ಹೊಸ ನಿಯಮಗಳನ್ನು ಜಾರಿಗೆ ತಂದ ವಾಟ್ಸಪ್!

By Web DeskFirst Published Nov 6, 2018, 10:10 PM IST
Highlights

ಅಗತ್ಯಕ್ಕೆ ತಕ್ಕಂತೆ ಬಳಕೆದಾರರಿಗೆ ಉತ್ತಮ ಸೇವೆ ನೀಡುವಲ್ಲಿ ವಾಟ್ಸಪ್ ಹೊಸ ಹೊಸ ಫೀಚರ್‌ಗಳನ್ನು ನೀಡುತ್ತಾ ಬಂದಿದೆ. ಆ ಫೀಚರ್‌ಗಳ ಜೊತೆಗೆ ಕೆಲವೊಂದು ಹೊಸ ನಿಯಮಗಳನ್ನೂ ಕೂಡಾ ವಾಟ್ಸಪ್ ಜಾರಿಗೆ ತಂದಿದೆ.
 

ವಾಣಿಜ್ಯ ಉದ್ದೇಶಗಳಿಗೆ ನೆರವಾಗುವ ನಿಟ್ಟಿನಲ್ಲಿ ವಾಟ್ಸಪ್ ಈ ವರ್ಷ ‘ವಾಟ್ಸಪ್ ಬ್ಯುಸಿನೆಸ್’ ಸೇವೆಯನ್ನು ಆರಂಭಿಸಿತ್ತು.  ಆ ಮೂಲಕ ವಾಣಿಜ್ಯ-ವಹಿವಾಟು ನಡೆಸುವರಿಗೆ ತಮ್ಮ ಗ್ರಾಹಕರೊಂದಿಗೆ ವ್ಯವಹರಿಸಲು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿತ್ತು. 

ಈ ಸೇವೆಯು ಆ್ಯಂಡ್ರಾಯಿಡ್ ಹಾಗೂ ಐಒಎಸ್ ಫೋನ್‌ಗಳಿಗೂ ಲಭ್ಯವಿದೆ. ಇದೀಗ  ಈ ಸೇವೆಯಲ್ಲಿ ವಾಟ್ಸಪ್ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ನೀವು ವಾಟ್ಸಪ್ ಫಾರ್ ಬ್ಯುಸಿನೆಸ್ ಸೇವೆಯನ್ನು ಬಳಸುವವರಾದರೆ, ಇನ್ಮುಂದೆ ಕೆಲವು ವಿಷಯಗಳನ್ನು ಗಮನದಲ್ಲಿಡಬೇಕಾಗುತ್ತದೆ.

ನಿಮ್ಮ ಬ್ಯುಸಿನೆಸ್ ಅಕೌಂಟ್ ‘ಅಫಿಶಿಯಲ್’ [ಅಧಿಕೃತ] ವೆಂದು ನಮೂದಾಗಿದ್ದರೆ,  ಬಳಿಕ ಖಾತೆಯ ಹೆಸರನ್ನು ಬದಲಾಯಿಸಿದ್ದಲ್ಲಿ ನೀವು ‘ಅಧಿಕೃತ’ ಮಾನ್ಯತೆಯನ್ನು ಕಳೆದುಕೊಳ್ಳಬೇಕಾಗುತ್ತದೆ. 
 
ಬ್ಯುಸಿನೆಸ್ ಅಕೌಂಟ್‌ಗಳ ಹೆಸರಿನ ಸ್ಪೆಲ್ಲಿಂಗ್ ಹಾಗೂ ವ್ಯಾಕರಣದ ಬಗ್ಗೆಯೂ ವಾಟ್ಸಪ್ ತುಸು ಗಂಭೀರವಾಗಿದೆ. ನಿಮ್ಮ ಬ್ಯುಸಿನೆಸ್ ಅಕೌಂಟ್ ಹೆಸರಿನ ಮೊದಲ ಅಕ್ಷರ ಮಾತ್ರ ಕ್ಯಾಪಿಟಲ್ ಲೆಟರ್ ಆಗಿರಬೇಕು; ಪೂರ್ತಿ ಹೆಸರು ಕ್ಯಾಪಿಟಲ್ ಲೆಟರ್ ಬಳಸಿ ಬರೆಯುವಂತಿಲ್ಲ. 

ಬ್ಯುಸಿನೆಸ್ ಅಕೌಂಟ್ ಹೆಸರಿನಲ್ಲಿ ಸ್ಪೇಸ್ ಕೂಡಾ ಒಂದಕ್ಷರಕ್ಕಿಂತ ಹೆಚ್ಚು ನೀಡುವಂತಿಲ್ಲ. ಅನಗತ್ಯ ಚಿಹ್ನೆಗಳು, ಇಮೋಜಿಗಳು, ಸಂಕೇತ ಅಥವಾ ವಿಶೇಷಾಕ್ಷರಗಳನ್ನು ಇನ್ಮುಂದೆ ಬಳಸುವಂತಿಲ್ಲ.

ವ್ಯಕ್ತಿಯ ಹೆಸರನ್ನೇ ಬ್ಯುಸಿನೆಸ್ ಅಕೌಂಟ್ ಹೆಸರನ್ನಾಗಿ ಬಳಸುವಂತಿಲ್ಲ.  ಉದ್ಯಮ ಸಂಸ್ಥೆಯ ಹೆಸರನ್ನೇ ಬಳಸಬೇಕು.  ಸಾಮಾನ್ಯ ಪದಗಳನ್ನು [ಉದಾ: ವಿಡಿಯೋ , ಲಿಪ್ಪ್‌ಸ್ಟಿಕ್, ನ್ಯೂಯಾರ್ಕ್ ಅಥವಾ ಪ್ಯಾಂಟ್ ಇತ್ಯಾದಿ] ಸಂಸ್ಥೆಯ ಹೆಸರನ್ನಾಗಿ ಬಳಸುವಂತಿಲ್ಲ. 

ನಿಮ್ಮ ವಾಣಿಜ್ಯ ಸಂಸ್ಥೆಯ ಹೆಸರು ಮೂರು ಅಕ್ಷರಗಳಿಗಿಂತ ಕಡಿಮೆಯಾಗಿರುವಂತಿಲ್ಲ.

ಈ ಎಲ್ಲಾ ನಿಯಮಗಳು ಆ್ಯಂಡ್ರಾಯಿಡ್ ಹಾಗೂ ಐಒಎಸ್ ಫೋನ್ ಬಳಕೆದಾರರಿಗೂ ಅನ್ವಯವಾಗುತ್ತದೆ.
 

click me!