ಅಮೃತಧಾರೆಯ ನಟಿ ಭೂಮಿಕಾ ಅರ್ಥಾತ್ ಛಾಯಾ ಸಿಂಗ್ ಹಾಗೂ ಅವರ ಪತಿ ಕೃಷ್ಣ ಜೊತೆಗಿನ ಕ್ಯೂಟ್ ವಿಡಿಯೋ ವೈರಲ್ ಆಗಿದ್ದು, ಫ್ಯಾನ್ಸ್ ನಟಿಯ ಕಾಲೆಳೆಯುತ್ತಿದ್ದಾರೆ.
ಸೀರಿಯಲ್ಗಳು ಎಂದರೆ ಹಾಗೆನೇ. ಧಾರಾವಾಹಿಯಲ್ಲಿನ ನಾಯಕ-ನಾಯಕಿಯರೇ ನಿಜವಾದ ಜೊತೆಗಾರರು, ಅವರೇ ನಿಜವಾದ ಪತಿ-ಪತ್ನಿ ಎಂದುಕೊಳ್ಳುವವರೂ ಇದ್ದಾರೆ, ಇಲ್ಲದೇ ಹೋದರೆ, ನೀವಿಬ್ಬರೂ ನಿಜ ಜೀವನದಲ್ಲಿಯೂ ಯಾಕೆ ಮದ್ವೆಯಾಗಬಾರದು ಎಂದೂ ಪ್ರಶ್ನಿಸುತ್ತಾರೆ. ಅಷ್ಟರ ಮಟ್ಟಿಗೆ ಸೀರಿಯಲ್ಗಳ ಪಾತ್ರಗಳು ಹೆಚ್ಚಿನ ಪ್ರೇಕ್ಷಕರನ್ನು ಹೊಕ್ಕಿ ಬಿಟ್ಟಿರುತ್ತದೆ. ಇಲ್ಲಿರುವುದು ಕೇವಲ ಪಾತ್ರಧಾರಿಗಳು ಎನ್ನುವುದನ್ನು ಮರೆತು, ನಿಜವಾದ ಜೀವನದಲ್ಲಿಯೇ ಘಟನೆಗಳು ನಡೆಯುತ್ತಿವೆಯೋ ಎನ್ನುವಷ್ಟರ ಮಟ್ಟಿಗೆ ಸೀರಿಯಲ್ ಪಾತ್ರಗಳನ್ನು ತಮ್ಮ ಮೇಲೆಯೇ ಆಹ್ವಾನೆ ಮಾಡಿಕೊಳ್ಳುವವರೂ ಇದ್ದಾರೆ. ಅದರಲ್ಲಿ ಒಂದು ಅಮೃತಧಾರೆ ಸೀರಿಯಲ್. ಇಲ್ಲಿನ ನಾಯಕಿ ಭೂಮಿಕಾ ಮತ್ತು ನಾಯಕ ಗೌತಮ್ ನಡುವೆ ಈಗಷ್ಟೇ ಪ್ರೇಮಾಂಕುರವಾಗಿದೆ. ಇಬ್ಬರೂ ತಮ್ಮ ಪ್ರೀತಿಯನ್ನು ನೇರವಾಗಿ ಹೇಳಿಕೊಳ್ಳಲು ಪರದಾಡುತ್ತಿದ್ದಾರೆ. ಅದೆಷ್ಟೋ ಬಾರಿ ಭೂಮಿಕಾ ಪರೋಕ್ಷವಾಗಿ ಗೌತಮ್ಗೆ ಪ್ರೀತಿಯ ವಿಷಯ ಹೇಳಿದರೂ ಪ್ರೀತಿ-ಪ್ರೇಮದ ವಿಷಯದಲ್ಲಿ ತುಂಬಾ ಹಿಂದೆ ಇರುವ ಗೌತಮ್ಗೆ ಅವೆಲ್ಲಾ ಅರ್ಥವೇ ಆಗಿಲ್ಲ.
ಇದೀಗ ಸ್ನೇಹಿತ ಆನಂದ್ ಗೌತಮ್ಗೆ ಟಿಪ್ಸ್ ಕೊಡುತ್ತಿದ್ದಾನೆ. ಅವನು ಕೊಟ್ಟ ಟಿಪ್ಸ್ ಫಾಲೋ ಮಾಡುವುದು ಗೌತಮ್ ಕೆಲಸ. ಇದೀಗ ಗುಲಾಬಿ ಹೂವನ್ನು ಹಿಡಿದು ಗೌತಮ್ ಡಬಲ್ ಆ್ಯಕ್ಟಿಂಗ್ ಶುರು ಮಾಡಿಕೊಂಡಿದ್ದಾನೆ. ಗುಲಾಬಿ ಹೂವನ್ನು ಭೂಮಿಕಾಕ್ಕೆ ಕೊಟ್ಟು ಐ ಲವ್ ಯೂ ಅಂದರೆ ಅವಳ ರಿಯಾಕ್ಷನ್ ಹೇಗಿರುತ್ತದೆ ಎಂದು ತಾನೇ ಕಲ್ಪನೆ ಮಾಡಿಕೊಂಡು ನಗುತ್ತಾ ನಾಚಿಕೊಳ್ಳುತ್ತಿದ್ದಾನೆ. ಅಷ್ಟಕ್ಕೂ ಇದು ರೀಲ್ ಕಥೆಯಷ್ಟೇ. ರಿಯಲ್ ಲೈಫ್ನಲ್ಲಿ ಭೂಮಿಕಾ ಅರ್ಥಾತ್ ಛಾಯಾ ಸಿಂಗ್ ಹಾಗೂ ಗೌತಮ್ ಅರ್ಥಾತ್ ರಾಜೇಶ್ ಇಬ್ಬರಿಗೂ ಮದುವೆಯಾಗಿದ್ದು, ತಮ್ಮ ರಿಯಲ್ ಲೈಫ್ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಭೂಮಿಕಾ ಅಂದರೆ ಛಾಯಾ ಸಿಂಗ್ ಅವರ ವಿಷಯಕ್ಕೆ ಬರುವುದಾದರೆ, ಅವರು ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಇದ್ದಾರೆ. ಇದೀಗ ಅವರ ಫ್ಯಾನ್ಸ್ ಪೇಜ್ನಿಂದ ಛಾಯಾ ಸಿಂಗ್ ಮತ್ತು ಅವರ ನಿಜ ಜೀವನದ ಪತಿ ಕೃಷ್ಣ ಅವರ ರೊಮ್ಯಾಂಟಿಕ್ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದೆ. ಇದರಲ್ಲಿ ಕೃಷ್ಣ ಅವರು ತಮ್ಮ ಪತ್ನಿ ಛಾಯಾ ಕುರಿತು ಮಾತನಾಡಿದ್ದಾರೆ, ಜೊತೆಗೆ ಗುಲಾಬಿ ಹೂವಿನ ಗುಚ್ಛ ನೀಡಿ ಮತ್ತೊಮ್ಮೆ ಪ್ರಪೋಸ್ ಮಾಡಿದ್ದಾರೆ. ಇದರಿಂದ ಭಾವುಕರಾಗಿರುವ ಛಾಯಾ ಅವರು ಆನಂದ ಭಾಷ್ಪ ಹರಿಸಿದ್ದಾರೆ. ಜೊತೆಗೆ ಇಬ್ಬರೂ ಕೈ ಕೈ ಹಿಡಿದು ಡ್ಯಾನ್ಸ್ ಮಾಡಿದ್ದಾರೆ. ಇನ್ನು ಈ ಜೋಡಿಯ ಕುರಿತು ಹೇಳುವುದಾದರೆ, ಕೃಷ್ಣ ಅವರ ಜೊತೆ ಛಾಯಾ ಅವರ ಮದುವೆಯಾಗಿ 11 ವರ್ಷಗಳು ಕಳೆದಿವೆ. ಇನ್ಸ್ಟಾಗ್ರಾಮ್ನಲ್ಲಿ ಅವರು ಪತಿಯ ಜೊತೆ ಆಗಾಗ ಫೋಟೋ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ಇಲ್ಲಿ ನಿಂತರೆ ಗೌತಮ್, ಅಲ್ಲಿ ನಿಂತರೆ ಭೂಮಿಕಾ... ಡುಮ್ಮ ಸರ್ ಡಬಲ್ ಆ್ಯಕ್ಟಿಂಗ್ಗೆ ಮನಸೋತ ವೀಕ್ಷಕರು
ಅವರಿಗೆ ಕೃಷ್ಣ ಅವರ ಪರಿಚಯವಾದದ್ದು, ತಮಿಳು ಚಿತ್ರದಲ್ಲಿ ನಟಿಸುವ ಸಮಯದಲ್ಲಿ. ಕೃಷ್ಣ ಅವರೂ ಸಿನಿಮಾರಂಗದಲ್ಲೇ ಇದ್ದು, ತಮಿಳು ಕಿರುತೆರೆಯ ಜನಪ್ರಿಯ ನಟ. 2010ರಲ್ಲಿ ತಮಿಳು ನಟ ಕೃಷ್ಣರನ್ನು ಮೊದಲು ಭೇಟಿಯಾಗಿದ್ದರು. 'ಆನಂದಪುರತು ವೀಡ್' (Anandhapurathu Veedu) ಎಂಬ ಸಿನಿಮಾದ ವೇಳೆ ಭೇಟಿಯಾದ ಇವರು ಪರಸ್ಪರ ಇಷ್ಟಪಟ್ಟು ನಂತರ ಹಿರಿಯರ ಒಪ್ಪಿಸಿ, ಅವರ ಆಶೀರ್ವಾದ ಪಡೆದು 2012ರಲ್ಲಿ ಮದುವೆಯಾಗಿದ್ದಾರೆ. 2010ರಲ್ಲಿ ತೆರೆ ಕಂಡ ಈ ಚಿತ್ರ ಸೂಪರ್‌ನ್ಯಾಚುರಲ್ ಮಿಸ್ಟರಿ ಸಿನಿಮಾವಾಗಿದ್ದು, ಇವರಿಬ್ಬರೂ ನಟಿಸಿದ್ದಾರೆ. ನಿರ್ದೇಶಕ ಶಂಕರ್ ನಿರ್ಮಾಣದ ಈ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ಹೆಚ್ಚು ಸಿಕ್ಕಿತ್ತು. ಈ ಸಿನಿಮಾದಲ್ಲಿ ಛಾಯಾ ಅವರು ನಾಯಕಿ ಪಾತ್ರ ಮಾಡಿದ್ದರೆ ಕೃಷ್ಣ (Krishna) ಅವರು ನೆಗೆಟಿವ್ ಪಾತ್ರ ಮಾಡಿದ್ದರು. ಇನ್ನು ರನ್ ಎನ್ನುವ ಧಾರಾವಾಹಿಯಲ್ಲಿ ಕೃಷ್ಣ, ಛಾಯಾ ಸಿಂಗ್ ಒಟ್ಟಿಗೆ ನಟಿಸಿದ್ದರು. 2019ರಲ್ಲಿ ಈ ಧಾರಾವಾಹಿ ಪ್ರಸಾರ ಆಗಿ 197 ಎಪಿಸೋಡ್ ಪ್ರಸಾರ ಆಗಿತ್ತು. ಟಿಆರ್‌ಪಿ ಕಾರಣದಿಂದವೋ ಅಥವಾ ಇನ್ಯಾವುದೋ ಕಾರಣಕ್ಕೋ ಏನೋ ಈ ಸೀರಿಯಲ್ ಬಹುಬೇಗ ಅಂತ್ಯ ಆಗಿತ್ತು.
ಇದೀಗ ಪತಿಯ ಜೊತೆಗಿನ ಈ ಕ್ಯೂಟ್ ವಿಡಿಯೋ ನೋಡಿ ಅಭಿಮಾನಿಗಳು ಛಾಯಾ ಅವರ ಕಾಲೆಳೆಯುತ್ತಿದ್ದಾರೆ. ಅತ್ತ ಅಮೃತಧಾರೆಯಲ್ಲಿ ಗುಲಾಬಿ ಹೂವು ಹಿಡಿದು ಪ್ರೀತಿ ನಿವೇದನೆ ಮಾಡಿಕೊಳ್ಳಲು ನಿಮ್ಮ ಪತಿ ಗೌತಮ್ ಕಾಯುತ್ತಿದ್ದರೆ, ಇಲ್ಲಿ ಇವರ ಜೊತೆ ರೊಮ್ಯಾನ್ಸ್ ಮಾಡ್ತಾ ಇದ್ದೀರಾ? ಅವರ ಹೂವು ಪಡೆಯುವ ಬದಲು ಇವರು ಕೊಟ್ಟ ಹೂಗುಚ್ಛ ಪಡೀತಿದ್ದೀರಾ ಎಂದು ತಮಾಷೆಯ ಕಮೆಂಟ್ ಹಾಕುತ್ತಿದ್ದಾರೆ.