ಕೊರೋನಾ ವೈರಸ್ ಭೀತಿಯಿಂದಾಗಿ ಈಗಾಗಲೇ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಹಲವು ರಾಷ್ಟ್ರಗಳು ಹಿಂದೇಟು ಹಾಕುತ್ತಿವೆ. ಹೀಗಿರುವಾಗಲೇ ಆಸ್ಟ್ರೇಲಿಯಾ ಕೂಡಾ ಈ ಬಾರಿ ಒಲಿಂಪಿಕ್ಸ್ ನಡೆಯುವುದಿಲ್ಲ ಎಂದು ಖಚಿತ ಪಡಿಸಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.
ಮೊಂಟ್ರಿಯಲ್(ಮಾ.24): ಮಾರಕ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಮುಂದೂಡುವಂತೆ ಆಗ್ರಹಿಸಿರುವ ಕೆನಡಾ, ನಿಗದಿತ ವೇಳಾಪಟ್ಟಿಯಂತೆ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ನಡೆಸಿದರೆ ತನ್ನ ದೇಶದ ಕ್ರೀಡಾಪಟುಗಳನ್ನು ಕಳುಹಿಸುವುದಿಲ್ಲ ಎಂದು ಸ್ಪಪ್ಟಪಡಿಸಿದೆ. ಕನಿಷ್ಟ ಒಂದು ವರ್ಷಕ್ಕೆ ಒಲಿಂಪಿಕ್ಸ್ ಮುಂದೂಡುವಂತೆ ಆಗ್ರಹಿಸಿದೆ. ಇದರೊಂದಿಗೆ ಕ್ರೀಡಾಕೂಟದಿಂದ ಹಿಂದೆ ಸರಿದ ಮೊದಲ ರಾಷ್ಟ್ರ ಎನಿಸಿಕೊಂಡಿದೆ.
1ರಿಂದ 2 ವರ್ಷ ಟೋಕಿಯೋ ಒಲಿಂಪಿಕ್ಸ್ ಮುಂದೂಡಿಕೆ?
ಕೆನಡಾ ಒಲಿಂಪಿಕ್ ಸಮಿತಿ (ಸಿಒಸಿ) ಹಾಗೂ ಕೆನಡಾ ಪ್ಯಾರಾಲಿಂಪಿಕ್ ಸಮಿತಿ (ಸಿಪಿಸಿ) ತನ್ನ ಅಥ್ಲೆಟಿಕ್ಸ್ ಸಂಸ್ಥೆ, ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು ಹಾಗೂ ಕೆನಡಾ ಸರ್ಕಾರದ ಬೆಂಬಲದೊಂದಿಗೆ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ. ‘ಇದು ಕ್ರೀಡಾಪಟುಗಳ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲ, ಸಾರ್ವಜನಿಕರ ಹಿತ ದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರವಾಗಿದೆ’ ಎಂದು ಸಿಒಸಿ ತಿಳಿಸಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮೇಲೆ ಒತ್ತಡ ಮತ್ತಷ್ಟುಹೆಚ್ಚಾಗಿದೆ.
4 ವಾರಗಳಲ್ಲಿ ನಿರ್ಧಾರ: ಸದಸ್ಯ ರಾಷ್ಟ್ರಗಳಿಂದ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದಿನ 4 ವಾರಗಳಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಐಒಸಿ ಅಧ್ಯಕ್ಷ ಥಾಮಸ್ ಬಾಚ್ ತಿಳಿಸಿದ್ದಾರೆ. ಇದೇ ವೇಳೆ ಜಪಾನ್ ಪ್ರಧಾನ ಮಂತ್ರಿ ಶಿನ್ಜೊ ಅಬೆ, ಕ್ರೀಡಾಕೂಟವನ್ನು ಮುಂದೂಡಲೇಬೇಕಾದ ಅನಿವಾರ್ಯತೆ ಎದುರಾದರೆ ಆ ಬಗ್ಗೆ ನಿರ್ಧರಿಸುತ್ತೇವೆ. ಆದರೆ ಕ್ರೀಡಾಕೂಟವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಈ ವರ್ಷ ಒಲಿಂಪಿಕ್ಸ್ ನಡೆಯಲ್ಲ ಎಂದ ಆಸ್ಪ್ರೇಲಿಯಾ!
ಸಿಡ್ನಿ: ಆಸ್ಪ್ರೇಲಿಯಾ ಒಲಿಂಪಿಕ್ ಸಮಿತಿ, ಸೋಮವಾರ ಟೋಕಿಯೋ ಗೇಮ್ಸ್ ನಿಗದಿತ ವೇಳಾಪಟ್ಟಿಯಂತೆ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ತನ್ನ ಕ್ರೀಡಾಪಟುಗಳಿಗೆ 2021ರ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುವಂತೆ ಸೂಚಿಸಿದೆ.
ಕೊರೋನಾ ಭೀತಿ: ಒಲಿಂಪಿಕ್ಸ್ ಮುಂದೂಡಲು ಒತ್ತಡ!
ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ, ಕ್ರೀಡಾಕೂಟವನ್ನು ಮುಂದೂಡುವ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಹೇಳುತ್ತಿದ್ದಂತೆ ಆಸ್ಪ್ರೇಲಿಯಾ ಒಲಿಂಪಿಕ್ ಸಮಿತಿ(ಎಒಸಿ) ಸೋಮವಾರ ಸಭೆ ನಡೆಸಿ, ಈ ವರ್ಷ ಜುಲೈನಲ್ಲಿ ಕ್ರೀಡಾಕೂಟ ನಡೆಸಲು ಸಾಧ್ಯವಿಲ್ಲ. ಕ್ರೀಡಾಪಟುಗಳ ಮೇಲೆ ಒತ್ತಡ ಹೇರುವುದು ಬೇಡ ಎಂದು ನಿರ್ಧರಿಸಿತು. ‘ಜುಲೈನಲ್ಲಿ ಕ್ರೀಡಾಕೂಟ ನಡೆಯುವುದಿಲ್ಲ. ಇದು ಸ್ಪಷ್ಟ. ನಮ್ಮ ಕ್ರೀಡಾಪಟುಗಳು ಸಕಾರಾತ್ಮಕ ಮನೋಭಾವದೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ಕೊರೋನಾ ಸೋಂಕಿನ ಭೀತಿ ಅವರಲ್ಲಿದೆ. ಕ್ರೀಡಾಪಟುಗಳಿಗೆ ಸ್ಪಷ್ಟನೆ ಬೇಕಿತ್ತು. ಜತೆಗೆ ತಮ್ಮ ಹಾಗೂ ಕುಟುಂಬದವರ ಆರೋಗ್ಯಕ್ಕೆ ಅವರು ಪ್ರಾಮುಖ್ಯತೆ ನೀಡಬೇಕಿದೆ’ ಎಂದು ಎಒಸಿ ಮುಖ್ಯ ಕಾರ್ಯನಿರ್ವಾಹಕ ಮ್ಯಾಟ್ ಕಾರೋಲ್ ಹೇಳಿದ್ದಾರೆ.
ಭಾರತದಿಂದ ಒಂದು ತಿಂಗಳು ಕಾದು ನೋಡುವ ತಂತ್ರ
ನವದೆಹಲಿ: ಕೆನಡಾ ಕ್ರೀಡಾಕೂಟದಿಂದ ಹಿಂದೆ ಸರಿದರೂ, ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಇನ್ನೂ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಬಗ್ಗೆ ನಿರ್ಧರಿಸಲು ಕನಿಷ್ಠ 1 ತಿಂಗಳು ಸಮಯ ಬೇಕು ಎಂದು ಐಒಎ ತಿಳಿಸಿದೆ.
ಐಒಎ ಪ್ರಧಾನ ಕಾರ‍್ಯದರ್ಶಿ ರಾಜೀವ್ ಮೆಹ್ತಾ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮಿಸುತ್ತಿರುವುದಾಗಿ ತಿಳಿಸಿದ್ದಾರೆ. ‘ನಾವು ಇನ್ನೂ 4-5 ವಾರಗಳ ಕಾಲ ಕಾದು ನೋಡುತ್ತೇವೆ. ನಂತರ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಹಾಗೂ ಕೇಂದ್ರ ಕ್ರೀಡಾ ಸಚಿವಾಲಯವನ್ನು ಸಂಪರ್ಕಿಸಿ ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದು ಮೆಹ್ತಾ ಹೇಳಿದ್ದಾರೆ.