* 10, 000 ಮಂದಿ ಪ್ರೇಕ್ಷಕರಿಗೆ ಒಲಿಂಪಿಕ್ಸ್ ಸ್ಟೇಡಿಯಂ ಪ್ರವೇಶಿಸಲು ಅವಕಾಶ
* ಟೋಕಿಯೋ ಒಲಿಂಪಿಕ್ಸ್ ಆಯೋಜಕರಿಂದ ಮಹತ್ವದ ತೀರ್ಮಾನ
* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 23ರಿಂದ ಆರಂಭ
ಟೋಕಿಯೋ(ಜೂ.22): ಒಲಿಂಪಿಕ್ ಕ್ರೀಡಾಕೂಟ ಆರಂಭಗೊಳ್ಳಲು ಇನ್ನು ಕೇವಲ 1 ತಿಂಗಳು ಮಾತ್ರ ಬಾಕಿ ಇದ್ದು, ಕ್ರೀಡಾಂಗಣಗಳಿಗೆ ಪ್ರೇಕ್ಷಕರಿಗೆ ಪ್ರವೇಶ ನೀಡುವ ಬಗ್ಗೆ ಆಯೋಜಕರು ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.
ಸ್ಪರ್ಧೆಗಳಿಗೆ ಆತಿಥ್ಯ ವಹಿಸುವ ಎಲ್ಲಾ ಕ್ರೀಡಾಂಗಣಗಳಿಗೂ ಗರಿಷ್ಠ 10,000 ಸ್ಥಳೀಯ ಪ್ರೇಕ್ಷಕರಿಗೆ ಪ್ರವೇಶ ಕಲ್ಪಿಸುವುದಾಗಿ ಆಯೋಜನಾ ಸಮಿತಿ ತಿಳಿಸಿದೆ. ವಿದೇಶಿ ಪ್ರೇಕ್ಷಕರಿಗೆ ಜಪಾನ್‌ಗೆ ಪ್ರವೇಶವಿಲ್ಲ ಎಂದು ಆಯೋಜಕರು ಹಲವು ತಿಂಗಳುಗಳ ಹಿಂದೆಯೇ ತಿಳಿಸಿದ್ದರು. ಕೋವಿಡ್ ಭೀತಿಯ ನಡುವೆಯೇ ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 23ರಿಂದ ಆರಂಭವಾಗಲಿದೆ.
ಕ್ರೀಡಾಂಗಣಕ್ಕೆ ಆಗಮಿಸುವ ಪ್ರೇಕ್ಷಕರು ತಮ್ಮ ನೆಚ್ಚಿನ ಅಥ್ಲೀಟ್, ತಂಡಗಳ ಪರ ಘೋಷಣೆ ಕೂಗುವಂತಿಲ್ಲ. ಸದಾ ಮಾಸ್ಕ್ ಧರಿಸಿರಬೇಕು. ಕ್ರೀಡಾಂಗಣದಿಂದ ನೇರವಾಗಿ ಮನೆಗೆ ತೆರಳಬೇಕು ಎಂದು ಷರತ್ತು ವಿಧಿಸಲಾಗಿದೆ. ಇದೇ ವೇಳೆ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೆ 20,000 ಪ್ರೇಕ್ಷಕರಿಗೆ ಪ್ರವೇಶ ನೀಡುವ ಬಗ್ಗೆಯೂ ತೀರ್ಮಾನಿಸಲಾಗಿದೆ.
ಟೋಕಿಯೋ ತಲುಪಿದ ಉಗಾಂಡ ಸದಸ್ಯೆಗೆ ಕೋವಿಡ್ ಸೋಂಕು ದೃಢ
ಕಳೆದ 7 ದಿನಗಳಲ್ಲಿ ಟೋಕಿಯೋ ನಗರದಲ್ಲಿ ಸರಾಸರಿ ಪ್ರತಿನಿತ್ಯ 400 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿರುವುದು ಆಯೋಜಕರಿಗೆ ಹೆಚ್ಚು ತಲೆನೋವುಂಟು ಮಾಡಿದೆ. ಇಲ್ಲಿಯವರೆಗೂ 6.5% ಜಪಾನಿಗರು ಸಂಪೂರ್ಣ ಕೋವಿಡ್ ಲಸಿಕೆ ಪಡೆದಿದ್ದಾರೆ. ಇನ್ನು 16.5% ಮಂದಿ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ದಾರೆ. ಜಪಾನಿನಲ್ಲಿ ಇದುವರೆಗೂ 14,000ಕ್ಕಿಂತ ಹೆಚ್ಚು ಮಂದಿಯನ್ನು ಕೊರೋನಾ ಬಲಿ ಪಡೆದಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona