ಹೈದ್ರಾಬಾದ್‌ಗೆ ಗುಳೆ ಹೋದ ಕನ್ನಡ ಸೀರಿಯಲ್ ತಂಡ; ರಾಮೋಜಿ ಫಿಲಂ ಸಿಟಿಯಲ್ಲಿ ಶೂಟಿಂಗ್

By Kannadaprabha NewsFirst Published May 24, 2021, 9:04 AM IST
Highlights

ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ ಘೋಷಣೆಯಾಗುತ್ತಿದ್ದಂತೇ ಹೆಚ್ಚಿನೆಲ್ಲ ಸೀರಿಯಲ್ ತಂಡಗಳು ಹೈದರಾಬಾದ್‌ಗೆ ಹೊರಟಿವೆ. ಅಲ್ಲಿನ ರಾಮೋಜಿರಾವ್ ಫಿಲ್ಮಂ ಸಿಟಿಯಲ್ಲಿ ಶೂಟಿಂಗ್ ಮಾಡಲಿವೆ. ಅಲ್ಲಿಗೆ ಸೀರಿಯಲ್‌ಗಳ ಪ್ರಸಾರ ಸ್ಥಗಿತಗೊಳ್ಳುವುದರ ಬಗೆಗಿದ್ದ ಆತಂಕ ನಿವಾರಣೆ ಆದಂತಾಗಿದೆ.
 

ಲಾಕ್‌ಡೌನ್ ವಿಸ್ತರಣೆ ಕನ್ನಡ ಕಿರುತೆರೆಯ ಧಾರಾವಾಹಿ ತಂಡಗಳಿಗೆ ನುಂಗಲಾರದ ಬಿಸಿ ತುತ್ತಾಗಿದೆ. ಹೇಗಾದರೂ ಮಾಡಿ ಸೀರಿಯಲ್ ಮುಂದುವರಿಸಬೇಕು ಅನ್ನುವ ಉದ್ದೇಶದಿಂದ ತಂಡಗಳು ಇದೀಗ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯತ್ತ ಪ್ರಯಾಣ ಬೆಳೆಸಿವೆ. ಅಲ್ಲಿ ಶೂಟಿಂಗ್‌ಗೆ ನಿಷೇಧ ಇಲ್ಲದಿರುವ ಕಾರಣ ಸೀರಿಯಲ್ ಟೀಮ್‌ಗಳು ಈ ನಿರ್ಧಾರಕ್ಕೆ ಬಂದಿವೆ. ಕಲರ್ಸ್ ಕನ್ನಡ ಹಾಗೂ ಝೀ ಟಿವಿಯ ಎಲ್ಲ ಸೀರಿಯಲ್ ತಂಡಗಳೂ ಇದೀಗ ರಾಮೋಜಿ ಫಿಲಂ ಸಿಟಿಯತ್ತ ಮುಖ ಮಾಡಿದ್ದು, ಶೀಘ್ರವೇ ಅಲ್ಲಿ ಕನ್ನಡ ಸೀರಿಯಲ್‌ಗಳ ಶೂಟಿಂಗ್ ಭರದಿಂದ ಆರಂಭವಾಗಲಿದೆ.

ಲಾಕ್‌ಡೌನ್‌ ಆದ್ರೂ ಡೋಂಟ್ ವರಿ, ಜೊತೆ ಜೊತೆಯಲಿ ಹೊಸ ಎಪಿಸೋಡ್ ನೋಡಿ! 

ಲಾಕ್‌ಡೌನ್ ತೊಡಕು

ಮನರಂಜನಾ ಮಾಧ್ಯಮದಲ್ಲಿ ಲಾಕ್‌ಡೌನ್‌ನಿಂದ ಅತಿಹೆಚ್ಚು ಸಮಸ್ಯೆಯಾಗುತ್ತಿರುವುದು ಕಿರುತೆರೆಗೆ. ನಿತ್ಯ ಪ್ರಸಾರವಾಗುತ್ತಿರುವ ಸೀರಿಯಲ್‌ಗಳಿಗೆ ಅದರದೇ ಆದ ಪ್ರೇಕ್ಷಕ ವರ್ಗವಿದೆ. ಒಂದು ವೇಳೆ ಸೀರಿಯಲ್ ನಿಂತು ಹೋಗಿ ಜನ ಧಾರಾವಾಹಿಗಳಿಂದ ವಿಮುಖರಾದರೆ ಮತ್ತೆ ಅವರನ್ನು ಈ ಕಡೆ ಮುಖ ಮಾಡಿಸುವುದು ಕಷ್ಟ. ಜೊತೆಗೆ ಸೀರಿಯಲ್ ನಿಂತರೆ ಆರ್ಥಿಕವಾಗಿಯೂ ಸಾಕಷ್ಟು ನಷ್ಟವಾಗಲಿದೆ. ಇದೆಲ್ಲ ಸಂಕಷ್ಟವನ್ನೂ ಕಿರುತೆರೆ ಕಳೆದ ಲಾಕ್‌ಡೌನ್ ವೇಳೆಗೇ ಕಂಡಿತ್ತು. ಈ ಬಾರಿ ಹಿಂದಿನ ಸ್ಥಿತಿ ಮರುಕಳಿಸುವುದು ಯಾರಿಗೂ ಇಷ್ಟವಿಲ್ಲ. ಹೀಗಾಗಿ ಹೇಗಾದರೂ ಮಾಡಿ ಸೀರಿಯಲ್‌ಗಳ ನಿರಂತರತೆಗೆ ಧಕ್ಕೆಯಾಗಬಾರದು ಎಂದು ಟೀಮ್‌ಗಳು ಪಣತೊಟ್ಟಂತಿವೆ.

ನಮ್ಮ ಸೀರಿಯಲ್ ತಂಡಗಳು ಹೈದರಾಬಾದ್‌ಗೆ ಹೋಗುತ್ತಿರುವುದು ನಿಜವಾದರೂ ಅಲ್ಲಿನ ಸ್ಥಿತಿ ಗತಿಗಳ ಬಗ್ಗೆ ನಮಗೆ ಸ್ಪಷ್ಟ ಚಿತ್ರಣ ಇನ್ನೂ ಸಿಕ್ಕಿಲ್ಲ. ಹೀಗಾಗಿ ಇಲ್ಲಿ ಲಾಕ್‌ಡೌನ್ ಮುಗಿಯುವವರೆಗೂ ಅಲ್ಲಿ ಶೂಟಿಂಗ್ ನಡೆಸುವ ಬಗ್ಗೆ ಈಗಲೇ ಏನೂ ಹೇಳಲಾರೆ. ಇಂಥ ಸಂದಿಗ್ಧದಲ್ಲಿರುವಾಗ ಸೀರಿಯಲ್‌ಗಳು ಸ್ಥಗಿತವಾಗದೇ ಮುಂದುವರಿಯುವ ಬಗೆಗೂ ಸ್ಪಷ್ಟವಾಗಿ ಏನೂ ಹೇಳಲಾಗದು. - ಪರಮೇಶ್ವರ ಗುಂಡ್ಕಲ್, ಬ್ಯುಸಿನೆಸ್ ಹೆಡ್, ಕಲರ್ಸ್ ಕನ್ನಡ

ವೆಚ್ಚ ಭರಿಸುವುದು ಅನಿವಾರ್ಯ

ಸೀರಿಯಲ್ ತಂಡಗಳು ವಿಮಾನದ ಮೂಲಕ ಹೈದರಾಬಾದ್‌ಗೆ ಹೋಗಲಿವೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದರಿಂದ ಆದ್ಯತೆಯ ಕಲಾವಿದರು, ತಂತ್ರಜ್ಞರ ಓಡಾಟ, ಅಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ, ಅಲ್ಲಿ ಹೊಸದಾಗಿ ಶೂಟಿಂಗ್ ವೆಚ್ಚ ಎಲ್ಲವನ್ನೂ ಭರಿಸುವುದು ಅನಿವಾರ್ಯವಾಗಿದೆ. ಕೆಲವೇ ಮುಖ್ಯ ಕಲಾವಿದರನ್ನಷ್ಟೇ ಅಲ್ಲಿಗೆ ಕರೆದೊಯ್ಯಲಾಗುತ್ತದೆ. ಆ ಮುಖ್ಯ ಪಾತ್ರಗಳಿಗೆ ತಕ್ಕಂತೆ ಕಥೆ ಹೆಣೆಯಲಾಗುತ್ತಿದೆ.

ಇನ್‌ಸ್ಟಾಗ್ರಾಂ ಮತ್ತು ಮೇಲ್‌ನಲ್ಲಿ ವೈಷ್ಣವಿಗೆ ಬಂದಿದೆ ಸಾವಿರಾರು ಮದುವೆ ಪ್ರಪೋಸಲ್‌ಗಳು! 

ಹೈದರಾಬಾದ್‌ನ ಸ್ಥಿತಿ ಹೇಗಿದೆ?

ಹೈದರಾಬಾದ್‌ನಲ್ಲಿ ಸದ್ಯಕ್ಕೆ ಕೋವಿಡ್ ಸಮಸ್ಯೆ ಇದ್ದರೂ ಶೂಟಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿನ ಬಹು ವಿಸ್ತಾರದ ರಾಮೋಜಿರಾವ್ ಫಿಲ್ಮಂ ಸಿಟಿ ಶೂಟಿಂಗ್‌ಗೆ ಮುಕ್ತವಾಗಿದೆ. ಸುರಕ್ಷತೆಯ ಕ್ರಮಗಳ ಜೊತೆಗೆ ಇಲ್ಲಿ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಕನ್ನಡದ ಮನರಂಜನಾ ಚಾನೆಲ್‌ಗಳ ಬಹುತೇಕ ಸೀರಿಯಲ್ ಟೀಮ್‌ಗಳು ಅಲ್ಲಿ ಶೂಟಿಂಗ್ ಮಾಡುವುದಕ್ಕೆ ಅಡಚಣೆಗಳಿಲ್ಲ ಎನ್ನಲಾಗಿದೆ.

ಯಾವೆಲ್ಲ ಸೀರಿಯಲ್ ಶೂಟಿಂಗ್

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿಗಳಾದ ಕನ್ನಡತಿ, ನಮ್ಮನೆ ಯುವರಾಣಿ, ನನ್ನರಸಿ ರಾಧೆ ಸೇರಿದಂತೆ ಹೆಚ್ಚಿನೆಲ್ಲ ಸೀರಿಯಲ್ ತಂಡಗಳು ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ಬೀಡುಬಿಡಲಿವೆ. ಜೀ ಕನ್ನಡದ ಜೊತೆ ಜೊತೆಯಲಿ, ಸತ್ಯಾ, ಗಟ್ಟಿಮೇಳ, ನಾಗಿನಿ 2 ಸೇರಿದಂತೆ ಎಲ್ಲ ಧಾರಾವಾಹಿಗಳ ಶೂಟಿಂಗ್ ಇಲ್ಲೇ ನಡೆಯಲಿದೆ. ಇಂದು ತಂಡಗಳು ವಿಮಾನದ ಮೂಲಕ ಹೈದರಾಬಾದ್ ತಲುಪಲಿವೆ.

ಇದರಿಂದ ತಮ್ಮ ಮೆಚ್ಚಿನ ಸೀರಿಯಲ್‌ಗಳ ಪ್ರಸಾರ ಎಲ್ಲಿ ನಿಂತು ಹೋಗುವುದೋ ಎಂಬ ನಿರಾಸೆಯಲ್ಲಿದ್ದ ವೀಕ್ಷಕರಿಗೆ ನಿರಾಳ ಸಿಕ್ಕಂತಾಗಿದೆ. ಧಾರಾವಾಹಿಗಳ ನಿರಂತರತೆಗೆ ಇದ್ದ ಅಡಚಣೆ ತಾತ್ಕಾಲಿಕವಾಗಿ ನಿವಾರಣೆಯಾಗಿದೆ.

click me!