Tokyo 2020 ಭಾರತ ಹಾಕಿಗೆ ಚೈತನ್ಯ ತುಂಬಿದ್ದ ಒಡಿಶಾ ಸಿಎಂ ನವೀನ್ ಪಟ್ನಾಯಕ್‌

By Kannadaprabha NewsFirst Published Aug 6, 2021, 4:58 PM IST
Highlights

* ಒಲಿಂಪಿಕ್ಸ್‌ನಲ್ಲಿ ಹಾಕಿ ತಂಡ ಮಿಂಚಿನ ಪ್ರದರ್ಶನದ ಹಿಂದಿದೆ ನವೀನ್ ಪಟ್ನಾಯಕ್ ಕೈವಾಡ

* ಒಡಿಶಾದಲ್ಲಿ ವಿಶ್ವ ದರ್ಜೆಯ ಕ್ರೀಡಾಂಗಣ, ತರಬೇತಿ ಸೌಲಭ್ಯಗಳನ್ನು ಸಿದ್ಧಗೊಳಿಸಿದ್ದಾರೆ ಪಟ್ನಾಯಕ್

* ರಾಷ್ಟ್ರೀಯ ಹಾಕಿ ತಂಡಗಳಿಗೆ ಪ್ರಾಯೋಜಕತ್ವ ನೀಡಿದೆ ಒಡಿಶಾ ಸರ್ಕಾರ

ನವದೆಹಲಿ(ಆ.06): ಒಂದು ರಾಜ್ಯ ಸರ್ಕಾರ ರಾಷ್ಟ್ರೀಯ ತಂಡಕ್ಕೆ ಪ್ರಾಯೋಜಕತ್ವ ನೀಡುತ್ತಿದೆ ಎಂದರೆ ಅದು ನವೀನ್‌ ಪಟ್ನಾಯಕ್‌ ಅವರ ಒಡಿಶಾ ಸರ್ಕಾರ ಮಾತ್ರ. 2018ರಲ್ಲಿ ಸಹಾರಾ ಸಂಸ್ಥೆ ಭಾರತೀಯ ಹಾಕಿ ಪ್ರಾಯೋಜಕತ್ವದಿಂದ ಹಿಂದೆ ಸರಿದ ಬಳಿಕ, ಒಡಿಶಾ ಸರ್ಕಾರವು 5 ವರ್ಷಗಳ ಕಾಲ ಭಾರತ ಪುರುಷ, ಮಹಿಳಾ ಹಾಗೂ ಕಿರಿಯರ ತಂಡಗಳಿಗೆ ಪ್ರಾಯೋಜಕತ್ವ ನೀಡಲು ಹಾಕಿ ಇಂಡಿಯಾ ಜೊತೆ ಒಪ್ಪಂದಕ್ಕೆ ಸಹಿ ಹಾಕಿತು. 5 ವರ್ಷಗಳಿಗೆ 150 ಕೋಟಿ ರು. ಅನುದಾನ ನೀಡುವುದಾಗಿ ಘೋಷಿಸಿತು.

ಶಾಲಾ ಹಾಕಿ ತಂಡದ ಗೋಲ್‌ ಕೀಪರ್‌ ಆಗಿದ್ದ ಪಟ್ನಾಯಕ್‌, ಹಾಕಿ ಕ್ರೀಡೆಯ ಬಗ್ಗೆ ಅಪಾರವಾದ ಅಭಿಮಾನ ಇರಿಸಿಕೊಂಡಿದ್ದು, ತಮ್ಮ ರಾಜ್ಯ ಸರ್ಕಾರದ ಬಜೆಟ್‌ನಲ್ಲೇ ರಾಷ್ಟ್ರೀಯ ಹಾಕಿ ತಂಡಗಳಿಗೆ ಅನುದಾನ ನೀಡಲು ಹಣ ಮೀಸರಿಸಿದ್ದಾರೆ. ಭಾರತ ತಂಡಗಳಿಗೆ ಅಗತ್ಯವಿದ್ದ ಆರ್ಥಿಕ ನೆರವನ್ನು ನೀಡುವುದರ ಜೊತೆ ಒಡಿಶಾದಲ್ಲಿ ವಿಶ್ವ ದರ್ಜೆಯ ಕ್ರೀಡಾಂಗಣ, ತರಬೇತಿ ಸೌಲಭ್ಯಗಳನ್ನು ಸಿದ್ಧಗೊಳಿಸಿದ್ದಾರೆ. ಒಡಿಶಾದಲ್ಲಿ ಅನೇಕ ಹಾಕಿ ಉತ್ಸವಗಳು ನಡೆಯಲಿದ್ದು, ನೂರಾರು ಯುವ ಪ್ರತಿಭೆಗಳು ಹೊರಹೊಮ್ಮುತ್ತಾರೆ.

Tokyo 2020 ನಿಮ್ಮ ಛಲದ ಆಟ ಕಿರಿಯರಿಗೆ ಸ್ಪೂರ್ತಿ: ರಾಣಿ ಪಡೆಗೆ ಪ್ರಧಾನಿ ಮೋದಿ ಶಹಬ್ಬಾಶ್‌

2018ರಲ್ಲಿ ಹಾಕಿ ವಿಶ್ವಕಪ್‌ಗೆ ಒಡಿಶಾ ಆತಿಥ್ಯ ವಹಿಸಿತ್ತು. 2022ರ ವಿಶ್ವಕಪ್‌ಗೂ ಭುವನೇಶ್ವರ ಹಾಗೂ ರೂರ್ಕೆಲಾ ಆತಿಥ್ಯ ನೀಡಲಿದೆ. ಇದಕ್ಕಾಗಿ 356 ಕೋಟಿ ರು. ವೆಚ್ಚದಲ್ಲಿ ಭಾರತದಲ್ಲೇ ಅತಿದೊಡ್ಡ, 20000 ಆಸನ ಸಾಮರ್ಥ್ಯವುಳ್ಳ ಕ್ರೀಡಾಂಗಣ ಸಿದ್ಧಗೊಳ್ಳುತ್ತಿದೆ. ಕಳೆದ 5-6 ವರ್ಷಗಳಲ್ಲಿ ಒಡಿಶಾ ವಿಶ್ವಕಪ್‌ ಮಾತ್ರವಲ್ಲದೆ, ವಿಶ್ವ ಲೀಗ್‌ ಸೇರಿ ಅನೇಕ ಪ್ರತಿಷ್ಠಿತ ಟೂರ್ನಿಗಳಿಗೆ ಆತಿಥ್ಯ ನೀಡಿದೆ.

ಟಾಟಾ ಸಂಸ್ಥೆಯ ಸಹಯೋಗದಲ್ಲಿ 12 ತಳಮಟ್ಟದಲ್ಲಿ ಪ್ರತಿಭೆಗಳನ್ನು ಹುಡುಕಿ ತರಬೇತಿ ನೀಡುವ ಕೇಂದ್ರಗಳನ್ನು ಸ್ಥಾಪಿಸಿದ್ದ ಒಡಿಶಾ ಸರ್ಕಾರ, 2500ಕ್ಕೂ ಹೆಚ್ಚು ಯುವ ಪ್ರತಿಭೆಗಳಿಗೆ ಭವಿಷ್ಯ ರೂಪಿಸಿಕೊಡುವ ಪ್ರಯತ್ನ ನಡೆಸುತ್ತಿದೆ. ಒಡಿಶಾದಲ್ಲಿ ಹಾಕಿಗಾಗಿ 2 ಪ್ರತ್ಯೇಕ ಕ್ರೀಡಾ ಹಾಸ್ಟೆಲ್‌ಗಳಿವೆ. ಹೊಸದಾಗಿ 17 ಕಡೆ ಆಸ್ಟ್ರೋ ಟರ್ಫ್  ಅಳವಡಿಸಲಾಗುತ್ತಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಭಾರತ ಪುರುಷ ಹಾಗೂ ಮಹಿಳಾ ಹಾಕಿ ತಂಡಗಳ ಉಪನಾಯಕರು ಒಡಿಶಾದವರೇ ಎನ್ನುವುದು ವಿಶೇಷ. ಪುರುಷರ ತಂಡಕ್ಕೆ ಬೀರೇಂದ್ರ ಲಾಕ್ರಾ ಉಪನಾಯಕರಾದರೆ, ಮಹಿಳಾ ತಂಡಕ್ಕೆ ದೀಪ್‌ ಗ್ರೇಸ್‌ ಉಪನಾಯಕಿ.
 

click me!