* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಎದುರಾಯ್ತು ಕೋವಿಡ್ ಶಾಕ್
* ಕ್ರೀಡಾಗ್ರಾಮದಲ್ಲಿ ಕೋವಿಡ್ 19 ಕೇಸ್ ಪತ್ತೆ
* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಜುಲೈ 23ರಿಂದ ಆರಂಭ
ಟೋಕಿಯೋ(ಜು.17): ಕೋವಿಡ್ ಭೀತಿಯ ನಡುವೆಯೇ ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಜುಲೈ 23ರಿಂದ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗಲಿದ್ದು, ಜಗತ್ತಿನ ಅತಿದೊಡ್ಡ ಕ್ರೀಡಾಜಾತ್ರೆ ಆರಂಭಕ್ಕೂ ಮುನ್ನವೇ ಆಯೋಜಕರಿಗೆ ದೊಡ್ಡ ಶಾಕ್ ಎದುರಾಗಿದೆ.
ಹೌದು, ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭಕ್ಕೆ ಇನ್ನು ಕೇವಲ 6 ದಿನಗಳು ಬಾಕಿ ಇರುವಾಗಲೇ ಕ್ರೀಡಾಗ್ರಾಮಕ್ಕೆ ಬಂದಿಳಿದಿದ್ದ ಸದಸ್ಯರೊಬ್ಬರಿಗೆ ಕೋವಿಡ್ 19 ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಒಲಿಂಪಿಕ್ಸ್ ಆಯೋಜಕರು ಖಚಿತಪಡಿಸಿದ್ದಾರೆ. ಕೋವಿಡ್ ತಗುಲಿರುವ ವ್ಯಕ್ತಿಯ ಹೆಸರನ್ನು ಆಯೋಜಕರು ಬಾಯ್ಬಿಟ್ಟಿಲ್ಲ. ಇದೇ ಕ್ರೀಡಾ ಗ್ರಾಮದಲ್ಲಿ ಸಾವಿರಾರು ಅಥ್ಲೀಟ್‌ಗಳು ಹಾಗೂ ಅಧಿಕಾರಿಗಳು ಒಲಿಂಪಿಕ್ಸ್ ವೇಳೆ ತಂಗಲಿದ್ದಾರೆ.
ಕ್ರೀಡಾಗ್ರಾಮದಲ್ಲಿ ಒಂದು ಕೋವಿಡ್ 19 ಪ್ರಕರಣ ಪತ್ತೆಯಾಗಿದೆ. ಸ್ಕ್ರೀನಿಂಗ್ ಟೆಸ್ಟ್ ಮಾಡುವ ವೇಳೆ ಕ್ರೀಡಾ ಗ್ರಾಮದಲ್ಲಿ ಪತ್ತೆಯಾದ ಮೊಟ್ಟಮೊದಲ ಕೋವಿಡ್ ಪ್ರಕರಣವಿದು. ಸದ್ಯ ಈ ವ್ಯಕ್ತಿಯನ್ನು ಹೋಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ಟೋಕಿಯೋ ಒಲಿಂಪಿಕ್ಸ್ ಆಯೋಜನ ಸಮಿತಿಯ ವಕ್ತಾರ ಮಸಾ ಟಕಾಯ ತಿಳಿಸಿದ್ದಾರೆ.
ಜಪಾನ್ ಮಾಧ್ಯಮಗಳ ವರದಿಯ ಪ್ರಕಾರ, ಕ್ರೀಡಾಗ್ರಾಮದಲ್ಲಿ ಕೋವಿಡ್ ಸೋಕಿತ ವ್ಯಕ್ತಿಯು ವಿದೇಶಿ ಪ್ರಜೆ ಎನ್ನಲಾಗಿದೆ. ಜಪಾನಿಗರೂ ಕೋವಿಡ್ ಭೀತಿಯಿಂದಾಗಿ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಆಯೋಜನೆಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು.
ಜಪಾನ್‌ಗೆ ಬಂದಿಳಿದಿದ್ದ ಅಥ್ಲೀಟ್, ಸಿಬ್ಬಂದಿಗೆ ಕೋವಿಡ್ ಪಾಸಿಟಿವ್..!
ಯಾವುದೇ ಕೋವಿಡ್ ಸ್ಪೋಟ ಸಂಭವಿಸದಂತೆ ನಾವು ಸುರಕ್ಷಿತವಾಗಿ ಟೂರ್ನಿ ಆಯೋಜಿಸುವ ಕುರಿತಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಅಥ್ಲೀಟ್‌ಗಳು ಜಪಾನ್‌ಗೆ ಬರಲು ಸಾಕಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಈ ಕಾರಣಕ್ಕಾಗಿ ಕೋವಿಡ್ ಕುರಿತಂತೆ ನಾವು ಯಾವುದೇ ಮುಚ್ಚುಮರೆ ಮಾಡದೇ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ ಎಂದು ಒಲಿಂಪಿಕ್ಸ್ ಆಯೋಜನ ಸಮಿತಿಯ ಮುಖ್ಯಸ್ಥೆ ಸೈಕೋ ಹಶಿಮೊಟೋ ಎಂದು ತಿಳಿಸಿದ್ದಾರೆ.
ಆ ವ್ಯಕ್ತಿಯು ಕೋವಿಡ್ ಲಸಿಕೆ ಪಡೆದಿದ್ದನೋ ಅಥವಾ ಇಲ್ಲವೋ ಎನ್ನುವುದರ ಕುರಿತಂತೆ ನಮಗೆ ಯಾವುದೇ ಮಾಹಿತಿಯಿಲ್ಲ. ಅಥ್ಲೀಟ್‌ಗಳನ್ನು ಪ್ರತಿದಿನ ಟೆಸ್ಟ್‌ಗೆ ಒಳಪಡಿಸಲಾಗುವುದು, ಒಂದು ವೇಳೆ ಕೋವಿಡ್ ಪಾಸಿಟಿವ್ ಬಂದರೆ ಆ ವ್ಯಕ್ತಿಯನ್ನು ತಕ್ಷಣವೇ ಐಸೋಲೇಷನ್‌ಗೆ ಒಳಪಡಿಸಲಾಗುವುದು ಎಂದು ಟೋಕಿಯೋ ಒಲಿಂಪಿಕ್ಸ್ ಸಿಇಒ ತೋಶಿರೋ ಮೊಟೋ ತಿಳಿಸಿದ್ದಾರೆ.