ಕಾಡು ಪ್ರಾಣಿಗಳು ನಾಡಿಗೆ ನುಗ್ಗಿ ದಾಳಿ ಮಾಡುತ್ತಿರುವ ಘಟನೆ ಹೆಚ್ಚಾಗುತ್ತಿವೆ. ತುಮಕೂರಿನಲ್ಲಿ ಹೆಬ್ಬೂರು ಬಳಿ ಮಹಿಳೆಯನ್ನು ಚಿರತೆ ಶಿಕಾರಿಯಾಡಿದ್ದು ಅದೇನಾದರೂ ನರಭಕ್ಷಕವಾಗಲಿದೆಯೇ ಎಂಬ ಅನುಮಾನ ಗ್ರಾಮಸ್ಥರನ್ನು ಕಾಡುತ್ತಿದೆ.
ತುಮಕೂರು(ಅ.18): ಕಾಡಿನಲ್ಲಿ ಬೇಟೆ ಸಿಗದ ಕಾರಣ ನಾಡಿಗೆ ಕಾಡು ಪ್ರಾಣಿಗಳು ನುಗ್ಗುತ್ತಿದ್ದು ಮಾನವ ಮತ್ತು ಪ್ರಾಣಿಗಳ ನಿರಂತರ ಸಂಘರ್ಷ ಕಲ್ಪತರು ಜಿಲ್ಲೆ ಸಾಕ್ಷಿಯಾಗುತ್ತಿದೆ.
ಒಂದು ಕಡೆ ಚಿರತೆ, ಇನ್ನೊಂದೆಡೆ ಕರಡಿ, ಮಗದೊಂದೆಡೆ ಆನೆಗಳು ಅವ್ಯಾಹತವಾಗಿ ನಾಡಿಗೆ ನುಗ್ಗುತ್ತಿರುವ ಪರಿಣಾಮ ಸಂಘರ್ಷ ನಿರಂತರವಾಗಿ ನಡೆಯುತ್ತಿದೆ. ಆನೆಗಳ ಕಾರಿಡಾರ್ ನಾಶ ಮಾಡಿರುವುದರಿಂದ ಜನವಸತಿ ಪ್ರದೇಶಗಳಿಗೆ ಆನೆಗಳು ನುಗ್ಗಿದ್ದು ಹಳೆ ಕಥೆ. ಗುಬ್ಬಿ ತಾಲೂಕು, ಶಿರಾ, ತುಮಕೂರು ಗ್ರಾಮಾಂತರ ಹೀಗೆ ಐದಾರು ತಾಲೂಕುಗಳಲ್ಲಿ ಆನೆಗಳ ದಾಳಿಗೆ ಜನ ಸಾವನ್ನಪ್ಪಿದ್ದಾರೆ.
ಅಣ್ಣ-ತಂಗಿ ಸಾವಿಗೆ ಮೃತ್ಯುವಾದ ಮಕ್ಕಳಾಟ!
ಇನ್ನು ಮಧುಗಿರಿ, ಕೊರಟಗೆರೆ, ಪಾವಗಡದಲ್ಲಿ ಕರಡಿಗಳು ಕಾಣಿಸಿಕೊಳ್ಳುತ್ತಿದ್ದು ಜನ ಭಯಭೀತರಾಗಿದ್ದಾರೆ. ನೇರವಾಗಿ ಕಾಡು ಪ್ರಾಣಿಗಳು ದಾಳಿ ಮಾಡುತ್ತಿಲ್ಲ. ಆದರೆ ಆತ್ಮರಕ್ಷಣೆಗಾಗಿ ಬಹಳಷ್ಟುಸಲ ದಾಳಿ ಮಾಡಿದ್ದು ಉಂಟು.
ಈ ಹಿಂದೆ ತಿಪಟೂರು ತಾಲೂಕಿನಲ್ಲಿ ಚಿರತೆಯೊಂದು ದೇವಸ್ಥಾನದ ಮುಂದೆ ಆಟವಾಡುತ್ತಿದ್ದ ಮಗುವನ್ನು ಹೊತ್ತುಕೊಂಡು ಹೋಗಿತ್ತು. ಈಗ ಹೆಬ್ಬೂರು ಬಳಿ ವೃದ್ಧೆಯೊಬ್ಬರ ಮೇಲೆ ದಾಳಿ ಮಾಡಿ ಸಾಯಿಸಿದೆ.
ಕಾಡಿನಲ್ಲಿ ಹಂದಿಗಳ ಬೇಟೆ
ಅರಣ್ಯ ಪ್ರದೇಶದಲ್ಲಿ ಮನುಷ್ಯರು ಕಾಡು ಹಂದಿಯ ಬೇಟೆಯಾಡುತ್ತಿದ್ದಾರೆ. ಹೀಗಾಗಿ ಚಿರತೆಗಳಿಗೆ ಆಹಾರವೇ ಸಿಗದಂತಾಗಿದೆ. 42.5 ಚದುರ ಕಿ.ಮೀ ವ್ಯಾಪ್ತಿಯ ದೇವರಾಯನದುರ್ಗದಲ್ಲಿ ಇರುವುದು ಬೆರಳೆಣಿಕೆಯಷ್ಟುಜಿಂಕೆಗಳು ಮಾತ್ರ. ಹೀಗಾಗಿ ಕಾಡಿನಲ್ಲಿ ಚಿರತೆಗಳಿಗೆ ಬೇಟೆ ಸಿಗದೆ ಕಾಡಂಚಿನ ಹಳ್ಳಿಗಳಿಗೆ ಬಂದು ನಾಯಿ, ಕುರಿ, ಹಸುಕರುಗಳನ್ನು ತಿನ್ನುತ್ತಿದೆ. ಇನ್ನು ಕೊರಟಗೆರೆ, ಮಧುಗಿರಿ ತಾಲೂಕಿನಲ್ಲಂತೂ ಕರಡಿಗಳ ಸಂತತಿ ಹೆಚ್ಚುತ್ತಿದ್ದು ನಿರಂತರ ದಾಳಿಗಳು ನಡೆಯುತ್ತಿದೆ. ಈ ಹಿಂದೆ ಮಧುಗಿರಿಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಬೇರೆ ಜಿಲ್ಲೆಯಿಂದ ಚುನಾವಣಾ ಸಿಬ್ಬಂದಿಯಾಗಿ ನಿಯೋಜನೆಗೊಂಡಿದ್ದ ಇಬ್ಬರನ್ನು ಕರಡಿ ಕೊಂದು ಹಾಕಿತ್ತು. ಈಗಲೂ ಕೆಲ ಗ್ರಾಮಗಳಲ್ಲಿ ಜನ ಕರಡಿ ಭಯದಿಂದ ಒಬ್ಬೊಬ್ಬರೇ ಓಡಾಡಲು ಹೆದರುತ್ತಿದ್ದಾರೆ.
ಗ್ರಾಮಗಳಲ್ಲಿ ಚಿರತೆಗಳು ಪ್ರತ್ಯಕ್ಷ
ಕಾಡು ತೊರೆದಿರುವ ಚಿರತೆಗಳು ಈಗ ಗ್ರಾಮಗಳಲ್ಲಿ ಪ್ರತ್ಯಕ್ಷವಾಗುತ್ತಿದೆ. ಜಿಲ್ಲೆಯ ಬಹುತೇಕ ಎಲ್ಲಾ ಕಡೆ ಚಿರತೆಗಳು ಕಾಣಸಿಗುತ್ತಿವೆ. ನಮ್ಮ ಗ್ರಾಮದಲ್ಲಿ ಚಿರತೆ ಕಾಟ ಹೆಚ್ಚಾಗಿದೆ. ಕೂಡಲೇ ಚಿರತೆಯನ್ನು ಹಿಡಿಸಿ ಎಂಬ ಮನವಿಯನ್ನು ಜನರು ಅರಣ್ಯ ಇಲಾಖೆಗೆ ನೀಡುತ್ತಲೇ ಇದ್ದಾರೆ. ಆದರೂ ಇಲಾಖೆ ಕ್ರಮ ಕೈಗೊಂಡಿಲ್ಲ. ಒಂದು ವೇಳೆ ಬೋನು ಇಟ್ಟು ಚಿರತೆ ಹಿಡಿದರೂ ಬಳಿಕ ದೇವರಾಯನದುರ್ಗ ಅರಣ್ಯಕ್ಕೆ ಬಿಟ್ಟು ಬರುತ್ತಾರೆ. ಆದರೆ ಚಿರತೆ ಮತ್ತೆ ಜಾಡು ಹಿಡಿದುಕೊಂಡು ನಾಡಿಗೆ ನುಗ್ಗುತ್ತಿದೆ.
ನರಭಕ್ಷಕವಾಗಲಿದೆಯೇ ಚಿರತೆ
ಈಗಾಗಲೇ ಹೆಬ್ಬೂರು ಬಳಿ ಮಹಿಳೆಯನ್ನು ಚಿರತೆ ಶಿಕಾರಿಯಾಡಿದ್ದು ಅದೇನಾದರೂ ನರಭಕ್ಷಕವಾಗಲಿದೆಯೇ ಎಂಬ ಅನುಮಾನ ಗ್ರಾಮಸ್ಥರನ್ನು ಕಾಡುತ್ತಿದೆ. ಒಂದು ತಿಂಗಳಿನಿಂದ ಗ್ರಾಮದಲ್ಲೇ ಅಡ್ಡಾಡಿ ಕುರಿ, ನಾಯಿಗಳನ್ನು ಚಿರತೆ ಬೇಟೆಯಾಡುತ್ತಿತ್ತು. ಈಗ ಮನುಷ್ಯರ ಮೇಲೆ ದಾಳಿ ಮಾಡಿರುವುದರಿಂದ ಮತ್ತೆ ಮತ್ತೆ ದಾಳಿ ಮಾಡುತ್ತದೆಯೇ ಎಂಬ ಭೀತಿಯಲ್ಲಿ ಜನ ಇದ್ದಾರೆ. ಹೀಗಾಗಿ ಆದಷ್ಟುಬೇಗ ಚಿರತೆಯನ್ನು ಹಿಡಿಯಬೇಕೆಂಬ ಮನವಿಯನ್ನು ಮಾಡಿದ್ದಾರೆ.
ಶಾಶ್ವತ ಪರಿಹಾರ ಅಗತ್ಯ:
ಈ ಹಿಂದೆ ತುಮಕೂರಿನ ಜನನಿಬಿಡಿ ರಸ್ತೆಗಳಿಗೆ ಆನೆಗಳು ನುಗ್ಗಿದ್ದರಿಂದ ದೊಡ್ಡ ಪ್ರಹಸನವೇ ನಡೆದು ಹೋಯಿತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಲಿಲ್ಲ. ಆನೆಗಳ ಕಾರಿಡಾರ್ ನಾಶ ಮಾಡಿರುವುದರಿಂದ ಈ ರೀತಿ ಸಮಸ್ಯೆಗಳು ಉಂಟಾಗುತ್ತಿದೆ. ಕಾಡು ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸಂಘರ್ಷ ಕೊನೆಗಾಣಬೇಕಾದರೆ ಅರಣ್ಯ ಇಲಾಖೆ ಇದಕ್ಕೊಂದು ಶಾಶ್ವತ ಪರಿಹಾರ ಕಂಡು ಹಿಡಿಯಬೇಕಾಗಿದೆ.
ಮುಖ್ಯಾಂಶಗಳು
ಜನರು ಕಾಡಿಗೆ ತೆರಳಿ ಹಂದಿಗಳ ಬೇಟೆಯಾಡುತ್ತಿರುವುದರಿಂದ ಚಿರತೆಗಳ ಆಹಾರ ಸರಪಳಿ ಮೇಲೆ ಪೆಟ್ಟು ಬಿದ್ದು ಹಸಿವು ನೀಗಿಸಿಕೊಳ್ಳಲು ಗ್ರಾಮಗಳಿಗೆ ನುಗ್ಗುತ್ತಿವೆ ಎಂದು ವನ್ಯಜೀವಿ ನಿಸರ್ಗ ಜಾಗೃತಿ ಸಂಸ್ಥೆಯ ಬಿ.ವಿ. ಗುಂಡಪ್ಪ ಹೇಳಿದ್ದಾರೆ.
-ಉಗಮ ಶ್ರೀನಿವಾಸ್