ಕನ್ನಡಿಗರೇ ಆದರೂ ಪರಭಾಷೆಯ ವೇದಿಕೆಯ ಮೇಲೆ ಮಿಂಚುವುದು ಸುಲಭದ ಮಾತಲ್ಲ. ಅದರಲ್ಲೂ ತೆಲುಗು ಭಾಷೆಯನ್ನು ಅಷ್ಟೇ ನಿರರ್ಗಳವಾಗಿ ಮಾತನಾಡುತ್ತಾ, ಜೀ ತೆಲುಗು ವಾಹಿನಿಯ ಜನಪ್ರಿಯ ‘ಸರಿಗಮಪ’ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವ ಬೆಂಗಳೂರು ಮೂಲದ ಯುವ ಗಾಯಕಿ ಕೀರ್ತನಾ ಚಂದ್ರು ಸದ್ಯ ಗಮನ ಸೆಳೆಯುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಕೀರ್ತನಾ, ತಮಗೆ ಈ ಅವಕಾಶ ಸಿಕ್ಕಿದ್ದು ಹೇಗೆ ಮತ್ತು ತಮ್ಮ ಹಿನ್ನೆಲೆ ಏನು ಎಂಬುದನ್ನು ಮನಬಿಚ್ಚಿ ಹಂಚಿಕೊಂಡಿದ್ದಾರೆ.
ಸಂದರ್ಶನದ ಆರಂಭದಲ್ಲೇ ನಿರೂಪಕರಿಗೆ ಕೀರ್ತನಾ ಅವರ ಭಾಷೆಯ ಬಗ್ಗೆ ದೊಡ್ಡ ಗೊಂದಲವಾಗಿತ್ತು. "ನೀವು ಕನ್ನಡಿಗರು ಅಂತ ನನಗೆ ಗೊತ್ತೇ ಇರಲಿಲ್ಲ, ನಾನು ಕನ್ಫ್ಯೂಸ್ ಆಗ್ತಿದ್ದೀನಿ. ನೀವು ಕನ್ನಡಿಗರೋ ಅಥವಾ ತೆಲುಗು ಹುಡುಗಿಯೋ? ಅಷ್ಟು ಸೂಪರ್ ಆಗಿ ತೆಲುಗು ಮಾತನಾಡ್ತಿದ್ದೀರ" ಎಂದು ನಿರೂಪಕರು ಅಚ್ಚರಿ ವ್ಯಕ್ತಪಡಿಸಿದರು. ಇದಕ್ಕೆ ನಗುತ್ತಲೇ ಉತ್ತರಿಸಿದ ಕೀರ್ತನಾ ಚಂದ್ರು, "ನಾನು ಅಪ್ಪಟ ಕನ್ನಡತಿ, ಕರ್ನಾಟಕದವಳು. ಆದರೆ ಈಗ ಹೈದರಾಬಾದ್ಗೆ ಬಂದು ತೆಲುಗು ಹುಡುಗಿಯೂ ಆಗಿಬಿಟ್ಟಿದ್ದೇನೆ" ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ.
ಹೈದರಾಬಾದ್ ನಂಟಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ನಾನು ಹೈದರಾಬಾದ್ಗೆ ಬಂದಿರುವುದು ಕೇವಲ ‘ಸರಿಗಮಪ’ ಶೋಗಾಗಿ ಮಾತ್ರ. ಇದಕ್ಕೂ ಮುನ್ನ ಸುಮಾರು ಹತ್ತು ವರ್ಷಗಳ ಹಿಂದೆ ಕುಟುಂಬದವರ ಜೊತೆ ಟ್ರಿಪ್ಗಾಗಿ ರಾಮೋಜಿ ಫಿಲ್ಮ್ ಸಿಟಿಗೆ ಬಂದಿದ್ದೆ ಅಷ್ಟೇ. ನಾನು ವಾಸವಿರುವುದು ಕರ್ನಾಟಕದ ಬೆಂಗಳೂರಿನಲ್ಲಿ. ಸದ್ಯ ಈ ಸಿಂಗಿಂಗ್ ಶೋಗಾಗಿ ಬೆಂಗಳೂರಿನಿಂದ ಹೈದರಾಬಾದ್ಗೆ ಬಂದು ಹಾಡಿ, ಮತ್ತೆ ವಾಪಸ್ ಊರಿಗೆ ತೆರಳುತ್ತೇನೆ. ಹೀಗೆ ಅಪ್ ಅಂಡ್ ಡೌನ್ ಮಾಡುತ್ತಾ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದೇನೆ" ಎಂದು ತಮ್ಮ ಪಯಣವನ್ನು ವಿವರಿಸಿದ್ದಾರೆ.
ತಮಗೆ ಜೀ ತೆಲುಗಿನ ಪ್ರತಿಷ್ಠಿತ ವೇದಿಕೆಯಲ್ಲಿ ಹಾಡುವ ಅವಕಾಶ ಸಿಕ್ಕಿದ್ದು ಹೇಗೆ ಎಂಬ ಕುತೂಹಲಕಾರಿ ಸಂಗತಿಯನ್ನೂ ಕೀರ್ತನಾ ಬಿಚ್ಚಿಟ್ಟಿದ್ದಾರೆ. "ಒಂದು ದಿನ ಸುಮ್ಮನೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ (Reels) ಸ್ಕ್ರೋಲ್ ಮಾಡುತ್ತಿದ್ದಾಗ ಜೀ ತೆಲುಗು ವಾಹಿನಿಯ ಪೋಸ್ಟರ್ ಕಣ್ಣಿಗೆ ಬಿತ್ತು" ಎಂದು ತಿಳಿಸಿದ್ದಾರೆ. ಆ ಪೋಸ್ಟರ್ ಕಂಡ ನಂತರವೇ ತಮಗೆ ಈ ಜನಪ್ರಿಯ ವೇದಿಕೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು ಎಂಬುದನ್ನು ಅವರು ಸಂತಸದಿಂದ ಹಂಚಿಕೊಂಡಿದ್ದಾರೆ.
ಇದೇ ವೇಳೆ ನಿರೂಪಕರು, "ನೀವು ಈ ಹಿಂದೆ ಬೇರೆ ಎಲ್ಲೂ ಹಾಡಿಲ್ಲವೇ, ಕೇವಲ ಮನೆಯಲ್ಲಿ ಹಾಡುತ್ತಿದ್ದಿರಾ ಅಥವಾ ಸಂಗೀತ ಕಲಿತಿದ್ದೀರಾ?" ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೀರ್ತನಾ, "ತೆಲುಗು ರಿಯಾಲಿಟಿ ಶೋನಲ್ಲಿ ನಾನು ಭಾಗವಹಿಸುತ್ತಿರುವುದು ಇದೇ ಮೊದಲು. ಈ ಹಿಂದೆ ಯಾವುದೇ ತೆಲುಗು ಶೋನಲ್ಲಿ ಪಾಲ್ಗೊಂಡಿರಲಿಲ್ಲ. ಆದರೆ ನಾನು ‘ಸರಿಗಮಪ ಕನ್ನಡ’ ರಿಯಾಲಿಟಿ ಶೋನ ಜೂನಿಯರ್ಸ್ ವಿಭಾಗದಲ್ಲಿ ಭಾಗವಹಿಸಿದ್ದೆ. ಸೀನಿಯರ್ ವಿಭಾಗದಲ್ಲಿ ಭಾಗವಹಿಸಿರಲಿಲ್ಲ. ಹೀಗಾಗಿ ನನ್ನ ಮೊದಲ ಸೀನಿಯರ್ ರಿಯಾಲಿಟಿ ಶೋ ಇದೇ ಆಗಿದೆ" ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ, ಕನ್ನಡದ ಜೂನಿಯರ್ಸ್ ವೇದಿಕೆಯಿಂದ ಶುರುವಾದ ಕೀರ್ತನಾ ಚಂದ್ರು ಅವರ ಸಂಗೀತ ಪಯಣ, ಇದೀಗ ತೆಲುಗಿನ ಸೀನಿಯರ್ ವೇದಿಕೆಯವರೆಗೆ ಸಾಗಿರುವುದು ವಿಶೇಷವಾಗಿದೆ. ತಾಯ್ನಾಡು ಬೆಂಗಳೂರಿನಲ್ಲಿ ನೆಲೆಸಿದ್ದರೂ, ಹೈದರಾಬಾದ್ಗೆ ಪ್ರಯಾಣಿಸುತ್ತಾ ಪರಭಾಷೆಯ ವೇದಿಕೆಯಲ್ಲೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವ ಈ ಕನ್ನಡತಿಯ ಆತ್ಮವಿಶ್ವಾಸ ನಿಜಕ್ಕೂ ಗಮನಾರ್ಹವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.