ಟೋಕಿಯೋ ಒಲಿಂಪಿಕ್ಸ್‌: ಭಾರತ ಪ್ರತಿನಿಧಿಸಲಿರುವ ಏಕೈಕ ವೇಟ್‌ ಲಿಫ್ಟರ್‌ ಮೀರಬಾಯಿ ಚಾನು..!

By Suvarna News  |  First Published Jun 12, 2021, 5:41 PM IST

* ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡ ಮೀರಾಬಾಯಿ ಚಾನು

* ಮೀರಾಬಾಯಿ ಚಾನು ಭಾರತದ ಭರವಸೆಯ ವೇಟ್‌ಲಿಫ್ಟರ್

* 49 ಕೆ.ಜಿ ವಿಭಾಗದಲ್ಲಿ ವಿಶ್ವದಾಖಲೆ ಹೊಂದಿರುವ ಮೀರಾಬಾಯಿ ಚಾನು


ನವದೆಹಲಿ(ಜೂ.12): ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಷನ್‌ ನೂತನವಾಗಿ ಬಿಡುಗಡೆ ಮಾಡಿದ ರ‍್ಯಾಂಕಿಂಗ್‌ ಅನ್ವಯ ಟೋಕಿಯೋ ಒಲಿಂಪಿಕ್ಸ್‌ಗೆ ಮೀರಾಬಾಯಿ ಚಾನು ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಮೀರಾಬಾಯಿ ವೇಟ್‌ ಲಿಫ್ಟಿಂಗ್ ವಿಭಾಗದಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಏಕೈಕ ಅಥ್ಲೀಟ್‌ ಎನಿಸಿದ್ದಾರೆ.

49 ಕೆ.ಜಿ ವಿಭಾಗದಲ್ಲಿ ಮೀರಾಬಾಯಿ ಚಾನು 4133,6172 ರೇಟಿಂಗ್ ಅಂಕವನ್ನು ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದ್ದರೆ, ಚೀನಾದ ಹೂ ಝಿಹ್ಯೂ 4926,4422 ರೇಟಿಂಗ್ ಅಂಕಗಳನ್ನು ಹೊಂದುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಷನ್‌ ನಿಯಮದನ್ವಯ ಒಂದು ವೇಟ್‌ ಕೆಟೆಗೆರೆಯಲ್ಲಿ 14 ಅಥ್ಲೀಟ್‌ಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಬಹುದಾಗಿದೆ. ಮಾಜಿ ವಿಶ್ವಚಾಂಪಿಯನ್‌ ಮೀರಾಬಾಯಿ ಚಾನು ಮುಂಬರುವ ಒಲಿಂಪಿಕ್ಸ್‌ಗಾಗಿ ಸದ್ಯ ಅಮೆರಿಕದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. 

Tap to resize

Latest Videos

undefined

ಪೋಲೆಂಡ್‌ ಕುಸ್ತಿ ಟೂರ್ನಿ: ಚಿನ್ನದ ಪದಕಕ್ಕೆ ಕೊರಳೊಡ್ಡಿದ ವಿನೇಶ್‌ ಫೋಗಾಟ್‌

ಕಳೆದ ಏಪ್ರಿಲ್‌ನಲ್ಲಿ ತಾಷ್ಕೆಂಟ್‌ನಲ್ಲಿ ನಡೆದ ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ನಲ್ಲಿ  49 ಕೆ.ಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಕ್ಲೀನ್ ಮತ್ತು ಜೆರ್ಕ್‌ನಲ್ಲಿ ಒಟ್ಟು 119 ಕೆ.ಜಿ ಬಾರ ಎತ್ತುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಕರ್ಣಂ ಮಲ್ಲೇಶ್ವರಿ ಬಳಿಕ ಮೀರಾಬಾಯಿ ಚಾನು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲಿ ಎನ್ನುವುದು ಕೋಟ್ಯಾಂತರ ಅಭಿಮಾನಿಗಳ ಹಾರೈಕೆಯಾಗಿದೆ.

ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಜುಲೈ 23ರಿಂದ ಆಗಸ್ಟ್ 08ರವರೆಗೆ ನಡೆಯಲಿದೆ. ಭಾರತದಿಂದ ಈ ಬಾರಿ ನೂರಕ್ಕೂ ಅಧಿಕ ಅಥ್ಲೀಟ್‌ಗಳು ಕ್ರೀಡಾ ಮಹಾಸಂಗ್ರಾಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

click me!