ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ತುಮಕೂರಿನ ಹೆಬ್ಬೂರಿನಲ್ಲಿ ವೃದ್ಧೆಯೊಬ್ಬರು ಚಿರತೆಗೆ ಬಲಿಯಾಗಿದ್ದಾರೆ. ಇದರಿಂದ ಗ್ರಾಮದಲ್ಲಿ ಆತಂಕ ಸೃಷ್ಟಿಯಾಗಿದ್ದು, ಚಿರತೆ ಸಂಚಾರ ಮಾಡಿರೋ ಕುರುಹುಗಳೂ ಲಭ್ಯವಾಗಿದೆ.
ತುಮಕೂರು(ಅ.18): ವೃದ್ಧೆಯೊಬ್ಬಳು ಚಿರತೆಗೆ ಬಲಿಯಾಗಿರುವ ಘಟನೆ ಹೆಬ್ಬೂರು ಹೋಬಳಿ ಬನ್ನಿಕುಪ್ಪೆ ಗ್ರಾಮದ ಬಳಿ ನಡೆದಿದೆ.
ಗ್ರಾಮದ ಲಕ್ಷಮ್ಮ(61) ಚಿರತೆಗೆ ಬಲಿಯಾದ ದುರ್ದೈವಿ. ಈಕೆ ಬುಧವಾರ ಮಧ್ಯಾಹ್ನ ಜಾನುವಾರು ಮೇಯಿಸಲು ಹೋಗಿ ಕಣ್ಮರೆಯಾಗಿದ್ದರು. ಸಂಜೆಯವರೆಗೂ ಹುಡುಕಿದರೂ ಪತ್ತೆಯಾಗದ ಕಾರಣ ಕುಟುಂಬಸ್ಥರು ಹೆಬ್ಬೂರು ಪೊಲೀಸ್ ಠಾಣೆಗೆ ದೂರು ನೀಡ್ದಿದರು.
ನಾಡಿಗೆ ನುಗ್ಗುತ್ತಿರುವ ಕಾಡು ಪ್ರಾಣಿಗಳು! ಜನರಲ್ಲಿ ಹೆಚ್ಚಿದ ಆತಂಕ
ಈ ಸಂಬಂಧ ಗುರುವಾರ ಬೆಳಗ್ಗೆ ಪೊಲೀಸರು ಹಾಗೂ ನಾಗರಿಕರು ಹುಡುಕಾಟ ಆರಂಭಿಸಿದಾಗ ಪೊದೆಯ ಬಳಿ ಈಕೆಯ ಶವ ಪತ್ತೆಯಾಗಿದೆ. ಶವದ ಸುತ್ತಮುತ್ತ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಗಿರೀಶ್ ಆಗಮಿಸಿದ್ದರು.
ಕಳೆದ ಕೆಲ ದಿವಸಗಳಿಂದ ಗ್ರಾಮದಲ್ಲಿ ಚಿರತೆ ಸಂಚಾರ ಹೆಚ್ಚಿದ್ದು ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಮೃತಳ ಕುಟುಂಬಕ್ಕೆ 25 ಲಕ್ಷ ರು. ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
ಮಂಡ್ಯ: ಮನೆಗೆ ನುಗ್ಗಿ ನಾಯಿ ಹೊತ್ತೊಯ್ದ ಚಿರತೆ