
‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆಗಳು ವೀಕ್ಷಕರಿಗೆ ಒಂದರ ಮೇಲೊಂದು ಸರ್ಪ್ರೈಸ್ ನೀಡುತ್ತಿವೆ. ಎಲಿಮಿನೇಷನ್‌ನಿಂದ ಹಿಡಿದು ಎಮರ್ಜೆನ್ಸಿ ಎಕ್ಸಿಟ್‌ವರೆಗೆ, ಇದೀಗ ವೈಲ್ಡ್ ಕಾರ್ಡ್ ಎಂಟ್ರಿಯವರೆಗೂ ಬಿಗ್ ಬಾಸ್ ಮನೆ ಸಂಪೂರ್ಣವಾಗಿ ಹೊಸ ತಿರುವು ಪಡೆದುಕೊಂಡಿದೆ. ನಿನ್ನೆಯ ‘ಕಿಚ್ಚನ ಪಂಚಾಯಿತಿ’ ಸಂಚಿಕೆಯಲ್ಲಿ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರನಡೆದಿದ್ದಾರೆ. ವೈಷ್ಣವಿ ಮತ್ತು ಅವಿನಾಶ್ ಅವರ ಬಿಗ್ ಬಾಸ್ ಜರ್ನಿ ಅಂತ್ಯಗೊಂಡಿದೆ.
ಆದರೆ ಇದೇ ವೇಳೆ ಎಮರ್ಜೆನ್ಸಿ ಎಕ್ಸಿಟ್ ಮೂಲಕ ಹೊರಬಂದಿದ್ದ ತಾಂಡವ್ ರಾಮ್ ಮತ್ತೆ ಮನೆಗೆ ಮರಳುವುದು ಬಹುತೇಕ ಖಚಿತವಾಗಿದೆ. ಇದರ ಜೊತೆಗೆ ಇಂದು ಬಿಗ್ ಬಾಸ್ ಮನೆಗೆ ಮೂವರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡಲಿದ್ದಾರೆ. ಈ ವಿಚಾರವನ್ನು ಕಿಚ್ಚ ಸುದೀಪ್ ನಿನ್ನೆಯ ಸಂಚಿಕೆಯಲ್ಲಿ ಹೇಳಿದ್ದರು. ಇದೀಗ ಹೊಸ ಸ್ಪರ್ಧಿಗಳ ಪ್ರವೇಶಕ್ಕೆ ಸಂಬಂಧಿಸಿದ ಪ್ರೋಮೋ ಕೂಡ ಬಿಡುಗಡೆಯಾಗಿದೆ.
ತಾಂಡವ್ ರಾಮ್‌ಗೆ ಕಿವಿ ಹಿಡಿದ ಕಿಚ್ಚ..
ನಿನ್ನೆಯ ಎಪಿಸೋಡ್‌ನಲ್ಲೊಂದು ಕ್ಷಣ ವೀಕ್ಷಕರ ಗಮನ ಸೆಳೆಯಿತು. ಎಮರ್ಜೆನ್ಸಿ ಎಕ್ಸಿಟ್ ಮೂಲಕ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದ ತಾಂಡವ್ ರಾಮ್ ವೇದಿಕೆಗೆ ಆಗಮಿಸಿದ್ದರು. ಅವರಿಗೆ ಅವರ ಸಂಪೂರ್ಣ ಜರ್ನಿಯ ವಿಡಿಯೋ ತೋರಿಸಲಾಗುತ್ತಿತ್ತು. ಆದರೆ ವಿಡಿಯೋ ಅರ್ಧಕ್ಕೆ ನಿಂತಾಗ ತಾಂಡವ್ ಕೂಡ ಒಂದು ಕ್ಷಣ ಶಾಕ್ ಆಗಿದ್ದರು. ಆಗಲೇ ಕಿಚ್ಚ ಸುದೀಪ್ ತಮ್ಮದೇ ಸ್ಟೈಲ್‌ನಲ್ಲಿ ಸರ್ಪ್ರೈಸ್ ಕೊಟ್ಟಿದ್ದಾರೆ.
‘ನಿಮ್ಮ ಜರ್ನಿ ಇನ್ನೂ ಮುಗಿದಿಲ್ಲ’ ಎಂಬ ಸಂದೇಶ ನೀಡುವ ಮೂಲಕ ತಾಂಡವ್ ರಾಮ್ ಮತ್ತೆ ಬಿಗ್ ಬಾಸ್ ಮನೆಗೆ ಹೋಗುವ ಸುಳಿವು ನೀಡಿದ್ದಾರೆ. ಅಷ್ಟೇ ಅಲ್ಲ, ತಾಂಡವ್ ಅವರನ್ನು ತಮ್ಮ ಬಳಿ ಕರೆಸಿಕೊಂಡ ಸುದೀಪ್ ಕಾಫಿ ಕೂಡ ನೀಡಿದ್ದಾರೆ. ಈ ವೇಳೆ ಮನೆಯೊಳಗೆ ‘ಕೋ-ವಿಐಪಿ’ ಆಗಿರಬೇಡಿ ಎಂದು ತಾಂಡವ್‌ಗೆ ಹಿಂದೆ ಹೇಳಿದ್ದ ಮಾತನ್ನು ನೆನಪಿಸಿಕೊಂಡು, ಮಜವಾಗಿ ಅವರ ಕಿವಿ ಹಿಡಿದಿದ್ದಾರೆ.
ಈ ಕ್ಷಣ ನಿನ್ನೆಯ ಎಪಿಸೋಡ್‌ನ ಕ್ಯೂಟ್ ಮೂಮೆಂಟ್‌ಗಳಲ್ಲಿ ಒಂದಾಗಿತ್ತು. ಇದಕ್ಕಿಂತ ಇಂಟರೆಸ್ಟಿಂಗ್ ಎಂದರೆ, ‘ಬಿಗ್ ಬಾಸ್ ವೇದಿಕೆಯಲ್ಲಿ 12 ವರ್ಷಗಳಲ್ಲಿ ನನ್ನ ಬಳಿ ಕಿವಿ ಹಿಡಿಸಿಕೊಂಡ ಮೊದಲ ಸ್ಪರ್ಧಿ ನೀವೇ’ ಎಂದು ಸುದೀಪ್ ತಾಂಡವ್‌ಗೆ ಹೇಳಿದ್ದಾರೆ. ಅದಕ್ಕೆ ತಾಂಡವ್ ರಾಮ್ ಕೂಡ ‘ಈ ಬಗ್ಗೆ ನನಗೆ ಹೆಮ್ಮೆ ಇದೆ ಸರ್’ ಎಂದು ಹೇಳಿದ್ದು, ಈ ಮಾತುಕತೆ ವೀಕ್ಷಕರಿಗೆ ಇಷ್ಟವಾಗಿದೆ.
ವೈಷ್ಣವಿ, ಅವಿನಾಶ್‌ಗೆ ಎಮರ್ಜೆನ್ಸಿ ಎಕ್ಸಿಟ್!
ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್ ಭಾನುವಾರದ ಸಂಚಿಕೆಯಲ್ಲಿ ನಡೆಯುತ್ತದೆ. ಆದರೆ ಈ ಬಾರಿ ‘ಎಮರ್ಜೆನ್ಸಿ ಎಕ್ಸಿಟ್’ ಎಂಬ ವಿಭಿನ್ನ ಕಾನ್ಸೆಪ್ಟ್ ಇರುವುದರಿಂದ ಶನಿವಾರವೇ ಇಬ್ಬರು ಸ್ಪರ್ಧಿಗಳು ಹೊರಬಂದಿದ್ದಾರೆ. ವೈಷ್ಣವಿ ಮತ್ತು ಅವಿನಾಶ್ ಬಿಗ್ ಬಾಸ್ ಮನೆಯಿಂದ ಹೊರನಡೆದಿದ್ದಾರೆ. ಮೊದಲಿಗೆ ಸ್ಪರ್ಧಿಗಳಿಗೆ ಕಾಯಿ ಒಡೆಯುವ ಟಾಸ್ಕ್ ನೀಡಲಾಗಿತ್ತು. ಯಾವ ಕಾಯಿಯೊಳಗೆ ಕಣ್ಣಿನ ಚಿತ್ರ ಇರುವುದಿಲ್ಲವೋ, ಆ ಸ್ಪರ್ಧಿ ಎಲಿಮಿನೇಟ್ ಆಗುತ್ತಾರೆ ಎಂದು ತಿಳಿಸಲಾಗಿತ್ತು.
ಈ ಟಾಸ್ಕ್‌ನಲ್ಲಿ ಅವಿನಾಶ್ ಅವರ ಜರ್ನಿ ಅಂತ್ಯಗೊಂಡಿದೆ. ನಂತರ ಉಳಿದ ಆಸಿಯಾ, ವೈಷ್ಣವಿ ಮತ್ತು ಧನುಷ್ ಅವರನ್ನು ಆಕ್ಟಿವಿಟಿ ರೂಮ್‌ಗೆ ಕರೆಸಲಾಗಿತ್ತು. ಅಲ್ಲಿ ಅವರಿಗೆ ಮತ್ತೊಂದು ಟಾಸ್ಕ್ ನೀಡಲಾಗಿದ್ದು, ಹುತ್ತಕ್ಕೆ ಹಾಲು ಹಾಕುವ ಚಟುವಟಿಕೆಯಲ್ಲಿ ವೈಷ್ಣವಿ ಹೊರಬಿದ್ದಿದ್ದಾರೆ. ಹೀಗಾಗಿ ಒಂದೇ ಸಂಚಿಕೆಯಲ್ಲಿ ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರನಡೆದಿದ್ದಾರೆ.
ಇಬ್ಬರು ಸ್ಪರ್ಧಿಗಳು ಹೊರಹೋದ ಬೆನ್ನಲ್ಲೇ ಬಿಗ್ ಬಾಸ್ ಮನೆಯೊಳಗೆ ಹೊಸ ಮುಖಗಳ ಪ್ರವೇಶಕ್ಕೆ ವೇದಿಕೆ ಸಿದ್ಧವಾಗಿದೆ. ಇಂದು ಮೂವರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂಬುದನ್ನು ಈಗಾಗಲೇ ಕಿಚ್ಚ ಸುದೀಪ್ ಬಹಿರಂಗಪಡಿಸಿದ್ದಾರೆ. ಇದೀಗ ಈ ಎಂಟ್ರಿಗೆ ಸಂಬಂಧಿಸಿದ ಪ್ರೋಮೋ ಕೂಡ ಬಿಡುಗಡೆಯಾಗಿದೆ. ಪ್ರೋಮೋದಲ್ಲಿ ಹೊಸ ಸ್ಪರ್ಧಿಗಳ ಸಂಪೂರ್ಣ ಗುರುತು ಇನ್ನೂ ಬಹಿರಂಗವಾಗಿಲ್ಲ. ಆದರೆ ಅವರಲ್ಲಿ ಘಾಟಿ ಗಾನವಿ ಕೂಡ ಒಬ್ಬರು ಎನ್ನುವ ಮಾಹಿತಿ ಹರಿದಾಡುತ್ತಿದೆ.
ಹೀಗಾಗಿ ಒಂದೆಡೆ ತಾಂಡವ್ ರಾಮ್ ಮತ್ತೆ ಮನೆಯೊಳಗೆ ಮರಳುತ್ತಿದ್ದರೆ, ಮತ್ತೊಂದೆಡೆ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಹೊಸದಾಗಿ ಪ್ರವೇಶಿಸುತ್ತಿದ್ದಾರೆ. ಇದರ ನಡುವೆ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಅಂದರೆ, ‘ಬಿಗ್ ಬಾಸ್ ಕನ್ನಡ 13’ರಲ್ಲಿ ಒಂದೇ ದಿನ ಎಲಿಮಿನೇಷನ್, ರೀ-ಎಂಟ್ರಿ ಮತ್ತು ವೈಲ್ಡ್ ಕಾರ್ಡ್ ಎಂಟ್ರಿ.. ಎಲ್ಲವೂ ಒಟ್ಟಿಗೆ ನಡೆಯುತ್ತಿದೆ. ಇನ್ನು ಹೊಸ ಸ್ಪರ್ಧಿಗಳು ಮನೆಯೊಳಗೆ ಕಾಲಿಟ್ಟ ಬಳಿಕ ಹಾಲಿ ಸ್ಪರ್ಧಿಗಳ ಆಟ ಹೇಗೆ ಬದಲಾಗಲಿದೆ? ತಾಂಡವ್ ರಾಮ್ ಮತ್ತೆ ಯಾವ ರೀತಿಯ ಆಟ ಆಡಲಿದ್ದಾರೆ? ವೈಲ್ಡ್ ಕಾರ್ಡ್ ಸ್ಪರ್ಧಿಗಳಲ್ಲಿ ಇನ್ನಿಬ್ಬರು ಯಾರು? ಎಂಬ ಕುತೂಹಲ ಇದೀಗ ಹೆಚ್ಚಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.