'ಶಾಂತಂ ಪಾಪಂ'ನಲ್ಲಿ ಚಾರ್ಲಿ ಚಾಪ್ಲೀನ್ ಸ್ಪೆಷಲ್ ಎಪಿಸೋಡ್, ಕ್ರೈಂ ಜೊತೆ ಕಾಮಿಡಿ ಯಾಕಂತೀರಾ?

By Suvarna NewsFirst Published Feb 14, 2021, 11:10 AM IST
Highlights

'ಶಾಂತಂ ಪಾಪಂ' ತಂಡ ವ್ಯಾಲಂಟೈನ್ಸ್ ಡೇ ಪ್ರಯುಕ್ತ ಚಾರ್ಲಿ ಚಾಪ್ಲೀನ್ ಅವರ ಬಗೆಗೆ ವಿಶೇಷ ಎಪಿಸೋಡನ್ನು ಫೆಬ್ರವರಿ 15 ರಂದು ಪ್ರಸಾರ ಮಾಡಲಿದೆಯಂತೆ. ಕನ್ನಡ ಕಿರುತೆರೆಯ ಮಟ್ಟಿಗೆ ಇದೊಂದು ವಿನೂತನ ಪ್ರಯತ್ನವಾಗಿದೆ. 

'ಪಾಪ ಹೇಳುವ ಕಥೆಗಳು, ಪಾಠ ಕಲಿಸುವ ಕಥೆಗಳು' ಎಂಬ ಟ್ಯಾಗ್ ಲೈನ್‌ನೊಂದಿಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಶೋ 'ಶಾಂತಂ ಪಾಪಂ' . ಪ್ರತಿದಿನ ಹೊಸ ಹೊಸ ಕಥೆಗಳೊಂದಿಗೆ, ಕ್ರೈಂ ಹುಟ್ಟುವ ಬಗ್ಗೆ, ಅದರಿಂದ ಕಲಿಯಬೇಕಾದ ಪಾಠಗಳ ಬಗ್ಗೆ ಉತ್ತಮ ಸಂದೇಶಗಳೊಂದಿಗೆ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. 

ಇದೀಗ ಶಾಂತಂ ಪಾಪಂ ತಂಡ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ವ್ಯಾಲಂಟೈನ್ಸ್ ಡೇ ಪ್ರಯುಕ್ತ ಚಾರ್ಲಿ ಚಾಪ್ಲೀನ್ ಅವರ ಬಗೆಗೆ ವಿಶೇಷ ಎಪಿಸೋಡನ್ನು ಫೆಬ್ರವರಿ 15 ರಂದು ರಾತ್ರಿ 10 ಗಂಟೆಗೆ ಪ್ರಸಾರ ಮಾಡಲಿದೆಯಂತೆ. ಕನ್ನಡ ಕಿರುತೆರೆಯ ಮಟ್ಟಿಗೆ ಇದೊಂದು ವಿನೂತನ ಪ್ರಯತ್ನವಾಗಿದೆ. 

ಚಾರ್ಲಿ ಚಾಪ್ಲೀನ್ ಚಲನಚಿತ್ರ ಜಗತ್ತು ಕಂಡ ಮಹಾನ್ ನಟ, ನಿರ್ದೇಶಕ, ನಿರ್ಮಾಪಕ, ಸಂಭಾಷಣೆಕಾರ. ಎಲ್ಲಕ್ಕಿಂತ ಹೆಚ್ಚಾಗಿ ವಿಭಿನ್ನ ಮ್ಯಾನರಿಸಂ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದಾತ. ಎಷ್ಟೇ ನೋವಿದ್ದರೂ ಅದನ್ನು ಅದುಮಿ, ತಾನೂ ಖುಷಿಯಾಗಿದ್ದು, ಇತರರನ್ನೂ ಖುಷಿಯಾಗಿಟ್ಟಿದ್ದ ಅಪರೂಪದ ವ್ಯಕ್ತಿ. ಅವರ ಚಿತ್ರಗಳನ್ನು ಆಸ್ವಾದಿಸಿ ಬೆಳೆದವರಿಗೆ ಆತ ಒಬ್ಬ ಆತ್ಮೀಯ ಸ್ನೇಹಿತ ಎನಿಸುವುದರಲ್ಲಿ ಅನುಮಾನವೇ ಇಲ್ಲ. ಇದೆಲ್ಲಾ ಸರಿ, ಚಾರ್ಲಿ ಚಾಪ್ಲೀನ್‌ಗೂ, ವ್ಯಾಲಂಟೈನ್ಸ್‌ ಡೇ ಗೂ, ಶಾಂತ ಪಾಪಂಗೂ ಎತ್ತಣಿಂದೆತ್ತ ಸಂಬಂಧ ಅಂತೀರಾ..? ಇದರಲ್ಲಿಯೇ ಇದೆ ವಿಶೇಷ. 

ನಿಜ ಜೀವನದಲ್ಲಿ ನಡೆದ ಅಪರಾಧಗಳು, ಒಂದು ಕ್ರೈಂ ಹೇಗೆ ಹುಟ್ಟಿಕೊಳ್ಳುತ್ತದೆ ಎನ್ನುವುದರ ಸುತ್ತ ಸುತ್ತುವ ಶಾಂತಂ ಪಾಪಂ ನಲ್ಲಿ ಇದೇ ಮೊದಲ ಬಾರಿಗೆ ಕ್ರೈಂ ಹಾಗೂ ಕಾಮಿಡಿ ಸಮ್ಮಿಶ್ರಣವನ್ನು ಚಾಪ್ಲೀನ್ ಛಾಯೆಯಲ್ಲಿ ತರಲು ಪ್ರಯತ್ನಿಸಲಾಗಿದೆ. ಕ್ರೈಂನಲ್ಲಿ ಕಾಮಿಡಿ ಜಾನರ್‌ನ ತರೋದು ಸುಲಭವಲ್ಲ. ತಂದರೂ ಪ್ರೇಕ್ಷಕರಿಗೆ ಅಸಮಂಬದ್ಧ ಎನಿಸದಂತೆ ತೋರಿಸುವುದು ಇನ್ನೂ ಸವಾಲು.  ಹಾಗಾಗಿ ಈ ಬಾರಿಯ ವ್ಯಾಲಂಟೈನ್ಸ್ ಡೇ ಎಪಿಸೋಡ್ ತುಂಬಾ ವಿಶೇಷ ಹಾಗೂ ವಿಭಿನ್ನವಾಗಿರಲಿದೆ. ಫೆಬ್ರವರಿ 15 ರಂದು ರಾತ್ರಿ 10 ಗಂಟೆಗೆ ನೋಡೋದು ಮರೆಯಬೇಡಿ. 

ಚಾಪ್ಲೀನ್ ಸಿನಿಮಾಗಳಲ್ಲಿ ತೋರಿಸುವಂತೆ ಮಾನವೀಯತೆ, ಸಹಾನುಭೂತಿ, ಅಮರ ಪ್ರೇಮ, ನವಿರಾದ ಪ್ರೀತಿ  ಜೊತೆ ಕ್ರೈಂನ ಲೇಪನ ಕೊಟ್ಟು, ಚಾಂಪ್ಲೀನನ್ನು ಕನ್ನಡಕ್ಕೆ ತರಲಾಗಿದೆ. ಗೋವಿಂದನಾಗಿ ಚಾಪ್ಲೀನ್ ನಮಗೆ ಇನ್ನಷ್ಟು ಹತ್ತಿರವಾಗುವುದರಲ್ಲಿ ಅನುಮಾನವೇ ಇಲ್ಲ. 

ಡಾವೆಂಕಿ ರಾವ್ ಕತೆಗೆ ಪ್ರಶಾಂತ್ ಕೃಷ್ಣ ಸಂಭಾಷಣೆ ಬರೆದಿದ್ಧಾರೆ. ನವೀನ್ ಸೋಮನಹಳ್ಳಿ ನಿರ್ದೇಶನ, ರವಿಕುಮಾರ್ ನಿರ್ಮಾಣವಿದೆ. ಕುಂದಾಪುರದ ತ್ರಾಸಿ, ಮರವಂತೆ ಬೀಚ್‌ಗಳ ಆಸುಪಾಸುಗಳಲ್ಲಿ ರವಿ ಕನಕಪುರ ಛಾಯಾಗ್ರಹಣ ಅದ್ಭುತವಾಗಿ ಮೂಡಿ ಬಂದಿದೆ. ಸಿಲ್ಲಿ ಲಲ್ಲಿ ಖ್ಯಾತಿಯ ಕಾಂಪೌಂಡರ್ ಗೋವಿಂದ, ಎಂಎನ್‌ಎಲ್ ಪಾತ್ರದಲ್ಲಿ ಜನಪ್ರಿಯ ಜೋಡಿಗಳಾಗಿದ್ದ ವಿನೋದ್ ಗೊಬ್ಬರಗಾಲ ಮತ್ತು ನಾಗನಿಧಿ ನಟಿಸಿದ್ದಾರೆ. 
 

click me!