ಒಂದಲ್ಲ, ಎರಡಲ್ಲ, ಈ ಗ್ರಹಕ್ಕೆ ಮೂವರು ಸೂರ್ಯರು| ಗ್ರಹದ ಮೇಲ್ಮೆಯಿಂದ ಮೂವರು ಸೂರ್ಯರ ದರ್ಶನ| ಹೊಸ ಗ್ರಹ ಅನ್ವೇಷಿಸಿದ ನಾಸಾದ TESS ಟೆಲಿಸ್ಕೋಪ್| ಭೂಮಿಯಿಂದ 22.5 ಜ್ಯೋತಿವರ್ಷ ದೂರದಲ್ಲಿದಲ್ಲಿರುವ LTT 144Ab ಗ್ರಹ| LTT 144Ab ಗ್ರಹದ ಸುತ್ತ ಮೂರು ಕೆಂಪು ದೈತ್ಯ ನಕ್ಷತ್ರಗಳು|
ವಾಷಿಂಗ್ಟನ್(ಜು.27): ಬ್ರಹ್ಮಾಂಡದ ವಿಸ್ಮಯತೆಗೆ ಕೊನೆ ಮೊದಲಿಲ್ಲ. ಅನಂತತೆಯನ್ನೇ ಉಸಿರಾಡುವ ಬ್ರಹ್ಮಾಂಡದಲ್ಲಿ ವಿಸ್ಮಯ ಜಗತ್ತುಗಳಿಗೆ ಬರವಿಲ್ಲ. ನಮ್ಮಿಂದ ಊಹಿಸಲಸಾಧ್ಯ ದೂರದಲ್ಲಿ ವಿಸ್ಮಯ ಪ್ರಪಂಚದ ಸರಮಾಲೆಯನ್ನೇ ಹೊದ್ದು ಮಲಗಿದೆ ಬ್ರಹ್ಮಾಂಡ.
ಆದರೆ ಈ ಬ್ರಹ್ಮಾಂಡದ ಅನಂತತೆಯನ್ನು ಸೀಳಲು ನಿರ್ಧರಿಸಿರುವ ಮಾನವ, ದೂರದ ವಿಸ್ಮಯಗಳನ್ನು ಸಂಶೋಧಿಸುತ್ತಾ ತನ್ನ ಜ್ಞಾನದ ಪರಿಯನ್ನು ವೃದ್ಧಿಸಿಕೊಳ್ಳುತ್ತಿದ್ದಾನೆ.
ಅದರಂತೆ ನಮ್ಮ ಸೌರಮಂಡಲದಾಚೆಗಿನ ಪ್ರಪಂಚವನ್ನು ಅರಿಯುವಲ್ಲಿ ನಿರತವಾಗಿರುವ ನಾಸಾದ ಟ್ರಾನ್ಸಿಟಿಂಗ್ ಎಕ್ಸೋಪ್ಲ್ಯಾನೆಟ್ ಸರ್ವೆ ಸ್ಯಾಟಲೈಟ್(TESS), ಹೊಸ ಗ್ರಹವೊಂದನ್ನು ಶೋಧಿಸಿದೆ.
LTT 144Ab ಎಂಬ ಹೆಸರಿನ ಈ ಗ್ರಹಕ್ಕೆ ಮೂವರು ಸೂರ್ಯರು ಪೋಷಕರು. ಮೂರು ಸೂರ್ಯರ ಗುರುತ್ವಾಕರ್ಷಣೆಗೆ ಒಳಪಟ್ಟಿರುವ ಈ ಗ್ರಹ, ಒಂದು ನಿರ್ದಿಷ್ಟ ಗ್ರಹವನ್ನು ಸುತ್ತುವುದಾದರೂ, ಉಳಿದೆರಡೂ ಸೂರ್ಯರನ್ನೂ ತನ್ನ ಸಂಬಂಧಿಕರಂದೇ ಭಾವಿಸಿದೆ.
LTT 144Ab ಗ್ರಹದ ಸುತ್ತ ಮೂರು ಕೆಂಪು ದೈತ್ಯ ನಕ್ಷತ್ರಗಳಿದ್ದು, ಇವುಗಳ ಪೈಕಿ ಒಂದು ನಕ್ಷತ್ರ ಮಾತ್ರ LTT 144Ab ಗ್ರಹದ ನೈಜ ಪೋಷಕ ನಕ್ಷತ್ರವಾಗಿದೆ. ಆದರೆ ನಕ್ಷತ್ರಗಳ ಸಾಮೀಪ್ಯದ ಪರಿಣಾಮ ಈ ಗ್ರಹದ ಮೇಲ್ಭಾಗದಿಂದ ಮೂವರು ಸೂರ್ಯರು ಕಾಣುತ್ತಾರೆ.
LTT 144Ab ಗ್ರಹ ಭೂಮಿಯಿಂದ ಸುಮಾರು 22.5 ಜ್ಯೋತಿವರ್ಷ ದೂರದಲ್ಲಿದಲ್ಲಿದ್ದು, ಮೂವರು ಸೂರ್ಯರ ಪೈಕಿ ಎರಡು ಅನತಿ ದೂರದಲ್ಲಿದ್ದು, ಮಾತೃ ನಕ್ಷತ್ರ ಗ್ರಹದ ಅತ್ಯಂತ ಸಮೀಪದಲ್ಲಿದೆ ಎಂದು ನಾಸಾ ತಿಳಿಸಿದೆ.