
ಟೋಕಿಯೋ(ಜೂ.19): ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ದಿನಗಣನೆ ಆರಂಭವಾಗಿದೆ. ಕೊರೋನಾ ಭೀತಿಯ ನಡುವೆಯೇ ಜುಲೈ 23ರಿಂದ ಆರಂಭವಾಗಲಿರು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ವಿದೇಶಿ ಅಧಿಕಾರಗಳ ಸಂಖ್ಯೆಯನ್ನು ಮಿತಿಗೊಳಿಸಲು ಒಲಿಂಪಿಕ್ಸ್ ಆಯೋಜಕರು ತೀರ್ಮಾನಿಸಿದ್ದಾರೆ.
ಖೈದೋಸ್ ನ್ಯೂಸ್ ವರದಿಯ ಪ್ರಕಾರ, ವಿದೇಶಿ ಮಂದಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವಿಕೆಯ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ ಎಂದು ಟೋಕಿಯೋ ಒಲಿಂಪಿಕ್ಸ್ ಅಯೋಜಕ ಸಮಿತಿಯ ಸದಸ್ಯರಾದ ಹಿಡೆಮಾಸ ನಕಾಮುರಾ ತಿಳಿಸಿದ್ದಾರೆ.
ಜಪಾನಿನ ಟೋಕಿಯೋ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್‌ಗೆ ಸುಮಾರು 78,000 ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಒಲಿಂಪಿಕ್ಸ್ ಆಯೋಜಕರು ಕಳೆದ ತಿಂಗಳಷ್ಟೇ ಖಚಿತಪಡಿಸಿದ್ದರು. ಇದೀಗ ಆಟಗಾರರು ಹಾಗೂ ಅಧಿಕಾರಿಗಳು ಸೇರಿ 53,000 ಮಂದಿಗೆ ಮಾತ್ರ ಅವಕಾಶ ನೀಡಲು ಆಯೋಜಕರು ತೀರ್ಮಾನಿಸಿದ್ದಾರೆ. ಇದರಲ್ಲಿ ಅಂತರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ(ಐಒಸಿ) ಹಾಗೂ ಅಂತಾರಾಷ್ಟ್ರೀಯ ಫೆಡರೇಷನ್‌ನ ಕ್ರೀಡೆಗೆ ಸಂಬಂಧಿಸಿದ 23 ಸಾವಿರ ಮಂದಿಯೂ ಸೇರಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಕೇವಲ 10,000 ಪ್ರೇಕ್ಷಕರಿಗಷ್ಟೇ ಅವಕಾಶ..!
ಒಲಿಂಪಿಕ್ಸ್ ಪ್ರಸಾರದ ಹಕ್ಕು ಹೊಂದಿರುವ 17 ಸಾವಿರ ಮಂದಿ ಹಾಗೂ 6 ಸಾವಿರ ಮಾಧ್ಯಮ ಪ್ರತಿನಿಧಿಗಳು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇನ್ನು ಪ್ಯಾರಾಲಿಂಪಿಕ್ಸ್‌ಗೆ 19 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, 9 ಸಾವಿರ ಅಧಿಕಾರಿಗಳು, 4 ಸಾವಿರ ಮಂದಿ ಮಾಧ್ಯಮ ಪ್ರಸಾರಕರು ಹಾಗೂ 2 ಸಾವಿರ ಮಂದಿ ಮಾಧ್ಯಮದವರು ಟೂರ್ನಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಪ್ರಕಾರ, ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ 80% ಅಥ್ಲೀಟ್‌ಗಳು ಈಗಾಗಲೇ ಕೋವಿಡ್ ಲಸಿಕೆ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಜಪಾನಿನಲ್ಲಿ ಕೋವಿಡ್ ಲಸಿಕೆ ವಿತರಣೆ ಪ್ರಮಾಣ ಆಯೋಜಕರನ್ನು ಹೆಚ್ಚು ಚಿಂತೆಗೀಡಾಗುವಂತೆ ಮಾಡಿದೆ.
ಜಪಾನ್ ಸರ್ಕಾರ ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ಟೋಕಿಯೋ ಸೇರಿದಂತೆ ಕೆಲವು ನಗರಗಳಲ್ಲಿ ಜೂನ್ 20ರವರೆಗೆ ರಾಜ್ಯ ತುರ್ತುಪರಿಸ್ಥಿತಿಯನ್ನು ಘೋಷಿಸಿದೆ. ಟೋಕಿಯೋ ಒಲಿಂಪಿಕ್ಸ್ ವೀಕ್ಷಿಸಲು 10 ಸಾವಿರ ಮಂದಿ ಸ್ಥಳೀಯ ಪ್ರೇಕ್ಷಕರಿಗೆ ಅವಕಾಶ ನೀಡಲು ಜಪಾನ್ ಸರ್ಕಾರ ತೀರ್ಮಾನಿಸಿದೆ.