ಬೆಂಗಳೂರು (ಸೆ.01): ವಿಶ್ವ ಪರ್ಯಟನೆ ಮಾಡುವ ಕ್ರೂಸ್‌ಗಳಲ್ಲಿ ಜಿಮ್ ಟ್ರೈನರ್ ಆಗಿರುವ ಬಸವರಾಜ್ ಕಟ್ಟಿ ಅವರು ವಿಶ್ವದ ಸುಂದರ ಪ್ರವಾಸಿ ತಾಣ ಅಲಾಸ್ಕಾದ 900 ಅಡಿ ದಪ್ಪನೆಯ ಮಂಜಿನ ಪರ್ವತದ ಮೇಲೆ ಕನ್ನಡ ಧ್ವಜವನ್ನು ಹಾರಿಸಿದ್ದಾರೆ.
ಉತ್ತರ ಕರ್ನಾಟಕದ ಮೂಲದ ಜಿಮ್ ಟ್ರೈನರ್ ಆಗಿರುವ ಬಸವರಾಜ್ ಕಟ್ಟಿ ಅಲಾಸ್ಕಾದ ಮಂಜಿಕ ಪರ್ವತದ ಮೇಲೆ ಕನ್ನಡ ಬಾವುಟ ಹಾರಿಸಿ ಬಂದ ಕರುನಾಡ ಕುವರನಾಗಿದ್ದಾನೆ. ಈತ ಹೆಚ್ಚೇನು ಓದಿಕೊಳ್ಳದಿದ್ದರೂ ಒಂದು ವರ್ಷದಲ್ಲಿ 8-9 ತಿಂಗಳು ದುಡಿಮೆ ಮಾಡುತ್ತಾ ಲಕ್ಷಾಂತರ ರೂ. ಹಣ ಸಂಪಾದನೆ ಮಾಡುತ್ತಾನೆ. ಇನ್ನು ದುಡಿಮೆ ಮೂಲಕವೇ ಜಗತ್ತಿನ ಮೂಲೆ ಮೂಲೆಯಲ್ಲಿರುವ ದೇಶಗಳಿಗೆ ಸಮುದ್ರ ಮಾರ್ಗದ ಮೂಲಕ ಹೋಗಿ ಬರುತ್ತಾನೆ. ಆದರೆ, ತಾನು ಹೋದ ಅಪರೂಪದ ಸ್ಥಳಗಳಲ್ಲಿ ಎಲ್ಲೆಡೆಯೂ ತಪ್ಪದೇ ಕನ್ನಡ ಬಾವುಟವನ್ನು ಹಾರಿಸಿ ಬರುತ್ತಾರೆ.
ಅರೆರೇ... ಇದೇನಿದು ಹೊಸ ವಿಚಾರ ಎಂದು ಕಣ್ಣರಳಿಸಿ ಓದುತ್ತಿದ್ದರೆ, ಇಲ್ಲಿದೆ ನೋಡಿ ಇನ್ನೊಂದಿಷ್ಟು ಕುತೂಹಲಕಾರಿ ವಿಚಾರ. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಫಿಟ್ ಕರುನಾಡು ಎಂಬ (fit_Karunadu) ಪೇಜ್ ಹೊಂದಿರುವ ಉತ್ತರ ಕರ್ನಾಟಕದ ಮೂಲದ ಬಸವರಾಜ್ ಕಟ್ಟಿ ಅವರೇ ಕುತೂಹಲದ ಕೇಂದ್ರಬಿಂದು ಆಗಿರುವವರು. 'ದೇಶ ಸುತ್ತು, ಇಲ್ಲವೆಂದರೆ ಕೋಶ ಓದು' ಎಂಬ ಗಾದೆ ಮಾತಿನಂತೆ ಹೆಚ್ಚು ಓದದ ಬಸವರಾಜ್ ಕಟ್ಟಿ ಅವರು ದೇಶಗಳನ್ನು ಸುತ್ತಿದ್ದೇ ಹೆಚ್ಚು. ಇಂಗ್ಲೀಷ್ ಪರಿಣಿತನಲ್ಲದಿದ್ದರೂ, ವಿಶ್ವದ ಬಹುತೇಕ ಶ್ರೀಮಂತರ ರಾಷ್ಟ್ರಗಳ ಎಲ್ಲ ಜನರೊಂದಿಗೂ ಮಾತನಾಡಿದ ಅನುಭವವನ್ನು ಪಡೆದಿದ್ದಾರೆ. ಇಷ್ಟೆಲ್ಲಾ ಇಂಗ್ಲೀಷ್ ಬಲ್ಲವನಾಗಿದ್ದರೂ, ಆತನ ಬಾಯಲ್ಲಿ ಬರುವ ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಮಾತು ಕೇಳಲಿಕ್ಕೆ ಹಾಲು ಕುಡಿದಷ್ಟೇ ಸಂತಸವನ್ನು ಉಂಟು ಮಾಡುತ್ತದೆ.
ಕ್ರೂಸ್‌ನಲ್ಲಿ ಜಿಮ್ ಟ್ರೇನರ್: ಇನ್‌ಸ್ಟಾಗ್ರಾಮ್‌ನಲ್ಲಿ 'ನಮಸ್ಕಾರ್ರೀ ಎಲ್ಲ ದೊಡ್ಡ ಮಂದಿಗೆ' ಎಂದು ವಿಡಿಯೋದಲ್ಲಿ ಮಾತನ್ನು ಆರಂಭಿಸುವ ಬಸವರಾಜ್ ಕಟ್ಟಿ ಅವರು ವಿಶ್ವದ ಮೂಲೆ ಮೂಲೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ವಿಡಿಯೋ ಹಂಚಿಕೊಳ್ಳುವ ಮೂಲಕ ತೋರಿಸುತ್ತಿದ್ದಾರೆ. ವಿಶ್ವದ ಕೆಲವು ಬೆರಳೆಣಿಕೆಯ ಶ್ರೀಮಂತ ಹಾಗೂ ಐಷಾರಾಮಿ ಹಡಗುಗಳಲ್ಲಿ (ಕ್ರೂಸ್‌ಗಳು) ಜಿಮ್ ಟ್ರೇನರ್ ಆಗಿ ಕೆಲಸ ಮಾಡುತ್ತಿರುವ ಬಸವರಾಜ್ ಕಟ್ಟಿ ಅವರು ಒಮ್ಮೆ ಮನೆಯನ್ನು ಬಿಟ್ಟರೆ ಸಮುದ್ರದ ಮೇಲ್ಭಾಗದಲ್ಲಿ ತೇಲುವ ಹಡಗಿನಲ್ಲಿಯೇ ಸುಮಾರು 3 ರಿಂದ 6 ತಿಂಗಳು ಜೀವನ ಕಳೆಯುತ್ತಾರೆ. ಐಷಾರಾಮಿ ಹಡಗುಗಳಲ್ಲಿ ಲಕ್ಷಾಂತರ ರೂ. ಹಣವನ್ನು ಪಾವತಿಸಿ ಹಲವು ದೇಶಗಳನ್ನು ಸುತ್ತಾಡಲು ಹೋಗುವ ಪ್ರಯಾಣಿಕರಿಗೆ ಜಿಮ್ ಟ್ರೈನರ್ ಆಗಿ ಬೆಳಗ್ಗೆ ಹಲವು ಕಸರತ್ತುಗಳನ್ನು ಹೇಳಿಕೊಟ್ಟು, ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಲು ನೆರವಾಗುತ್ತಿದ್ದಾರೆ. ಇದಕ್ಕೆ ಕ್ರೂಸ್‌ಗಳ ಮಾಲೀಕರಿಂದ ವೇತನವನ್ನೂ ಪಡೆದುಕೊಳ್ಳುತ್ತಾರೆ.
ಇದನ್ನೂ ಓದಿ: ತೀವ್ರ ಬರದಿಂದ ಬೇಸತ್ತ ನಮೀಬಿಯಾ: ಜನರ ಹಸಿವು ನೀಗಿಸಲು ಆನೆಗಳ ಹತ್ಯೆಗೆ ಮುಂದಾದ ಸರ್ಕಾರ
ಹೋದಲ್ಲೆಲ್ಲಾ ಕರುನಾಡಿನ ಬಾವುಟ ಹಾರಿಸುವ ಕನ್ನಡಿಗ: ಇನ್ನು ಬಸವರಾಜ್ ಕಟ್ಟಿ ಅವರು ತಾವು ಕ್ರೂಸ್‌ನಲ್ಲಿ ಹೋಗುವಾಗ ವಿಶ್ವದ ಶ್ರೀಮಂತ ರಾಷ್ಟ್ರಗಳು, ಶ್ರೀಮಂತರ ಪ್ರವಾಸಿ ತಾಣಗಳಿಗೂ ಹೋಗುತ್ತಾರೆ. ಹೀಗೆ ಹೋಗುವ ಕಡೆಗಳಲ್ಲೆಲ್ಲಾ ತಪ್ಪದೇ ವಿಡಿಯೋ ಮಾಡುತ್ತಾರೆ. ಆಗ ತಪ್ಪದೇ ಸುಂದರ ಮತ್ತು ಶ್ರೀಮಂತ ಪ್ರವಾಸಿ ತಾಣಗಳಲ್ಲಿ ನಮ್ಮ ಕನ್ನಡದ ಬಾವುಟ ಹಾರಿಸುತ್ತಾರೆ. ಆದ್ದರಿಂದ ಬಸವರಾಜ್ ಕಟ್ಟಿ ಅವರ ವಿಡಿಯೋಗಳನ್ನು ನೋಡುವವರ ಸಂಖ್ಯೆಯೂ ಹೆಚ್ಚಾಗಿದ್ದು, ಸಾವಿರಾರು ವಿದೇಶಿಗರ ನಡುವೆ ಅಪ್ಪಟ ಕನ್ನಡದ ಮಾತುಗಳನ್ನಾಡುವುದರಿಂದ ಸಾವಿರಾರು ಕನ್ನಡಿಗರು ಇವರನ್ನು ಫಾಲೋ ಮಾಡುತ್ತಿದ್ದಾರೆ. ಇದೀಗ ವಿಶ್ವದ ಸುಂದರ ಮತ್ತು ಅಪಾಯಕಾರಿ ಪ್ರವಾಸಿ ತಾಣವಾಗಿರುವ ಅಲಾಸ್ಕಾದ 900 ಅಡಿ ದಪ್ಪನೆಯ ಮಂಜಿನ ಬೆಟ್ಟದ ಮೇಲೆ ಹೋಗಿದ್ದು, ಇಲ್ಲಿಯೂ ಕನ್ನಡದ ಬಾವುಟ ಹಾರಿಸಿ ಬಂದಿದ್ದಾರೆ. ಇನ್ನು ಅಲಾಸ್ಕಾಗೆ ಸಮುದ್ರ ಮಾರ್ಗವಾಗಿ ಹೋದರೂ ಅಲ್ಲಿ, ಬೆಟ್ಟದ ಮೇಲೆ ಹೋಗಲು ಹೆಲಿಕಾಪ್ಟರ್‌ನಲ್ಲಿ ಹೋಗಿದ್ದಾರೆ. ಶ್ರೀಮಂತ ಕ್ರೂಸ್‌ಗಳಲ್ಲಿ ಸಂಚಾರ ಮಾಡುತ್ತಿದ್ದ ಬಸವರಾಜ್ ಅವರು ಇದೇ ಮೊದಲ ಬಾರಿಗೆ ತಾವು ಹೆಲಿಕಾಪ್ಟರ್‌ನಲ್ಲಿ ಸಂಚಾರ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.