
ಬೆಂಗಳೂರು (ಆ.14): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕಾನೂನು ಹೋರಾಟದಲ್ಲಿ ಕೋರ್ಟ್ ನೀಡಿದ ಆದೇಶದಂತೆ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಮತ್ತೆ ಜೈಲು ಪಾಲಾಗಿ ಭರ್ತಿ ಒಂದು ವರ್ಷ ಕಳೆದಿದೆ. ಪತಿ ದೀರ್ಘಕಾಲದಿಂದ ಜೈಲಿನಲ್ಲೇ ಇರುವುದು ಮತ್ತು ಕೋರ್ಟ್‌ನಲ್ಲಿ ಪದೇ ಪದೇ ಹಿನ್ನಡೆಯಾಗುತ್ತಿರುವುದು ಪತ್ನಿ ವಿಜಯಲಕ್ಷ್ಮಿ ಅವರ ಮೇಲೆ ತೀವ್ರ ಮಾನಸಿಕ ಪರಿಣಾಮ ಬೀರಿದೆ. ದರ್ಶನ್ ಮತ್ತೆ ಜೈಲಿಗೆ ತೆರಳಿ 1 ವರ್ಷ ಪೂರೈಸಿರುವ ಈ ಸಂದರ್ಭದಲ್ಲಿ, ವಿಜಯಲಕ್ಷ್ಮಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿರುವ ಭಾವುಕ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ಮೊದಲ ಬಾರಿಗೆ ಬಂಧನಕ್ಕೊಳಗಾಗಿದ್ದು 2024ರ ಜೂನ್ 11ರಂದು. ಆನಂತರ ಅವರಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತಾದರೂ, 2025ರ ಆಗಸ್ಟ್ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿದ ನಂತರ ಅವರನ್ನು ಮತ್ತೆ ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಪ್ರಸ್ತುತ ದರ್ಶನ್ ಮತ್ತೆ ಜೈಲು ಸೇರಿ 1 ವರ್ಷ ಪೂರ್ಣಗೊಂಡಿದೆ.
ದರ್ಶನ್ ಜೈಲಿನಲ್ಲಿ ಒಂದು ವರ್ಷ ಪೂರೈಸಿದ್ದರೂ, ವಿಜಯಲಕ್ಷ್ಮಿ ಅವರಿಗೆ ಪತಿಯ ಅಗಲಿಕೆಯ ನೋವು ಮತ್ತು ಸಮಾಜದಲ್ಲಿ ವ್ಯಕ್ತವಾಗುತ್ತಿರುವ ಚರ್ಚೆಗಳು ತಂದೊಡ್ಡಿದ ಗಾಯ ಮಾಸಿಲ್ಲ. ಪ್ರಕರಣದ ವಿಚಾರಣೆ ಹಾಗೂ ದಿನನಿತ್ಯದ ಕಾನೂನು ಹೋರಾಟವನ್ನು ಏಕಾಂಗಿಯಾಗಿ ಎದುರಿಸುತ್ತಿರುವ ಅವರು, ತಮ್ಮ ಮನದಾಳದ ಅಸಹನೀಯ ವೇದನೆಯನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪತಿ ದರ್ಶನ್ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿರುವ ಅವರು, ಒಂದು ವರ್ಷ ಕಳೆದುಹೋಗಿದೆ. ಆ ಗಾಯ ಇನ್ನೂ ಮಾಸಿಲ್ಲ, ಮತ್ತು ಆ ನೋವು ಕೂಡ ಇನ್ನೂ ಸಹಿಸಲಸಾಧ್ಯವಾಗಿದೆ. ಅರ್ಥಮಾಡಿಕೊಳ್ಳಲಾಗದ ವಿಷಯಗಳ ಬಗ್ಗೆ ಜಗತ್ತು ತನ್ನದೇ ಆದ ರೀತಿಯಲ್ಲಿ ತೀರ್ಪು ನೀಡಬಹುದು. ಆದರೆ ನಾನು ಈಗ ನನ್ನನ್ನು ಸಮರ್ಥಿಸಿಕೊಳ್ಳುವುದನ್ನೇ ಅಥವಾ ವಿವರಣೆ ನೀಡುವುದನ್ನೇ ನಿಲ್ಲಿಸಿದ್ದೇನೆ. ಈಗ ನಾನು ಕೇವಲ ನಗುತ್ತೇನೆ ಅಷ್ಟೇ. ಉಳಿದದ್ದನ್ನು ಕಾಲ ಹಾಗೂ ದೇವರ ನಿರ್ಧಾರಕ್ಕೆ ಬಿಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್‌ಗೂ ಮುನ್ನ ವಿಜಯಲಕ್ಷ್ಮಿ ಅವರು ಕಾಮಾಕ್ಯ ದೇವಿಯ ಫೋಟೋ ಹಂಚಿಕೊಂಡು, ದೇವರಿಗೆ ಗೊತ್ತು ಅಷ್ಟೇ ಸಾಕು ಎಂದು ಬರೆದುಕೊಂಡಿದ್ದರು. ಜೊತೆಗೆ ಅದರ ಹಿನ್ನೆಲೆಯಲ್ಲಿ ಎಲ್ಲಿಗೆ ಓಡುವೆ ಓ ಮನುಜ.. ನಿನ್ನ ಕರ್ಮಗಳೆಲ್ಲ ಇಲ್ಲೇ ಕೊನೆ ಎಂಬ ಮಾರ್ಮಿಕ ಹಾಡನ್ನು ಸೇರಿಸಿದ್ದರು.
ದರ್ಶನ್ ಮತ್ತೆ ಬಂಧನಕ್ಕೊಳಗಾದ ದಿನದಿಂದಲೂ ಕುಟುಂಬವನ್ನು ಸಂಭಾಳಿಸುತ್ತಾ, ಅಭಿಮಾನಿಗಳನ್ನು ಶಾಂತವಾಗಿರುವಂತೆ ವಿನಂತಿಸುತ್ತಾ, ಮಾನಸಿಕವಾಗಿ ಗಟ್ಟಿಯಾಗಿ ನಿಲ್ಲಲು ವಿಜಯಲಕ್ಷ್ಮಿ ಶ್ರಮಿಸುತ್ತಿದ್ದಾರೆ. ದರ್ಶನ್ ಕೇಸ್‌ನಲ್ಲಿ ಮುಂದೇನಾಗಲಿದೆ ಎಂಬ ಆತಂಕದ ಬೆನ್ನಲ್ಲೇ ವಿಜಯಲಕ್ಷ್ಮಿ ಅವರ ಈ ಭಾವುಕ ಪೋಸ್ಟ್, ದರ್ಶನ್ ಕುಟುಂಬ ಹೊರಗಡೆ ಅನುಭವಿಸುತ್ತಿರುವ ನೋವಿಗೆ ಕನ್ನಡಿ ಹಿಡಿದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.