ಟೋಕಿಯೋ ಒಲಿಂಪಿಕ್ಸ್: ಚಕ್‌ ದೇ ಇಂಡಿಯಾ ಸಿನಿಮಾ ಕ್ಷಣವನ್ನು ನೆನಪಿಸಿದ ಕೋಚ್ ಮರಿನೆ..!

Suvarna News   | Asianet News
Published : Aug 02, 2021, 04:20 PM IST
ಟೋಕಿಯೋ ಒಲಿಂಪಿಕ್ಸ್:  ಚಕ್‌ ದೇ ಇಂಡಿಯಾ ಸಿನಿಮಾ ಕ್ಷಣವನ್ನು ನೆನಪಿಸಿದ ಕೋಚ್ ಮರಿನೆ..!

ಸಾರಾಂಶ

* ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾವನ್ನು ಹೊರದಬ್ಬಿದ ಭಾರತೀಯ ಮಹಿಳಾ ಹಾಕಿ ತಂಡ * ಸೆಮಿಫೈನಲ್‌ ಪ್ರವೇಶಿಸಿ ದಾಖಲೆ ಬರೆದ ರಾಣಿ ರಾಂಪಾಲ್ ಪಡೆ * ಮಹಿಳಾ ಹಾಕಿ ತಂಡದ ಕೋಚ್ ಸೋರ್ಡ್‌ ಮರಿನೆ ಭಾವನಾತ್ಮಕ ಕ್ಷಣದ ವಿಡಿಯೋ ವೈರಲ್

ಟೋಕಿಯೋ(ಆ.02): ರಾಣಿ ರಾಂಪಾಲ್‌ ನೇತೃತ್ವದ ಭಾರತೀಯ ಮಹಿಳಾ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ 3 ಬಾರಿಯ ಒಲಿಂಪಿಕ್ಸ್‌ ಚಾಂಪಿಯನ್ಸ್‌ ಆಸ್ಟ್ರೇಲಿಯಾ ಎದುರು 1-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.

ಭಾರತೀಯ ಮಹಿಳಾ ಹಾಕಿ ತಂಡದ ಇತಿಹಾಸದಲ್ಲಿ ಈ ಗೆಲುವು ಸದಾ ಕಾಲ ಅಚ್ಚಳಿಯದೇ ಉಳಿಯಲಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಆಸ್ಟ್ರೇಲಿಯಾ ವಿರುದ್ದ ಭಾರತೀಯ ವನಿತೆಯರು ಗೆಲುವು ದಾಖಲಿಸುತ್ತಿದ್ದಂತೆ ಅಕ್ಷರಶಃ ಕುಣಿದು ಕುಪ್ಪಳಿಸಿದರು. ಇದೇ ವೇಳೆ ಮಹಿಳಾ ಹಾಕಿ ತಂಡದ ಕೋಚ್ ಸೋರ್ಡ್‌ ಮರಿನೆ ಖುಷಿಯಲ್ಲಿ ಆನಂದ ಭಾಷ್ಪ ಸುರಿಸಿದರು. ಈ ಘಟನೆ ಚಕ್‌ ದೇ ಇಂಡಿಯಾ ಸಿನೆಮಾದಲ್ಲಿ ಕೋಚ್ ಕಬೀರ್ ಖಾನ್ ಪಾತ್ರ ನಿಭಾಯಿಸಿದ್ದ ಶಾರುಕ್ ಖಾನ್‌ ಅವರ ಘಟನೆಯನ್ನು ನೆನಪಿಸುವಂತಿತ್ತು.

ಟೋಕಿಯೋ ಒಲಿಂಪಿಕ್ಸ್‌: ಸೆಮಿಫೈನಲ್‌ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ಹಾಕಿ ತಂಡ

ಭಾರತ ಪುರುಷರ ತಂಡದ ಕೋಚ್ ಆಗಿದ್ದ ಸೋರ್ಡ್‌ ಮರಿನೆ 2017ರ ಆರಂಭದಲ್ಲಿ ಭಾರತ ಮಹಿಳಾ ಕೋಚ್‌ ಆಗಿ ಕೆಲಸ ಆರಂಭಿಸಿದರು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಲೀಗ್‌ ಹಂತದ ಎಲ್ಲಾ ಪಂದ್ಯಗಳನ್ನು ಸೋತು ಮುಖಭಂಗವನ್ನು ಅನುಭವಿಸಿದ್ದ ಭಾರತ ತಂಡವನ್ನು ಬಲಿಷ್ಠವಾಗಿ ಕಟ್ಟುವಲ್ಲಿ ಸೋರ್ಡ್‌ ಮರಿನೆ ಪಾತ್ರವನ್ನು ಮರೆಯುವಂತಿಲ್ಲ. ಡಚ್‌ ಮೂಲದ ಸೋರ್ಡ್‌ ಮರಿನೆ ಭಾರತ ತಂಡವು ಆಸ್ಟ್ರೇಲಿಯಾವನ್ನು ಒಲಿಂಪಿಕ್ಸ್‌ನಿಂದ ಹೊರದಬ್ಬುತ್ತಿದ್ದಂತೆಯೇ ತನ್ನ ಪ್ರೀತಿ ಪಾತ್ರರೊಂದಿಗೆ ಈ ಖುಷಿಯ ವಿಚಾರವನ್ನು ಆನಂದ ಭಾಷ್ಪ ಸುರಿಸುತ್ತಲೇ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಭಾರತ ಮಹಿಳಾ ತಂಡದ ಯಶಸ್ಸಿನ ಹಿಂದಿರುವ ಕೋಚ್‌ ಸೋರ್ಡ್‌ ಮರಿನೆ ಅವರಿಗೆ ಹಾಕಿ ಅಭಿಮಾನಿಗಳು ಜೈ ಹೋ ಎಂದಿದ್ದಾರೆ. ಒಲಿಂಪಿಕ್ಸ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿ ಇತಿಹಾಸ ನಿರ್ಮಿಸಿರುವ ಭಾರತೀಯ ಮಹಿಳಾ ಹಾಕಿ ತಂಡವು ಪದಕ ಗೆದ್ದು ಬೀಗಲಿ ಎನ್ನುವುದು ಕೋಟ್ಯಾಂತರ ಅಭಿಮಾನಿಗಳ ಹಾರೈಕೆಯಾಗಿದೆ.

PREV
click me!

Recommended Stories

ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ