* ಟೋಕಿಯೋ ಒಲಿಂಪಿಕ್ಸ್‌ನಿಂದ ಹಿಂದೆ ಸರಿದ ದಿಗ್ಗಜ ಟೆನಿಸಿಗ ರೋಜರ್ ಫೆಡರರ್
* ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಸ್ವಿಸ್ ಟೆನಿಸ್ ಮಾಂತ್ರಿಕ
* ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ವೇಳೆ ಕಾಣಿಸಿಕೊಂಡ ನೋವಿನ ಸಮಸ್ಯೆ
ಸ್ವಿಟ್ಜರ್‌ಲೆಂಡ್(ಜು.14): ಸ್ವಿಸ್ ಟೆನಿಸ್ ಟೆನಿಸ್ ದಿಗ್ಗಜ ರೋಜರ್ ಫೆಡರರ್ ತಾವು ಮುಂಬರುವ ಜುಲೈ 23ರಿಂದ ಆರಂಭವಾಗಲಿರುವ ಟೋಕಿಯೋ ಒಲಿಂಪಿಕ್ಸ್‌ನಿಂದ ಹಿಂದೆ ಸರಿಯುತ್ತಿರುವುದಾಗಿ ಮಂಗಳವಾರ(ಜು.13) ಘೋಷಿಸಿದ್ದಾರೆ.
ನಾನು ವಿಂಬಲ್ಡನ್ ಟೂರ್ನಿಯಲ್ಲಿ ಆಡುತ್ತಿದ್ದಾಗ ದುರಾದೃಷ್ಟವಶಾತ್ ನಾನು ಮೊಣಕಾಲಿನ ನೋವಿಗೆ ಒಳಗಾದೆ. ಹೀಗಾಗಿ ಅನಿರ್ವಾಯವಾಗಿ ನಾನು ಟೋಕಿಯೋ ಒಲಿಂಪಿಕ್ಸ್‌ನಿಂದ ಹಿಂದೆ ಸರಿಯುವ ತೀರ್ಮಾನ ತೆಗೆದುಕೊಳ್ಳಬೇಕಾಯಿತು ಎಂದು ರೋಜರ್ ಫೆಡರರ್ ತಿಳಿಸಿದ್ದಾರೆ. ಪ್ರತಿಬಾರಿ ನನ್ನ ದೇಶ ಸ್ವಿಟ್ಜರ್ಲೆಂಡ್ ಅನ್ನು ಪ್ರತಿನಿಧಿಸುವುದು ನನ್ನ ಪಾಲಿಗೆ ಅತಿ ದೊಡ್ಡ ಗೌರವದ ವಿಚಾರ, ಆದರೆ ದುರ್ದೈವ ಈ ಬಾರಿ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸದಿರುವುದಕ್ಕೆ ಬೇಸರವಾಗುತ್ತಿದೆ ಎಂದು ರೋಜರ್ ಫೆಡರರ್ ತಿಳಿಸಿದ್ದಾರೆ.
ನಾನು ಈಗಾಗಲೇ ಪುನಶ್ಚೇತನ ಶಿಬಿರದಲ್ಲಿದ್ದೇನೆ. ವರ್ಷಾಂತ್ಯದ ವೇಳೆಗೆ ಮತ್ತೆ ಟೆನಿಸ್‌ಗೆ ಮರಳುವ ವಿಶ್ವಾಸವಿದೆ. ಈ ಸಂದರ್ಭದಲ್ಲಿ ಇಡೀ ಸ್ವಿಟ್ಜರ್ಲೆಂಡ್ ತಂಡಕ್ಕೆ ನಾನು ಶುಭ ಹಾರೈಸುತ್ತೇನೆ ಎಂದು 20 ಟೆನಿಸ್ ಗ್ರ್ಯಾನ್‌ಸ್ಲಾಂ ಒಡೆಯ ರೋಜರ್ ಫೆಡರರ್ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ರೋಜರ್ ಫೆಡರರ್ ಕಳೆದ ವರ್ಷದಿಂದಲೂ ಸಾಕಷ್ಟು ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. 2020ರಲ್ಲಿ ಫೆಡರರ್ ಎರಡು ಬಾರಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದಾದ ಬಳಿಕ ಕಳೆದ ಫ್ರೆಂಚ್ ಓಪನ್ ಟೆನಿಸ್ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದರು. ಇನ್ನು ಇತ್ತೀಚೆಗಷ್ಟೇ ಮುಕ್ತಾಯವಾದ ವಿಂಬಲ್ಡನ್ ಗ್ರ್ಯಾನ್‌ಸ್ಲಾಂನಲ್ಲಿ ಫೆಡರರ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರಾದರೂ, ಅಂತಿಮ ಎಂಟರ ಘಟ್ಟದಲ್ಲಿ ಪೋಲೆಂಡ್‌ನ ಹೋಬರ್ಟ್ ಹುರ್ಕೆಜ್ ಎದುರು ಆಘಾತಕಾರಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದರು.
ಇದು ನನ್ನ ವೃತ್ತಿಜೀವನದ ಕೊನೆಯ ವಿಂಬಲ್ಡನ್ ಓಪನ್ ಇರಬಹುದು: ಫೆಡರರ್
ರೋಜರ್ ಫೆಡರರ್ 2012ರ ಲಂಡನ್ ಒಲಿಂಪಿಕ್ಸ್ ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಇನ್ನು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಡಬಲ್ಸ್ ವಿಭಾಗದಲ್ಲಿ ಫೆಡರರ್ ಟೀಂ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಈಗಾಗಲೇ ರಾಫೆಲ್ ನಡಾಲ್ ಹಾಗೂ ರೋಜರ್ ಫೆಡರರ್ ಟೋಕಿಯೋ ಒಲಿಂಪಿಕ್ಸ್‌ನಿಂದ ಹಿಂದೆ ಸರಿದಿದ್ದರಿಂದಾಗಿ ಸರ್ಬಿಯಾದ ನೊವಾಕ್ ಜೋಕೋವಿಕ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನ ಗೆಲ್ಲುವ ನೆಚ್ಚಿನ ಟೆನಿಸಿಗ ಎನಿಸಿದ್ದಾರೆ.