ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಿಗ್ ಬಾಸ್ ಖ್ಯಾತಿಯ ನಟ ರಂಜಿತ್ -ಮಾನಸಾ ಗೌಡ ದಂಪತಿ

Published : Oct 28, 2026, 10:58 AM IST
actor ranjith wife manasa gowda pregnancy announcement

ಸಾರಾಂಶ

ಬಿಗ್ ಬಾಸ್ ಕನ್ನಡ ಸೀಸನ್ 11 ಖ್ಯಾತಿಯ ನಟ ರಂಜಿತ್ ಕುಮಾರ್ ಮತ್ತು ಅವರ ಫ್ಯಾಷನ್ ಡಿಸೈನರ್ ಪತ್ನಿ ಮಾನಸಾ ಗೌಡ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂತಸದ ವಿಚಾರವನ್ನು ಅವರು ಈಗ ರಿವೀಲ್ ಮಾಡಿದ್ದು, ಈಗ ಸುಂದರವಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಟ, ಬೆಳ್ಳಪರದೆಯಲ್ಲೂ ಮಿಂಚಿರುವ 'ಬಿಗ್ ಬಾಸ್ ಕನ್ನಡ ಸೀಸನ್ 11' ಖ್ಯಾತಿಯ ರಂಜಿತ್ ಕುಮಾರ್ ಹಾಗೂ ಪತ್ನಿ, ಫ್ಯಾಷನ್ ಡಿಸೈನರ್ ಮಾನಸಾ ಗೌಡ ಅವರ ಮನೆಯಲ್ಲಿ ಈಗ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ತಮ್ಮ ಪ್ರೀತಿಯ ಸಂಕೇತವಾಗಿ ಈ ದಂಪತಿ ಇದೀಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ, ಈ ಸಂಭ್ರಮವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

2025ರಲ್ಲಿ ಪ್ರೀತಿಸಿ ಮದುವೆಯಾಗಿದ್ದ ಜೋಡಿ

ಕಿರುತೆರೆ ರಂಗದಲ್ಲಿ ಸಕ್ರಿಯರಾಗಿದ್ದ ರಂಜಿತ್ ಕುಮಾರ್ ಹಾಗೂ ಮಾನಸಾ ಗೌಡ ಅವರು ಕೆಲಕಾಲ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಕುಟುಂಬಗಳ ಒಪ್ಪಿಗೆಯೊಂದಿಗೆ 2025ರ ಮಾರ್ಚ್ ತಿಂಗಳಲ್ಲಿ ಈ ಜೋಡಿಯ ಅದ್ದೂರಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿತ್ತು. ತದನಂತರ ಮೇ 11, 2025 ರಂದು ಬಂಧು-ಮಿತ್ರರ ಸಮ್ಮುಖದಲ್ಲಿ ಇಬ್ಬರೂ ಹಸೆಮಣೆ ಏರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಇದೀಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರೆಗ್ನೆನ್ಸಿ ಅನೌನ್ಸ್‌ಮೆಂಟ್ ನ ಸುಂದರ ವಿಡಿಯೋ ಹಂಚಿಕೊಂಡಿರುವ ದಂಪತಿ, "ನಮ್ಮ ಕುಟುಂಬ ಬೆಳೆಯುತ್ತಿದ್ದು, ನಿಮ್ಮೆಲ್ಲರ ಆಶೀರ್ವಾದ ಹಾಗೂ ಪ್ರೀತಿ ನಮ್ಮ ಮೇಲಿರಲಿ" ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಅಭಿಮಾನಿಗಳು ದಂಪತಿಗೆ ಅಭಿನಂದನೆ ಸಲ್ಲಿಸಿ ಕಾಮೆಂಟ್ ಮಾಡಿದ್ದಾರೆ.

ಹೆಣ್ಣಿಗೆ ಹೊಸ ಜೀವನ ತಪ್ಪೇ? ಧೈರ್ಯವಾಗಿ ಉತ್ತರಿಸಿ ಮನ ಗೆದ್ದಿದ್ದ ರಂಜಿತ್

ಈ ಹಿಂದೆ ಮಾನಸಾ ಅವರೊಂದಿಗಿನ ಮದುವೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದ್ದ ಕೆಲವು ಟೀಕೆಗಳು ಹಾಗೂ ಪ್ರಶ್ನೆಗಳಿಗೆ ನಟ ರಂಜಿತ್ ಕುಮಾರ್ ಅತ್ಯಂತ ದಿಟ್ಟವಾಗಿ ಉತ್ತರ ನೀಡಿ ಮನಸ್ಸು ಗೆದ್ದಿದ್ದರು. ಪತ್ನಿಯ ಮೊದಲ ಮದುವೆಯ 13 ವರ್ಷದ ಮಗಳನ್ನು ತಮ್ಮ ಸ್ವಂತ ಮಗಳಂತೆ ನೋಡಿಕೊಳ್ಳುತ್ತಿರುವ ಬಗ್ಗೆ ಮಾತನಾಡಿ ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದ್ದರು, ಮಾತ್ರವಲ್ಲ ಹೆಣ್ಣಿನ ಬಗ್ಗೆ ಅವರಿಗಿರುವ ಗೌರವ ಎದ್ದು ಕಾಣುತ್ತಿತ್ತು. ಟೀಕೆಗಳಿಗೆ ದಿಟ್ಟವಾಗಿ ಉತ್ತರಿಸಿ ಅವರ ಬಾಯಿ ಮುಚ್ಚಿಸಿ ಅದೆಷ್ಟೋ ಮಂದಿಯ ಮನ ಗೆದ್ದಿದ್ದರು.

ರಂಜಿತ್ ನುಡಿದ ಮಾತುಗಳು:

"ಪತ್ನಿಯ 13 ವರ್ಷದ ಮಗಳನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಯಾವುದೇ ತಪ್ಪು ಅಥವಾ ಅಪರಾಧವಲ್ಲ. ಪ್ರತಿಯೊಬ್ಬ ಹೆಣ್ಣಿಗೂ ಹಾಗೂ ಮಗುವಿಗೂ ಗೌರವಯುತವಾದ ಮತ್ತೊಂದು ಜೀವನ ಪಡೆಯುವ ಹಕ್ಕಿದೆ. ಇದನ್ನು ಪ್ರಶ್ನೆ ಮಾಡುವವರಿಗೆ ಇದು ಅಪರಾಧ ಅನಿಸುತ್ತಾ? ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲಾ ಒಂದು ಕಷ್ಟ , ಸವಾಲುಗಳು ಇದ್ದೇ ಇರುತ್ತವೆ. ನಾವು ಪರಸ್ಪರ ಅರ್ಥ ಮಾಡಿಕೊಂಡು, ಗೌರವ ನೀಡಿ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ.

ಒಬ್ಬ ಹುಡುಗಿ ಹಾಗೂ ಮಗುವಿನ ಜೀವನ ಉತ್ತಮವಾಗುತ್ತಿದೆ ಎಂದಾಗ ಸಮಾಜ ಖುಷಿಪಡಬೇಕು. ನನ್ನ ಪತ್ನಿಯನ್ನು ನಾನು ಪೂರ್ಣಮನಸ್ಸಿನಿಂದ ಸ್ವೀಕರಿಸಿದ ಮೇಲೆ ಆಕೆಯ ಹಿಂದಿನ ಜೀವನ ಮತ್ತು ಮಗಳನ್ನು ಸ್ವೀಕರಿಸುವುದು ನನ್ನ ಜವಾಬ್ದಾರಿ. ಆ ಮಗುವಿಗೆ ಉತ್ತಮ ಭವಿಷ್ಯ ಕೊಡುವುದು ತಪ್ಪೇ? ನನ್ನ ಜೀವನವನ್ನು ನಾನು ಹೇಗೆ ನಡೆಸಬೇಕು ಎಂಬುದನ್ನು ನಿರ್ಧಾರ ಮಾಡುವುದು ನಾನು." ಎಂದು ಖಡಕ್ ಆಗಿಯೇ ಪ್ರತಿಕ್ರಯಿಸಿದ್ದರು.

ರಂಜಿತ್ ಕಿರುತೆರೆ ಹಾಗೂ ಬೆಳ್ಳಿಪರದೆ ಪಯಣ

ರಂಜಿತ್ ಕುಮಾರ್ ಅವರು ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ನಟ. ಪ್ರಸಿದ್ಧ ಧಾರಾವಾಹಿ 'ಶನಿ'ಯಲ್ಲಿ ಸೂರ್ಯ ದೇವನ ಪಾತ್ರದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ಇದರ ಜೊತೆಗೆ 'ಅಮೃತವರ್ಷಿಣಿ', 'ಮೀರಾ ಮಾಧವ', 'ಅವನು ಮತ್ತೆ ಶ್ರಾವಣಿ' ಹೀಗೆ ಹಲವು ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಧಾರಾವಾಹಿಗಳಷ್ಟೇ ಅಲ್ಲದೆ ಬೆಳ್ಳಿಪರದೆ ಮೇಲೆಯೂ ಮಿಂಚಿರುವ ರಂಜಿತ್, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಸಿನಿಮಾಗಳಲ್ಲೂ ಗಮನಾರ್ಹ ಪಾತ್ರಗಳಲ್ಲಿ ನಟಿಸಿದ್ದಾರೆ. ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 11'ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ತಮ್ಮ ವ್ಯಕ್ತಿತ್ವದಿಂದ ವೀಕ್ಷಕರ ಮನಗೆದ್ದಿದ್ದರು.

ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿರುವ ರಂಜಿತ್ ಹಾಗೂ ಮಾನಸಾ ಗೌಡ ದಂಪತಿಗೆ ನಮ್ಮ ಕಡೆಯಿಂದಲೂ ಸುಂದರ ಶುಭಾಶಯಗಳು. ತುಂಬು ಕುಟುಂಬ ನಿಮ್ಮದಾಗಲಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಾಸ್ ಸ್ಪರ್ಧಿಗಳ 'ಹೋಮ್ ಟೂರ್' ಮಾಡಬೇಡಿ!: ಯೂಟ್ಯೂಬರ್ ಅಮಿತ್‌ಗೆ ಮನವಿ ಮಾಡಿದ ಕಲರ್ಸ್ ಕನ್ನಡ!
ನನ್ನ ವೈಯಕ್ತಿಕ ಜೀವನದಲ್ಲಿ ಆದ ಘಟನೆಗಳಿಗೆ ಮೈಮಾಟ ಹಾಡು ಉತ್ತರವಲ್ಲ, ಸ್ಪಷ್ಟನೆ ನೀಡಿದ ರ‍್ಯಾಪರ್ ಚಂದನ್‌ ಶೆಟ್ಟಿ