ಪೊಲೀಸರಿಂದ ತಪ್ಪಿಸಿಕೊಳ್ಳಲು ಕುಡುಕರ ವಾಟ್ಸಾಪ್‌ ಗ್ರೂಪ್‌!

By Web DeskFirst Published Jul 28, 2019, 9:09 AM IST
Highlights

ಪೊಲೀಸರಿಂದ ತಪ್ಪಿಸಿಕೊಳ್ಳಲು ಕುಡುಕರ ವಾಟ್ಸಾಪ್‌ ಗ್ರೂಪ್‌!| ಹೈದರಾಬಾದ್‌ನಲ್ಲಿ ಸೂಪರ್‌ಹಿಟ್‌

ಹೈದರಾಬಾದ್‌[ಜು.28]: ಮದ್ಯ ಸೇವಿಸಿ ರಾತ್ರಿ ಮನೆಗೆ ತೆರಳುವ ಜನರು ಮಹಾನಗರಗಳಲ್ಲಿ ಎದುರಿಸುವ ಬಹುದೊಡ್ಡ ಸಮಸ್ಯೆ ರಸ್ತೆ ಮಧ್ಯೆ ಅಡ್ಡಗಟ್ಟಿಪೊಲೀಸರು ನಡೆಸುವ ತಪಾಸಣೆ. ಹೈದರಾಬಾದ್‌ನ ಮದ್ಯಪ್ರಿಯರು ಇದಕ್ಕೂ ಪರಿಹಾರ ಹುಡುಕಿಕೊಂಡಿದ್ದಾರೆ. ಪೊಲೀಸರಿಂದ ಪಾರಾಗಲು ಹಲವು ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ಮಾಡಿಕೊಂಡಿದ್ದಾರೆ. ಈ ಐಡಿಯಾ ಸೂಪರ್‌ಹಿಟ್‌ ಆಗಿದೆ ಎಂದು ಹೇಳಲಾಗುತ್ತಿದೆ.

ಒಂದು ನಿರ್ದಿಷ್ಟಪ್ರದೇಶದಲ್ಲಿ ಪೊಲೀಸರ ತಪಾಸಣೆ ನಡೆಯುತ್ತಿರುವುದು ಕಣ್ಣಿಗೆ ಬೀಳುತ್ತಿದ್ದಂತೆ ಅದನ್ನು ಕಂಡ ವ್ಯಕ್ತಿ ಮದ್ಯಪ್ರಿಯರ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಆ ಮಾರ್ಗಕ್ಕೆ ಬರಬೇಡಿ ಎಂದು ಸಲಹೆ ಮಾಡುತ್ತಾನೆ. ಇದೇ ರೀತಿ ವಿವಿಧ ರಸ್ತೆಗಳಲ್ಲಿ ಸಂಚರಿಸುವವರು ಪೊಲೀಸರನ್ನು ಕಂಡ ಕೂಡಲೇ ಮಾಹಿತಿ ರವಾನಿಸುತ್ತಾರೆ. ಇದರಿಂದಾಗಿ ಮದ್ಯ ಸೇವನೆ ಮಾಡಿದವರು ಬದಲಿ ಮಾರ್ಗದಲ್ಲಿ ತೆರಳಲು ಅನುಕೂಲವಾಗಿದೆ. ಈ ರೀತಿಯ ಹಲವಾರು ವಾಟ್ಸ್‌ಗ್ರೂಪ್‌ಗಳು ಇದ್ದು, ಕ್ಷಣಕ್ಷಣಕ್ಕೂ ಮಾಹಿತಿ ಸಿಗುವಂತಾಗಿದೆ.

ಇದರ ಜತೆಗೆ ಪೊಲೀಸರಿಂದ ಪಾರಾಗಲು ಕೆಲವೊಂದು ಜಂಕ್ಷನ್‌ಗಳಲ್ಲಿ ಚಾಲಕರೂ ಸಿಗುತ್ತಿದ್ದಾರೆ! ಒಂದು ನಿರ್ದಿಷ್ಟದೂರದವರೆಗೆ ಮದ್ಯಪ್ರಿಯರನ್ನು ಸಾಗಿಸಿ, ಅವರು ಹಣ ಪಡೆದು ಕೆಳಗಿಳಿಯುತ್ತಿರುವ ಪ್ರಕರಣಗಳೂ ನಡೆಯುತ್ತಿವೆ.

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಮದ್ಯಪ್ರಿಯರು ಮಾಡಿಕೊಂಡಿರುವ ವಾಟ್ಸ್‌ಆ್ಯಪ್‌ ಗ್ರೂಪ್‌ಗಳ ಬಗ್ಗೆ ಈಗ ಖಾಕಿದಾರಿಗಳಿಗೂ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪೊಲೀಸರನ್ನು ಒಟ್ಟುಗೂಡಿಸಿ ಒಂದೇ ಕಡೆ ತಪಾಸಣೆ ಮಾಡುವ ಬದಲು, ಹಲವು ಸ್ಥಳಗಳಲ್ಲಿ ತಪಾಸಣೆ ನಡೆಸಲು ಉದ್ದೇಶಿಸಲಾಗಿದೆ. ಒಂದು ತಪಾಸಣೆ ತಪ್ಪಿಸಿಕೊಳ್ಳುವ ವ್ಯಕ್ತಿ, ಮತ್ತೊಂದು ಕಡೆ ಸಿಕ್ಕೇ ಸಿಗುತ್ತಾನೆ ಎಂದು ಪೊಲೀಸ್‌ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

click me!