
ಬೆಂಗಳೂರು (ಸೆ.21): ಸ್ಯಾಂಡಲ್‌ವುಡ್ ಹಾಗೂ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಜನಪ್ರಿಯ ನಟಿ ಆಶಿಕಾ ರಂಗನಾಥ್ (Ashika Ranganath) ಹಾಗೂ ಎಕ್ಸ್ ಹ್ಯಾಂಡಲ್ 'ರಂಗಸ್ಥಳಂ' (Rangasthalam) ಖಾತೆಯ ನಡುವೆ ಸಣ್ಣ ಮಟ್ಟದ ವಾಕ್ಸಮರ ನಡೆದಿದೆ. ಇತ್ತೀಚೆಗೆ 'ಪೆದ್ದಿ' (PEDDI) ಚಿತ್ರದಲ್ಲಿ ನಟಿ ಜಾನ್ವಿ ಕಪೂರ್‌ರನ್ನು ಚಿತ್ರಿಸಿದ್ದ ವಿಚಾರದ ಬಂದಿದ್ದ ವರದಿಯೊಂದನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದ ಆಶಿಕಾ, ಇದೀಗ ತಮ್ಮ ವೈಯಕ್ತಿಕ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಫೋಟೋ ಒಂದರಿಂದಾಗಿ ನೆಟ್ಟಿಗರ ಪ್ರಶ್ನೆಗೆ ಗುರಿಯಾಗಿದ್ದಾರೆ.
ಕೆಲ ತಿಂಗ:ಳ ಹಿಂದೆ ನಟ ರಾಮ್ ಚರಣ್ (Ram Charan) ಅಭಿನಯದ 'ಪೆದ್ದಿ' ಸಿನಿಮಾದಲ್ಲಿ ನಾಯಕಿ ಜಾನ್ವಿ ಕಪೂರ್ (Janhvi Kapoor) ಅವರ ಪಾತ್ರ ಹಾಗೂ ಗ್ಲಾಮರಸ್ ದೃಶ್ಯಗಳ ಕುರಿತು ಮಾಧ್ಯಮವೊಂದರಲ್ಲಿ ಲೇಖನ ಪ್ರಕಟವಾಗಿತ್ತು. ಅದರಲ್ಲಿ "ಸ್ಟಾರ್ ನಟರ ಎದುರು ನಟಿಸುವ ನಟಿಯರನ್ನು ದೂಷಿಸಬೇಡಿ. ಚಿತ್ರರಂಗದ ವ್ಯವಸ್ಥೆ ಹಾಗೂ ನಿರ್ಮಾಪಕರನ್ನು ದೂಷಿಸಿ. ನಟಿಯರ ಪಾತ್ರಗಳಿಗೆ ಸರಿಯಾದ ಪ್ರಾಮುಖ್ಯತೆ ಇರದಿದ್ದರೆ ಅದಕ್ಕೆ ಬರಹಗಾರರು ಮತ್ತು ನಿರ್ದೇಶಕರ ನಿರ್ಧಾರವೇ ಕಾರಣ" ಎಂಬ ಸಾರಾಂಶವಿತ್ತು. ಈ ಲೇಖನದ ಭಾಗವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದ ಆಶಿಕಾ, "ಚಿತ್ರರಂಗದ ಸಿಸ್ಟಮ್ ಹಾಗೂ ಮೇಕರ್‌ಗಳನ್ನು ದೂಷಿಸಿ..." ಎಂದು ಬರೆದುಕೊಂಡಿದ್ದರು.
ಇದರ ಬಳಿಕ ಆಶಿಕಾ ರಂಗನಾಥ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾನುವಾರ ಗೋವಾ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ತಮ್ಮ ಮುಖವನ್ನು ಕ್ರಾಪ್ ಮಾಡಿ, ಕೇವಲ ಶರ್ಟ್, ಜೀನ್ಸ್ ಮತ್ತು ಸೊಂಟದ ಭಾಗ (Lace belt) ಹಾಗೂ ಕೊರಳಿನ ಸಣ್ಣ ಕ್ಯಾಮೆರಾ ಡಿಸೈನ್ ಕಾಣಿಸುವಂತಹ ಫೋಟೋ ಒಂದನ್ನು ಮೊದಲ ಸ್ಲೈಡ್ ಆಗಿ ಪೋಸ್ಟ್ ಮಾಡಿದ್ದರು. ಇದನ್ನು ಗಮನಿಸಿದ 'ರಂಗಸ್ಥಳಂ' ಎಕ್ಸ್ ಹ್ಯಾಂಡಲ್, ಆಶಿಕಾ ಅವರ ಎರಡು ಪೋಸ್ಟ್‌ಗಳನ್ನು ಕೊಲಾಜ್ ಮಾಡಿ ಪ್ರಶ್ನೆ ಮಾಡಿತ್ತು.
ಇದು ನಟಿ ಆಶಿಕಾ ರಂಗನಾಥ್ ಅವರ ದ್ವಿಮುಖ ನೀತಿ. ಪೆದ್ದಿ ಸಿನಿಮಾ ಬಿಡುಗಡೆಯ ಸಮಯದಲ್ಲಿ 'ಇಂತಹದ್ದೇ ಮಾರಾಟವಾಗುತ್ತದೆ ಎಂದು ಭಾವಿಸುವ ವ್ಯವಸ್ಥೆ ಹಾಗೂ ನಿರ್ಮಾಪಕರನ್ನು ದೂಷಿಸಿ' ಎಂದಿದ್ದರು. ಆದರೆ ಈಗ... ತಮ್ಮ ವೈಯಕ್ತಿಕ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಮುಖವನ್ನೇ ಕ್ರಾಪ್ ಮಾಡಿ ಇಂತಹ ಫೋಟೋ ಪೋಸ್ಟ್ ಮಾಡಲು ಯಾವ ವ್ಯವಸ್ಥೆ (System) ಇವರನ್ನು ಒತ್ತಾಯಿಸಿತು? ಎಂದು ಪ್ರಶ್ನೆ ಮಾಡಿತ್ತು.
'ರಂಗಸ್ಥಳಂ' ಹ್ಯಾಂಡಲ್‌ನ ಈ ಪೋಸ್ಟ್‌ಗೆ ಸ್ವತಃ ನಟಿ ಆಶಿಕಾ ರಂಗನಾಥ್ ಕಮೆಂಟ್ ಮಾಡುವ ಮೂಲಕ ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ. "ದಯವಿಟ್ಟು ನಾನು ಸೃಷ್ಟಿಸದೇ ಇರುವ ಯಾವುದೇ ಕಥೆಗೆ ನನ್ನನ್ನು ಎಳೆಯಬೇಡಿ. ನಾನು ಸಿನಿಮಾಗಳಲ್ಲಿ ಮಹಿಳೆಯರ ಪಾತ್ರಗಳನ್ನು ಸರಿಯಾಗಿ ಬರೆಯದಿರುವ ಕುರಿತು ಸಾಮಾನ್ಯ ವಿಷಯವಾಗಿ ಮಾತನಾಡಿದ್ದೆ ಅಷ್ಟೇ. ಯಾವುದೇ ನಿರ್ದಿಷ್ಟ ಸಿನಿಮಾ, ವ್ಯಕ್ತಿ ಅಥವಾ ಅಂಗಪ್ರದರ್ಶನದ (Skin show) ಕುರಿತು ನಾನು ಮಾತನಾಡಿರಲಿಲ್ಲ. ಅಷ್ಟೇ. ಈ ಫೋಟೋದಿಂದ ನಿಮಗೆ ಅಸಮಾಧಾನ ಉಂಟಾಗಿದ್ದರೆ ಕ್ಷಮಿಸಿ. ಈ ಫೋಟೋವನ್ನು ನನ್ನ ಮುಖವನ್ನು ಮುಚ್ಚಿಕೊಳ್ಳುವ ಉದ್ದೇಶದಿಂದ ಕ್ರಾಪ್ ಮಾಡಿಲ್ಲ. ಅಲ್ಲಿ ಕುತ್ತಿಗೆಗೆ ಧರಿಸಿದ್ದ ಸಣ್ಣ ಕ್ಯಾಮೆರಾ ಹಾಗೂ ಜೀನ್ಸ್‌ನ ಲೇಸ್ ಬೆಲ್ಟ್ ನಮಗೆ ಮುದ್ದಾಗಿ ಕಂಡಿದ್ದರಿಂದ, ಅದರ ಸೌಂದರ್ಯಾತ್ಮಕತೆಗಾಗಿ (Aesthetics) ಹಾಗೆ ಫೋಟೋ ತೆಗೆಯಲಾಗಿತ್ತು. ದೇಹದ ಯಾವುದೇ ನಿರ್ದಿಷ್ಟ ಭಾಗವನ್ನು ಜೂಮ್ ಮಾಡುವ ಅಥವಾ ಹೈಲೈಟ್ ಮಾಡುವ ಉದ್ದೇಶ ಅಲ್ಲಿರಲಿಲ್ಲ ಎಂದಿದ್ದಾರೆ.
ಆಶಿಕಾ ನೀಡಿದ ಈ ಸ್ಪಷ್ಟನೆಯ ನಂತರ, ನಟಿಯರ ವೈಯಕ್ತಿಕ ಫೋಟೋಶೂಟ್ ಸ್ವಾತಂತ್ರ್ಯ ಮತ್ತು ಸಿನಿಮಾಗಳಲ್ಲಿ ನಟಿಯರ ಪಾತ್ರ ಚಿತ್ರಣದ ನಡುವಿನ ವ್ಯತ್ಯಾಸಗಳ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.