ಹದಿನೈದನೇ ವಾರಕ್ಕೆ ಚೈತ್ರಾ ಕುಂದಾಪುರ ಅವರು ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಮನೆಯಿಂದ ಹೊರಗಡೆ ಬಂದಿದ್ದಾರೆ. ಹಾಗಾದರೆ ಚೈತ್ರಾ ಕುಂದಾಪುರ ಅವರಿಗೆ ಸಿಕ್ಕ ಬಹುಮಾನ ಎಷ್ಟು?
ʼಕೇಳುವಷ್ಟು ಕೇಳಿದ್ದೇವೆ, ನೋಡುವಷ್ಟು ನೋಡಿದ್ದೇವೆʼ ಎಂದು ದೊಡ್ಡ ದೊಡ್ಡ ವೇದಿಕೆಗಳಲ್ಲಿ ಭಾಷಣ ಬಿಗಿಯುತ್ತಿದ್ದ ಚೈತ್ರಾ ಕುಂದಾಪುರ ಈಗ ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಮನೆಯಿಂದ ಹೊರಗಡೆ ಬಂದಿದ್ದಾರೆ. ಇನ್ನೇನು ಫಿನಾಲೆಗೆ ಎರಡು ವಾರ ಇರುವಾಗಲೇ ಚೈತ್ರಾ ಕುಂದಾಪುರ ಅವರ ಬೀಳ್ಕೊಡುಗೆಯಾಗಿದೆ. ಟ್ರೋಫಿ ತೆಗೆದುಕೊಂಡು ಹೋಗೋಕೆ ಆಗಿಲ್ಲ ಎಂಬ ಬೇಸರದ ಮಧ್ಯೆಯೂ ಚೈತ್ರಾ ಕುಂದಾಪುರ ಅವರಿಗೆ ಒಂದಷ್ಟು ಬಹುಮಾನ ಸಿಕ್ಕಿದೆ.
ಖುಷಿಯೂ ಇದೆ! ಬೇಸರವೂ ಇದೆ!
105 ದಿನಗಳ ಕಾಲ ʼಬಿಗ್ ಬಾಸ್ʼ ಮನೆಯಲ್ಲಿದ್ದ ಚೈತ್ರಾ ಕುಂದಾಪುರ ಅವರಿಗೆಯೇ ಇಷ್ಟೆಲ್ಲ ದಿನ ಈ ಮನೆಯಲ್ಲಿ ಇರುತ್ತೀನೋ ಇಲ್ಲವೋ ಎಂಬ ಯೋಚನೆ ಮೊದಲೇ ಕಾಡಿತ್ತಂತೆ. ಮೊದಲ ವಾರ ದೊಡ್ಮನೆಯಿಂದ ಹೊರಗಡೆ ಬರಬಾರದು, ಆಮೇಲೆ ನಾನು ಎಷ್ಟೇ ದಿನ ಇದ್ದರೂ ಅದು ನನಗೆ ಬೋನಸ್ ಎಂದು ಚೈತ್ರಾ ಲೆಕ್ಕ ಹಾಕಿದ್ದರು. ಆನಂತರ ಉಳಿದ ಸ್ಪರ್ಧಿಗಳ ಜೊತೆ ಆಟ ಆಡಿ ಹದಿನೈದು ವಾರ ಇದ್ದಿದ್ದಕ್ಕೆ ಹೆಮ್ಮೆಯೂ, ಫಿನಾಲೆವರೆಗೂ ಇಲ್ಲದೆ ಇದ್ದಿದ್ದಕ್ಕೆ ಬೇಸರವೂ ಶುರುವಾಗಿದೆಯಂತೆ.
ಬಹುಮಾನ ಎಷ್ಟು?
ಒಟ್ಟೂ ಮೂವರು ಆಯೋಜಕರಿಂದ ಚೈತ್ರಾ ಕುಂದಾಪುರ ಅವರಿಗೆ ಎರಡು ಲಕ್ಷ ರೂಪಾಯಿ ನಗದು ಹಣ ಸಿಕ್ಕಿದೆ. ಇದರ ಜೊತೆಗೆ ಚೈತ್ರಾ ಕುಂದಾಪುರಗೆ ಉಳಿದ ಸಂಭಾವನೆಯೂ ಸಿಗುತ್ತಿದೆ. ಮೊದಲೇ ಮಾಡಿಕೊಂಡ ಒಪ್ಪಂದದಂತೆ ಚೈತ್ರಾ ಕುಂದಾಪುರ ಅವರಿಗೆ ಎಪಿಸೋಡ್‌ಗೆ ಇಂತಿಷ್ಟು ಎಂದು ಹಣ ನಿಗದಿಪಡಿಸಲಾಗುತ್ತದೆ. ಅದರಂತೆ ಚೈತ್ರಾ ಕುಂದಾಪುರಗೆ ಒಟ್ಟೂ ಹದಿನೈದು ವಾರದ ಸಂಭಾವನೆ ಸಿಗಲಿದೆ.
ಕ್ಷಮೆ ಕೇಳಿದ ಚೈತ್ರಾ ಕುಂದಾಪುರ!
ಚೈತ್ರಾ ಕುಂದಾಪುರ ಅವರು ಮಾತಿನಿಂದಲೇ ಗುರುತಿಸಿಕೊಂಡವರು. ಈ ಮಾತೇ ಅವರಿಗೆ ವರ ಆಗಿದ್ದೂ ಉಂಟು, ಶಾಪವೂ ಆಗಿದ್ದೂ ಇದೆ. ದೊಡ್ಮನೆಯಲ್ಲಿ ಚೈತ್ರಾ ಕುಂದಾಪುರ ಅವರು ಅಗತ್ಯಕ್ಕಿಂತ ಜಾಸ್ತಿ ಮಾತನಾಡಿದ್ದು ಮನೆಯವರಿಗೆ ಕಿರಿಕಿರಿ ತಂದಿದ್ದೂ ಇದೆ. ಇದನ್ನೇ ಅಲ್ಲಿನ ಸ್ಪರ್ಧಿಗಳು ಹೇಳಿಕೊಂಡಿದ್ದರು. ಅಂದಹಾಗೆ ಈ ವಿಚಾತವಾಗಿ ಕಿಚ್ಚ ಸುದೀಪ್ ಕೂಡ ಚೈತ್ರಾ ಕಾಲೆಳೆದಿದ್ದರು. ಕೊನೆಯದಾಗಿ ಚೈತ್ರಾ ಕುಂದಾಪುರ ಅವರು ಕಿಚ್ಚ ಸುದೀಪ್‌ಗೆ ಕ್ಷಮೆ ಕೇಳಿದ್ದಾರೆ. “ನನ್ನ ಮಾತಿನಿಂದ ಬೇಸರ ಆಗಿದ್ರೆ ಕ್ಷಮಿಸಿ ಸರ್. ನಾನು ನಿಮ್ಮನ್ನು ಇಷ್ಟು ಹತ್ತಿರದಿಂದ ನೋಡ್ತೀನಿ ಅಂದುಕೊಂಡಿರಲಿಲ್ಲ. ಆ ಭಾಗ್ಯ ನನಗೆ ಸಿಕ್ಕಿದೆ. ತುಂಬ ಖುಷಿಯಾಯ್ತು” ಎಂದು ಚೈತ್ರಾ ಹೇಳಿದಾಗ ಸುದೀಪ್ ಅವರು, “ಇಲ್ಲ, ನನಗೆ ಯಾವುದೇ ಬೇಸರ ಆಗಿಲ್ಲ. ನಾನು ಯಾವುದೇ ವಿಷಯವನ್ನು ವೈಯಕ್ತಿಕವಾಗಿ ತಗೊಳ್ಳಲ್ಲ. ನಾನು ಇಲ್ಲಿ ಏನು ಹೇಳಬೇಕೋ ಅದನ್ನು ಹೇಳಬೇಕಾಗುತ್ತದೆ, ಅದು ನನ್ನ ಕರ್ತವ್ಯ” ಎಂದು ಹೇಳಿದ್ದಾರೆ.
ʼಬಿಗ್ ಬಾಸ್ʼ ಮನೆಲಿ ಅನುಪಸ್ಥಿತಿ ಕಾಣಿಸತ್ತೆ!
“ನೀವು ದೊಡ್ಮನೆಯಲ್ಲಿ ಇಲ್ಲದೆ ಇರೋದು ಅನುಪಸ್ಥಿತಿ ಕಾಣಿಸುತ್ತದೆ. ಬೇರೆ ರಂಗದಿಂದ ಇಲ್ಲಿಗೆ ಬಂದು ಇಷ್ಟುದಿನ ಎಲ್ಲಿ ಮಾತಾಡಬೇಕೋ ಅಲ್ಲಿ ಮಾತಾಡಿ ಆಟ ಆಡಿದ್ದು ನಿಜಕ್ಕೂ ಖುಷಿಯ ವಿಷಯ” ಎಂದು ಕಿಚ್ಚ ಸುದೀಪ್ ಅವರು ಚೈತ್ರಾ ಕುಂದಾಪುರಗೆ ಮೆಚ್ಚುಗೆ ಸೂಚಿಸಿದ್ದಾರೆ.
ಪೇಚಿಗೆ ಸಿಲುಕಿದ್ರು!
ಭಾಷಣ ಮಾಡೋದು, ಜಗಳ ಮಾಡೋದು ಮಾತ್ರ ಚೈತ್ರಾ ಕುಂದಾಪುರ ಅಂತ ಎಲ್ಲರೂ ಭಾವಿಸಿದ್ದರು. ನಾನು ನಗೋದು, ಅಳೋದನ್ನು ಯಾರೂ ಕೂಡ ನೋಡಿರಲಿಲ್ಲ. ಆದರೆ ಭಾಷಣ, ಕಾಂಟ್ರವರ್ಸಿ ಮುಖದಾಚೆಯೂ ಚೈತ್ರಾ ಕುಂದಾಪುರ ಇದ್ದಾಳೆ ಅಂತ ತೋರಿಸಿಕೊಡೋಕೆ ನಾನು ʼಬಿಗ್ ಬಾಸ್ʼ ಮನೆಗೆ ಬಂದಿದ್ದೇನೆ ಎಂದು ಚೈತ್ರಾ ಆರಂಭದಲ್ಲಿಯೇ ಹೇಳಿದ್ದರು. ಆದರೆ ಆಡುವ ಬರದಲ್ಲಿ ಕೆಲವು ಕಡೆ ಅನಗತ್ಯ ಮಾತಾಡಿ ಪೇಚಿಗೆ ಸಿಲುಕಿದ್ದರು. ಒಟ್ಟಿನಲ್ಲಿ ಮಿಶ್ರ ಪ್ರತಿಕ್ರಿಯೆಗಳ ಜೊತೆಗೆ ಚೈತ್ರಾ ಕುಂದಾಪುರ ಅವರು ದೊಡ್ಮನೆಯಿಂದ ಹೊರಗಡೆ ಬಂದಿದ್ದಾರೆ.