ಟೋಕಿಯೋ ಒಲಿಂಪಿಕ್ಸ್‌: ಭಾರತ ಹಾಕಿ ತಂಡದಲ್ಲಿಲ್ಲ ಕನ್ನಡಿಗರು..!

By Suvarna News  |  First Published Jul 17, 2021, 8:36 AM IST

* ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟ ಜುಲೈ 23ರಿಂದ ಆರಂಭ

* ಈ ಬಾರಿ ಹಾಕಿ ತಂಡದಲ್ಲಿಲ್ಲ ಕರ್ನಾಟಕದ ಆಟಗಾರರು

* ಎಸ್‌ ವಿ ಸುನಿಲ್‌ ಭಾರತ ಹಾಕಿ ತಂಡದಲ್ಲಿ ಸ್ಥಾನ ಪಡೆಯಲು ವಿಫಲ 


- ವಿಘ್ನೇಶ್ ಎಂ ಭೂತನಕಾಡು, ಕನ್ನಡಪ್ರಭ

ಬೆಂಗಳೂರು(ಜು.17) ಈ ಬಾರಿ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ರಾಜ್ಯದ ಯಾವೊಬ್ಬ ಹಾಕಿ ಆಟಗಾರ ಇಲ್ಲದಿರುವುದು ಹಾಕಿ ಕ್ರೀಡೆಯ ತವರೂರು ಎಂದು ಕರೆಸಿಕೊಳ್ಳುತ್ತಿರುವ ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ಕ್ರೀಡಾಭಿಮಾನಿಗಳಿಗೆ ತೀವ್ರ ಬೇಸರ ಮೂಡಿಸಿದೆ.

Latest Videos

undefined

2016ರಲ್ಲಿ ನಡೆದಿದ್ದ ರಿಯೋ ಒಲಿಂಪಿಕ್ಸ್‌ನಲ್ಲಿ ರಾಜ್ಯದ ಎಸ್‌.ವಿ. ಸುನಿಲ್‌, ವಿ.ಆರ್‌. ರಘುನಾಥ್‌, ಎಸ್‌.ಕೆ. ಉತ್ತಪ್ಪ, ನಿಕ್ಕಿನ್‌ ತಿಮ್ಮಯ್ಯ ಭಾರತ ಹಾಕಿ ತಂಡದಲ್ಲಿದ್ದರು. ಹಲವು ದಶಕಗಳಿಂದ ಒಲಿಂಪಿಕ್ಸ್‌ ಹಾಕಿ ತಂಡದಲ್ಲಿ ರಾಜ್ಯದ ಆಟಗಾರರು ಇದ್ದೇ ಇರುತ್ತಿದ್ದರು. ಆದರೆ ಈ ಬಾರಿ ಯಾರೂ ಇಲ್ಲದೆ ತೀವ್ರ ನಿರಾಶೆ ಮೂಡಿಸಿದೆ.

ಕೊಡಗಿನ 13 ಹಾಕಿ ಆಟಗಾರರು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದಾರೆ. 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಎಂ.ಎಂ. ಸೋಮಯ್ಯ ಚಿನ್ನದ ಪದಕ, 1972ರಲ್ಲಿ ನಡೆದ ಮ್ಯೂನಿಕ್‌ ಒಲಿಂಪಿಕ್ಸ್‌ನಲ್ಲಿ ಎಂ.ಪಿ. ಗಣೇಶ್‌ ಹಾಗೂ ಬಿ.ಪಿ. ಗೋವಿಂದ ಕಂಚಿನ ಪದಕ ಪಡೆದುಕೊಂಡಿದ್ದರು.

ಟೋಕಿಯೋ ಒಲಿಂಪಿಕ್ಸ್‌ಗೆ ಭಾರತ ಪುರುಷರ ಹಾಕಿ ತಂಡ ಪ್ರಕಟ

ಉತ್ತೇಜನ ಕೊರತೆ ಕಾರಣ: ಹಾಕಿ ಕ್ರೀಡೆಯಲ್ಲಿ ಯುವಕ ಹಾಗೂ ಯುವತಿಯರ ನಿರಾಸಕ್ತಿಯೂ ಕ್ರೀಡಾಪಟುಗಳಾಗಿ ರೂಪುಗೊಳ್ಳದಿರಲು ಪ್ರಮುಖ ಕಾರಣ ಎನ್ನುವ ಅಭಿಪ್ರಾಯಗಳು ಮಾಜಿ ಆಟಗಾರರಿಂದ ವ್ಯಕ್ತವಾಗಿದೆ. ಒಲಿಂಪಿಕ್ಸ್‌ಗೆ ಆಯ್ಕೆಯಾದಾಗ ಮಾತ್ರ ಅವರ ಬೆನ್ನುತಟ್ಟದೆ, ಮಕ್ಕಳ ಹಂತದಲ್ಲಿಯೇ ಕ್ರೀಡೆಗೆ ಪ್ರೋತ್ಸಾಹ ನೀಡಬೇಕೆಂಬುದು ಕೆಲವು ಮಾಜಿ ಒಲಿಂಪಿಯನ್‌ಗಳ ಅಭಿಪ್ರಾಯ.

ನಾವು ಹಾಕಿ ಆಡುತ್ತಿದ್ದ ಸಂದರ್ಭದಲ್ಲಿ ರಾಜ್ಯದ 9 ಮಂದಿ ಒಲಿಂಪಿಕ್‌ ಕ್ಯಾಂಪ್‌ನಲ್ಲಿದ್ದೆವು. ಟೋಕಿಯೋ ಒಲಿಂಪಿಕ್ಸ್‌ಗೆ ಎಸ್‌.ವಿ. ಸುನಿಲ್‌ ಇರಲೇ ಬೇಕಿತ್ತು. ಅವರನ್ನು ಆಯ್ಕೆ ಮಾಡದಿರುವುದು ಬಹಳ ದೊಡ್ಡ ತಪ್ಪು. ಇತ್ತೀಚೆಗೆ ಯುವಕ, ಯುವತಿಯರಿಗೆ ಹಾಕಿ ಮೇಲೆ ನಿರಾಸಕ್ತಿ ಮೂಡಿದೆ. ಕ್ರೀಡೆಯಲ್ಲಿ ಶಿಸ್ತು ಇಲ್ಲದಿರುವುದೇ ಇದಕ್ಕೆ ಕಾರಣ - ಡಾ.ಎಂ.ಪಿ. ಗಣೇಶ್‌, ಮಾಜಿ ಒಲಿಂಪಿಯನ್‌

ಈ ಬಾರಿ ಒಲಿಂಪಿಕ್ಸ್‌ನಲ್ಲಿ ರಾಜ್ಯದಿಂದ ಯಾರೂ ಇಲ್ಲ ಎಂಬುದು ಬೇಸರ ಮೂಡಿಸಿದೆ. ಆದರೆ ಕ್ರೀಡೆ ಎಂದರೆ ಹಾಗೆಯೇ ಒಂದು ಬಾರಿ ಮೇಲೆ ಬಂದರೆ ಮತ್ತೆ ಕೆಳಗೆ ಬರುವುದು ಸಾಮಾನ್ಯ. ಆದ್ದರಿಂದ ಇದನ್ನು ಪಾಸಿಟಿವ್‌ ಆಗಿ ತೆಗೆದುಕೊಳ್ಳಬೇಕು. ಯಾರೂ ಇಲ್ಲ ಅಂತ ಕೊರಗದೆ ಮುಂದೆ ಬರುವ ಯುವಕರಿಗೆ ಪ್ರೋತ್ಸಾಹ ಕೊಡಬೇಕು - ವಿ.ಆರ್‌. ರಘುನಾಥ್‌, ಮಾಜಿ ಒಲಿಂಪಿಯನ್‌

ಸುಂಟಿಕೊಪ್ಪದ ಅಂಕಿತಾ ಸಹಾಯಕ ಕೋಚ್‌

ಈವರೆಗೂ ಒಲಿಂಪಿಕ್‌ ಹಾಕಿಯಲ್ಲಿ ಕೊಡಗಿನ ಮಹಿಳೆಯರು ಪಾಲ್ಗೊಂಡಿಲ್ಲ. ಭಾರತ ತಂಡದ ಪರ ಎಂ.ಆರ್‌. ಪೊನ್ನಮ್ಮ ಹಾಗೂ ಎಂ.ಜೆ. ಲೀಲಾವತಿ ಅವರು ಆಡಿದ್ದರೂ ಕೂಡ ಒಲಿಂಪಿಕ್ಸ್‌ನಲ್ಲಿ ಆಡಿಲ್ಲ. ಈ ಬಾರಿ ಸುಂಟಿಕೊಪ್ಪದ ಅಂಕಿತಾ ಅವರು ಭಾರತ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್‌ ಆಗಿ ಟೋಕಿಯೋ ಒಲಿಂಪಿಕ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳಿಗೆ ಚೀಯರ್ ಅಪ್‌ ಮಾಡಿ, ಪ್ರತಿದಿನ ಭಾರತೀಯ ಒಲಿಂಪಿಕ್ಸ್‌ ಜೆರ್ಸಿ ಪಡೆಯಿರಿ. ಒಲಿಂಪಿಕ್ಸ್‌ ಕ್ವಿಜ್‌ನಲ್ಲಿ ಪಾಲ್ಗೊಳ್ಳಲು ಈ ಲಿಂಕ್‌ ಕ್ಲಿಕ್‌ ಮಾಡಿ.

click me!