1ರಿಂದ 2 ವರ್ಷ ಟೋಕಿಯೋ ಒಲಿಂಪಿಕ್ಸ್‌ ಮುಂದೂಡಿಕೆ?

By Kannadaprabha NewsFirst Published Mar 23, 2020, 10:14 AM IST
Highlights

ಕೊರೋನಾ ಸೋಂಕಿನ ಭೀತಿಯಿಂದ ಕ್ರೀಡಾ ಲೋಕ ಸ್ತಬ್ಧವಾಗಿದ್ದರೂ, ಜಪಾನ್‌ ಮಾತ್ರ ಕ್ರೀಡಾಕೂಟ ಯಾವುದೇ ತೊಂದರೆಯಿಲ್ಲದೆ ನಡೆಯಲಿದೆ ಎಂದು ಪುನರುಚ್ಚರಿಸಿದೆ. ಇದರ ಹೊರತಾಗಿಯೂ ಕ್ರೀಡಾ ಮಹಾಜಾತ್ರೆ ಎರಡು ವರ್ಷ ಮುಂದೂಡಲ್ಪಡುವ ಸಾಧ್ಯತೆಯಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ.

ನವದೆಹಲಿ(ಮಾ.23): 2020ರ ಟೋಕಿಯೋ ಒಲಿಂಪಿಕ್ಸ್‌ ಆಯೋಜಕರು ಕ್ರೀಡಾಕೂಟವನ್ನು ಮುಂದೂಡಲು ಇರುವ ಪರ್ಯಾಯ ಆಯ್ಕೆಗಳ ಬಗ್ಗೆ ಚಿಂತಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಜಪಾನ್‌ ಸರ್ಕಾರ ಕ್ರೀಡಾಕೂಟವನ್ನು ನಿಗದಿತ ವೇಳಾಪಟ್ಟಿಯಂತೆಯೇ ನಡೆಸಲು ಪಟ್ಟು ಹಿಡಿದಿದ್ದರೂ, ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ತೆರೆ ಮರೆಯಲ್ಲೇ ಕ್ರೀಡಾಕೂಟ ಮುಂದೂಡಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಲ್ಲಿದೆ.

ಕೊರೋನಾ ಸೋಂಕಿನ ಭೀತಿಯಿಂದ ಕ್ರೀಡಾ ಲೋಕ ಸ್ತಬ್ಧವಾಗಿದ್ದರೂ, ಜಪಾನ್‌ ಮಾತ್ರ ಕ್ರೀಡಾಕೂಟ ಯಾವುದೇ ತೊಂದರೆಯಿಲ್ಲದೆ ನಡೆಯಲಿದೆ ಎಂದು ಪುನರುಚ್ಚರಿಸಿದೆ. ಇತ್ತೀಚೆಗಷ್ಟೇ ಜಪಾನ್‌ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು, ಕ್ರೀಡಾಕೂಟವನ್ನು ಮುಂದೂಡಲು ನಾವು ಸಿದ್ಧತೆ ನಡೆಸುತ್ತಿಲ್ಲ ಎಂದಿದ್ದರು. ಪ್ರಧಾನಿ ಶಿನ್ಜೊ ಅಬೆ ಸಹ ಕ್ರೀಡಾಕೂಟವನ್ನು ನಡೆಸುವ ಬಗ್ಗೆಯೇ ಯೋಚಿಸುತ್ತಿದ್ದು, ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಜಪಾನ್‌ ಸರ್ಕಾರ ದೇಶಿಯ ಪ್ರಾಯೋಜಕತ್ವದಿಂದ ಸುಮಾರು 3 ಶತಕೋಟಿ ಡಾಲರ್‌ (ಅಂದಾಜು 22.6 ಸಾವಿರ ಕೋಟಿ ರು.) ನಿರೀಕ್ಷೆ ಮಾಡುತ್ತಿದೆ. ಕ್ರೀಡಾಕೂಟದ ಸಿದ್ಧತೆಗಾಗಿ 12 ಶತಕೋಟಿ ಡಾಲರ್‌ (ಅಂದಾಜು 90 ಸಾವಿರ ಕೋಟಿ ರು.) ಖರ್ಚು ಮಾಡಿದೆ.

ಕೊರೋನಾ ಭೀತಿ: ಒಲಿಂಪಿಕ್ಸ್‌ ಮುಂದೂಡಲು ಒತ್ತಡ!

‘ಅಂತಿಮವಾಗಿ ನಾವು ಕ್ರೀಡಾಕೂಟವನ್ನು ಮುಂದೂಡಬೇಕಾದರೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವ ಬಗ್ಗೆ ಚಿಂತನೆ ಆರಂಭಿಸಿದ್ದೇವೆ. ಪ್ಲ್ಯಾನ್‌ ‘ಬಿ’, ‘ಸಿ’, ‘ಡಿ’ ಹೀಗೆ ವಿವಿಧ ಆಯ್ಕೆಗಳತ್ತ ಗಮನ ಹರಿಸುತ್ತಿದ್ದೇವೆ’ ಎಂದು ಹೆಸರು ಹೇಳಲು ಇಚ್ಛಿಸದ ಆಯೋಜನಾ ಸಮಿತಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ವರದಿ ಬಗ್ಗೆ ಐಒಸಿ ಇಲ್ಲವೇ ಜಪಾನ್‌ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಐಒಸಿ, ಜಪಾನ್‌ ಸರ್ಕಾರದೊಂದಿಗೆ ಸಭೆ ನಡೆಸಲಿದ್ದು ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗಿದೆ. ಇದೇ ವೇಳೆ ಆಯೋಜನ ಸಮಿತಿಯ ಮತ್ತೊಬ್ಬ ಅಧಿಕಾರಿ, ಕ್ರೀಡಾಕೂಟವನ್ನು ಒಂದರಿಂದ ಎರಡು ವರ್ಷಗಳ ಕಾಲ ಮುಂದೂಡುವ ಬಗ್ಗೆ ಚರ್ಚೆ ಆಗಿರುವುದನ್ನು ಖಚಿತಪಡಿಸಿದ್ದಾರೆ. ಆಯೋಜನಾ ಸಮಿತಿಯ ಕೆಲ ಅಧಿಕಾರಿಗಳು ಒಂದು ತಿಂಗಳು ಇಲ್ಲವೇ 45 ದಿನಗಳ ವರೆಗೂ ಮುಂದೂಡುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಟೋಕಿಯೋ ಒಲಿಂಪಿಕ್ಸ್‌ ಆಯೋಜನಾ ಸಮಿತಿಯ ಮತ್ತಿಬ್ಬರು ಹಿರಿಯ ಅಧಿಕಾರಿಗಳು ಸಹ ಕ್ರೀಡಾಕೂಟವನ್ನು ಮುಂದೂಡುವುದೇ ಸೂಕ್ತ ಎನಿಸುತ್ತಿದೆ ಎಂದಿದ್ದಾರೆ. ‘ನಿರ್ಧಾರ ಕೈಗೊಳ್ಳುವುದನ್ನು ತಡ ಮಾಡಿದಷ್ಟೂ, ಹೆಚ್ಚೆಚ್ಚು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಕೆಲ ಅನಗತ್ಯ ರದ್ಧತಿ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ’ ಎಂದು ಅಧಿಕಾರಿಯೊಬ್ಬರು ಐಒಸಿಗೆ ಸಲಹೆ ನೀಡಿದ್ದಾರೆ.

ವಿಶೇಷ ವಿಮಾನದಲ್ಲಿ ಜಪಾನ್‌ ತಲುಪಿದ ಒಲಿಂಪಿಕ್‌ ಜ್ಯೋತಿ

ಜಪಾನ್‌ನ ಸ್ಥಳೀಯ ದಿನಪತ್ರಿಕೆ ‘ನಿಕ್ಕೀ’ ಭಾನುವಾರ ತನ್ನ ವೆಬ್‌ಸೈಟ್‌ನಲ್ಲಿ ಸುದ್ದಿಯೊಂದನ್ನು ಪ್ರಕಟಿಸಿದ್ದು, ಅದರ ಪ್ರಕಾರ ಈ ವಾರದಲ್ಲಿ ಐಒಸಿ ಸಭೆ ನಡೆಸಲಿದೆ. ಸಭೆಯಲ್ಲಿ ಕ್ರೀಡಾಕೂಟವನ್ನು ಮುಂದೂಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಲಿದೆ ಎನ್ನಲಾಗಿದೆ.

ಕ್ರೀಡಾಕೂಟವನ್ನು ಒಂದರಿಂದ ಎರಡು ವರ್ಷಗಳ ವರೆಗೂ ಮುಂದೂಡಿದರೆ ಕೆಲ ಸಮಸ್ಯೆಗಳು ಎದುರಾಗುವ ಸಾಧ್ಯತೆಯೂ ಇದೆ. ಹಿರಿಯ ಕ್ರೀಡಾಪಟುಗಳು ಆಕ್ಷೇಪಿಸಬಹುದು. ಒಲಿಂಪಿಕ್ಸ್‌ ನಂತರ ನಿವೃತ್ತಿ ಪಡೆಯುವ ಯೋಚನೆಯಲ್ಲಿರುವವರಿಗೆ ಹಿನ್ನಡೆಯಾಗಲಿದೆ. ಅಲ್ಲದೇ ಪ್ರಾಯೋಜಕರನ್ನು ಹಿಡಿದಿಟ್ಟುಕೊಳ್ಳುವುದು ಸಹ ದೊಡ್ಡ ಸವಾಲು. ಕ್ರೀಡಾಕೂಟಕ್ಕೆ 60ಕ್ಕಿಂತಲೂ ಹೆಚ್ಚು ಪ್ರಾಯೋಜಕರಿದ್ದಾರೆ. ಮುಖ್ಯವಾಗಿ ಒಲಿಂಪಿಕ್ಸ್‌ ಕ್ರೀಡಾ ಗ್ರಾಮವನ್ನು ಕ್ರೀಡಾಕೂಟದ ಬಳಿಕ ಫ್ಲ್ಯಾಟ್‌ಗಳಾಗಿ ಪರಿವರ್ತಿಸಿ ಮಾರಾಟ ಮಾಡಬೇಕಿದೆ. ಒಂದರಿಂದ ಎರಡು ವರ್ಷ ಮುಂದೂಡಿದರೆ ಆರ್ಥಿಕವಾಗಿ ನಷ್ಟಉಂಟಾಗಲಿದೆ. ಕೊರೋನಾ ಸೋಂಕಿನ ಭೀತಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವ ವರೆಗೂ ವಿದೇಶಿ ಪ್ರವಾಸಿಗರು ಒಲಿಂಪಿಕ್ಸ್‌ ವೀಕ್ಷಣೆಗೆ ಬರಲು ಧೈರ್ಯ ಮಾಡಲಾರರು ಎನ್ನುವ ಆತಂಕ ಜಪಾನ್‌ನ ವೈಮಾನಿಕ ಸಂಸ್ಥೆಗಳಿಗೆ ಇದೆ. ವಿಮಾನ ಟಿಕೆಟ್‌ ಮಾರಾಟದಲ್ಲೂ ಭಾರೀ ನಷ್ಟವಾಗಬಹುದು ಎಂದು ವಿಶ್ಲೇಷಿಸಲಾಗಿದೆ.

ಕ್ರೀಡಾಕೂಟವನ್ನು ಒಂದರಿಂದ ಎರಡು ವರ್ಷಗಳ ಕಾಲ ಮುಂದೂಡಲು ಐಒಸಿ ಅಷ್ಟುಸುಲಭವಾಗಿ ನಿರ್ಧರಿಸಲು ಸಾಧ್ಯವಿಲ್ಲ. 2021ರ ವೇಳಾಪಟ್ಟಿಕಿಕ್ಕಿರಿದಿದೆ. 2022ರಲ್ಲಿ ಫಿಫಾ ಫುಟ್ಬಾಲ್‌ ವಿಶ್ವಕಪ್‌ ಹಾಗೂ ಬೀಜಿಂಗ್‌ನಲ್ಲಿ ಚಳಿಗಾಲದ ಒಲಿಂಪಿಕ್ಸ್‌ ನಡೆಯಲಿದೆ. ಹೀಗಾಗಿ ಪರಿಷ್ಕೃತ ವೇಳಾಪಟ್ಟಿ ಸಿದ್ಧಪಡಿಸುವುದು ದೊಡ್ಡ ಸವಾಲಾಗಿ ಪರಿಣಮಿಸಲಿದೆ.

ಐಒಸಿ ಮುಂದಿರುವ ಆಯ್ಕೆಗಳೇನು?

* ನಿಗದಿತ ವೇಳಾಪಟ್ಟಿಯಂತೆಯೇ ಕ್ರೀಡಾಕೂಟ ನಡೆಸುವುದು

* ಒಂದು ತಿಂಗಳಿಂದ 45 ದಿನಗಳ ವರೆಗೂ ಮುಂದೂಡುವುದು

* 2021 ಇಲ್ಲವೇ 2022ರಲ್ಲಿ ಕ್ರೀಡಾಕೂಟ ಆಯೋಜಿಸುವುದು

* ಪ್ರೇಕ್ಷಕರಿಗೆ ಪ್ರವೇಶ ನೀಡದೆ ಖಾಲಿ ಕ್ರೀಡಾಂಗಣಗಳಲ್ಲಿ ಕೂಟ ನಡೆಸುವುದು

ಐಒಸಿಗೆ ಏನೆಲ್ಲಾ ಸಮಸ್ಯೆಗಳಿವೆ?

* 60ಕ್ಕೂ ಹೆಚ್ಚು ಪ್ರಾಯೋಜಕರನ್ನು ಉಳಿಸಿಕೊಳ್ಳುವ ಸವಾಲು

* ಒಂದರೆಡು ವರ್ಷ ಕಳೆದರೆ ಕ್ರೀಡಾ ಗ್ರಾಮವನ್ನು ಫ್ಲ್ಯಾಟ್‌ಗಳನ್ನಾಗಿ

ಪರಿವರ್ತಿಸಿ ಮಾರಾಟ ಮಾಡುವುದು ಕಷ್ಟ

* ವಿದೇಶಿ ಪ್ರೇಕ್ಷಕರು ಬರದಿದ್ದರೆ ವಿಮಾನ ಟಿಕೆಟ್‌ಗಳ ಮಾರಾಟಕ್ಕೆ ತೊಂದರೆ

* ಕ್ರೀಡಾಕೂಟ ಮುಂದೂಡಿದರೆ ಹಿರಿಯ ಅಥ್ಲೀಟ್‌ಗಳಿಂದ ಆಕ್ಷೇಪ ಸಾಧ್ಯತೆ
 

click me!