ಹುಡುಗಿಯರೇ, ನಿಮ್ಮ ಮೊಬೈಲ್‌ನಲ್ಲಿ ಈ ಆ್ಯಪ್‌ಗಳಿರಲಿ

By Web DeskFirst Published Sep 28, 2018, 5:30 PM IST
Highlights

ಮಹಿಳೆಯರಿಗೆ ಒಂದಷ್ಟು ಎಚ್ಚರಿಕೆಯ ಸಂದೇಶಗಳನ್ನು ನೀಡಿ ಸೇಫ್ ಆಗಿ ಗೂಡು ಸೇರಲು ನೆರವಾಗುವ ಸಾಕಷ್ಟು ಆ್ಯಪ್‌ಗಳು ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ. ಅವುಗಳಲ್ಲಿ ಬೆಸ್ಟ್ ಎನಿಸುವ ಒಂದೆರಡು ಆ್ಯಪ್‌ಗಳ ಪರಿಚಯ ನಿಮಗಾಗಿ...

- ಶ್ವೇತಾ ಕೆ.ಪಿ 

‘ಹುಷಾರು ಮಗಳೇ’ ಅಂತ ಮಂದಸ್ಮಿತದೊಂದಿಗೆ ಹೇಳಿದ ಆ ತಂದೆ-ತಾಯಿಯ ಮನದಲ್ಲಿ ಮನೆಮಾಡಿದ ಆತಂಕ-ತಲ್ಲಣ, ಮಗಳು ತಡರಾತ್ರಿಯಲ್ಲಿ ಜೋಪಾನವಾಗಿ ಮನೆ ತಲುಪಿದ ಮೇಲೆಯೇ ನೆಮ್ಮದಿಯ ಕೋಣೆ ತಲುಪುವುದು. ಅಷ್ಟರಮಟ್ಟಿಗಿನ ಅಸುರಕ್ಷತೆಯನ್ನು ಇಂದಿಗೂ ನಗರಗಳಲ್ಲಿನ ಹೆಣ್ಣುಮಕ್ಕಳು ಎದುರಿಸುತ್ತಿದ್ದಾರೆ. ನಮ್ಮ ದೇಶ ಎಷ್ಟೇ ಅಭಿವೃದ್ಧಿ ಹೊಂದಲಿ, ಹೊಸ ಹೊಸ ಆವಿಷ್ಕಾರಗಳೇ ತಲೆದೋರಲಿ, ಅನ್ಯಗ್ರಹಗಳಿಗೆ ಪದಾರ್ಪಣೆ ಮಾಡಲಿ, ಹೆಣ್ಣುಮಕ್ಕಳಿಗೆ ರಕ್ಷಣೆ ಎಂಬ ಸಂಗತಿ ಮಾತ್ರ ಬಲವಾಗಿ ದಬ್ಬಿದರೂ ಬದಲಾವಣೆಯ ಹೊಸಪರ್ವದ ಹೊಸ್ತಿಲು ದಾಟುತ್ತಲೇ ಇಲ್ಲ. 

ಅದರಲ್ಲೂ ಕುಗ್ರಾಮಗಳಿಂದ ಬಂದು ಜಟಿಲ ಕಾನನದಂತಿರುವ ಬೆಂಗಳೂರನ್ನೇ ಸ್ವಗ್ರಾಮದಂತೆ ಭಾವಿಸಿಕೊಂಡು ಧೈರ್ಯದಿಂದ ರಾತ್ರಿವರೆಗೂ ದುಡಿಯುವ ವಿದ್ಯಾವಂತ, ಧೈರ್ಯವಂತ ಮಹಿಳೆಯರೇ ದೌರ್ಜನ್ಯಕ್ಕೊಳಗಾಗುತ್ತಿರುವುದು ದುರಂತ. ಒಂದೊಮ್ಮೆ ಅನ್ಯಾಯದ ವಿರುದಟಛಿ ಹೋರಾಡುವುದಕ್ಕೆ ಅಣಿಯಾದರೂ, ಸಾಕ್ಷ್ಯ ಪುರಾವೆಗಳಿಲ್ಲದೇ ಅನ್ಯಾಯದ ಜಾಲಕ್ಕೆ ಸಿಲುಕಿ ನಲುಗುತ್ತಿದ್ದಾರೆ. ಇಂಥ ಸಮಸ್ಯೆಗಳ ಗಾಢತೆಗೆ ಪರಿಹಾರತ್ಮಕವಾಗಿ, ಮಹಿಳೆಯರಿಗೆ ಒಂದಷ್ಟು ಎಚ್ಚರಿಕೆಯ ಸಂದೇಶಗಳನ್ನು ನೀಡಿ ಸೇಫ್ ಆಗಿ ಗೂಡು ಸೇರಲು ನೆರವಾಗುವ ಸಾಕಷ್ಟು ಆ್ಯಪ್‌ಗಳು ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ. ಅವುಗಳಲ್ಲಿ ಬೆಸ್ಟ್ ಎನಿಸುವ ಒಂದೆರಡು ಆ್ಯಪ್‌ಗಳ ಪರಿಚಯ ನಿಮಗಾಗಿ...

ಬಿ ಸೇಫ್:

ನಿಮ್ಮ ಮೊಬೈಲ್‌ನಲ್ಲಿ ಈ ಆ್ಯಪ್ ಇದ್ದರೆ ನೀವೆಂದೂ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದೀರಿ ಎಂದು ಭಾವಿಸುವುದೇ ಇಲ್ಲ. ನಿಮ್ಮ ಜೊತೆ ಸದಾ ನಿಮ್ಮ ಆಪ್ತರು ಇದ್ದಾರೆ ಎಂದು ಧೈರ್ಯ ನೀಡುವಂಥ ಆ್ಯಪ್ ಇದು. ಈ ಆ್ಯಪ್‌ನ್ನು ಪ್ಲೇಸ್ಟೋರ್‌ನಲ್ಲಿ ನಿಮ್ಮ ಮೊಬೈಲ್ ಬತ್ತಳಿಕೆಗೆ ಇಳಿಸಿಕೊಂಡ ಮೇಲೆ ಸೈನ್ ಇನ್ ಆಗುವಾಗ ನಿಮ್ಮ ಪಾಲಕರ, ಆಪ್ತರ ಹಾಗೂ ಸ್ನೇಹಿತರ ಸಂಪರ್ಕ ಸಂಖ್ಯೆಯನ್ನು ನಮೂದಿಸಬೇಕು. ಈ ಆ್ಯಪ್‌ನಲ್ಲಿ ಫೇಕ್ ಕಾಲ್, ಫಾಲೋ ಮಿ, ಟೈಮರ್, ಲೊಕೇಶನ್ ಶೇರಿಂಗ್ ಆಯ್ಕೆಗಳು ಲಭ್ಯ. ನಿಮಗೆ ಕೊಂಚ ಆಪತ್ತಿನ ಗಾಳಿ ಸೋಕುತ್ತಿದೆ ಎಂದೆನಿಸುವಾಗಲೇ ಎಸ್‌ಓಎಸ್ ಬಟನ್ ಒತ್ತಿದರೆ ನಿಮ್ಮ ಆಪ್ತರಿಗೆ ಜಿಪಿಎಸ್ ಮೂಲಕ ನೀವಿರುವ ಲೊಕೇಶನ್ ಮಾಹಿತಿ ರವಾನೆಯಾಗುತ್ತದೆ. ಅದೂ ಲೈವ್ ಸ್ಟ್ರೀಮಿಂಗ್ ರೆಕಾರ್ಡಿಂಗ್ ವಿಡಿಯೋ, ಆಡಿಯೋ ಸಮೇತ ಎಂಬುದು ವಿಶೇಷ.

ಮೊಬೈಲ್ ಕೈಯಲ್ಲಿದ್ದರೆ ಓಕೆ, ಬ್ಯಾಗ್, ಪರ್ಸ್, ಜಾಕೆಟ್‌ನಲ್ಲಿದ್ದರೆ ಏನು ಗತಿ? ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಅದಕ್ಕೆ ಉತ್ತರವಾಗಿ ಇಲ್ಲಿ ವಾಯ್ಸ್ ರೆಕಾರ್ಡ್ ಎಂಬ ಆಯ್ಕೆ ಇದೆ. ಲಾಗಿನ್ ಆಗುವ ವೇಳೆ ನೀವು ನಿಮ್ಮ ಧ್ವನಿಯನ್ನು ಪಾಸ್‌ವರ್ಡ್‌ನಂತೆ ದೃಢಪಡಿಸಿದ್ದರೆ ನಿಮ್ಮ ಮೊಬೈಲ್ ಬ್ಯಾಗ್‌ನಲ್ಲಿದ್ದರೂ ಎಸ್‌ಓಎಸ್ ಬಟನ್‌ನನ್ನು ಚಾಲುಗೊಳಿಸಬಹುದು. ಯಾರಾದರೂ ನಿಮ್ಮನ್ನು ಫಾಲೋ ಮಾಡುತ್ತಿದ್ದಾರೆ ಎಂಬುದರ ಸುಳಿವು ಸಿಕ್ಕಿದೊಡನೆ ನಿಮಗೆ ಗೊತ್ತಿರುವ ನಂಬರನ್ನು ಟೈಪಿಸಿದರೆ ಸಾಕು ಫೇಕ್ ಕಾಲ್ ನಿಮ್ಮ ನಂಬರಿಗೆ ಬರುತ್ತದೆ. ಅಲ್ಲದೇ ಫಾಲೋಮಿ ಆಯ್ಕೆಯನ್ನು ಕ್ಲಿಕ್ಕಿಸಿದರೆ ನೀವಿರುವ ತಾಣದಿಂದ ಮನೆ ತಲುಪುವವರೆಗೂ ನಿಮ್ಮ ಆಪ್ತರು ನಿಮ್ಮ ಚಟುವಟಿಕೆಗಳನ್ನು ಗಮನಿಸಬಹುದು. ಅಲ್ಲದೇ ನಿಮ್ಮನ್ನು ಹಿಂಬಾಲಿಸಿ ಕಿರುಕುಳ ನೀಡಲು ಪ್ರಯತ್ನಿಸಿದ ವ್ಯಕ್ತಿ ನಿಮ್ಮ ಮೊಬೈಲ್‌ನ್ನು ನಾಶಗೊಳಿಸಿದರೂ ಅದರಲ್ಲಿ ಆಟೋಮ್ಯಾಟಿಕ್ ಆಗಿ ರೆಕಾರ್ಡ್ ಆಗಿ ನಿಮ್ಮ ಆಪ್ತರ ಮೊಬೈಲ್ ತಲುಪಿದ ಆ ವಿಡಿಯೋ ನಾಶ ಹೊಂದುವುದಿಲ್ಲ. ಆ ಸಾಕ್ಷ್ಯದಿಂದಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು. ಆದರೆ, ಈ ಆ್ಯಪ್ ನಿಮ್ಮ ನೊಂದಾಯಿಸಿರುವ ನಿಮ್ಮ ಆಪ್ತರ ಮೊಬೈಲ್‌ನಲ್ಲೂ ಇರಬೇಕು.

ಮೊಬೈಲ್ ಚಾರ್ಜಿಂಗ್ ಮತ್ತು ಬ್ಯಾಟರಿ ಲೈಫ್ : ನೀವು ತಿಳಿದಿರಬೇಕಾದ 8 ವಿಷಯಗಳು

 ಮೈ ಸೇಫ್ಟಿಪಿನ್

ಈ ದಾರಿಯಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತವೆ ಎಂಬ ನಾಮಫಲಕವಿದ್ದರೆ ನಾವೆಂದೂ ಆ ದಾರಿಯಲ್ಲಿ ಸಾಗುವುದೇ ಇಲ್ಲ ಅಲ್ಲವೇ? ಹಾಗೆಯೇ ಈ ಆ್ಯಪ್ ಕೂಡಾ ಅನಾಹುತಗಳು ಸಂಭವಿಸುವ ಮುನ್ನವೇ ನಮ್ಮನ್ನು ಎಚ್ಚರಿಸುತ್ತದೆ. ನೀವೇನಾದರೂ ಅಪರಿಚಿತ ನಗರಕ್ಕೆ ಕಾಲಿಡುತ್ತಿದ್ದೀರಿ ಎಂದಿಟ್ಟುಕೊಳ್ಳಿ ಆ ವೇಳೆ ಈ ಆ್ಯಪ್ ನಿಮಗೆ ನೆರವಾದೀತು. ನೀವು ಹೋಗ ಬೇಕೆಂದಿರುವ ಸ್ಥಳದ ವಿಳಾಸ ವನ್ನು ಮ್ಯಾಪ್‌ನಲ್ಲಿ ನಮೂ ದಿಸಿದರೆ ಸಾಕು, ಆ ಪ್ರದೇಶ ದಲ್ಲಿನ
ಪೊಲೀಸ್ ನಿಲ್ದಾಣ, ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಔಷಧಿ ಮಳಿಗೆ, ಆಸ್ಪತ್ರೆ, ಬೀದಿ ದೀಪಗಳ ವ್ಯವಸ್ಥೆ, ಎಟಿಎಂ ಇರುವಿಕೆ, ಆ ಏರಿಯಾದಲ್ಲಿ ಆ ವೇಳೆಗೆ ಎಷ್ಟು ಜನ ಇದ್ದಾರೆ, ಮಹಿಳೆಯರೆಷ್ಟಿದ್ದಾರೆ, ಕ್ರೌಡ್ ಹೇಗಿದೆ? ಎಂಬುದರ ಆಧಾರದ ಮೇಲೆ ನಿಮಗೆ ಆ ಸ್ಥಳ ಎಷ್ಟು ಸುರಕ್ಷಿತ ಎಂಬು ದನ್ನು ಮುಂಚಿತವಾಗಿಯೇ ತಿಳಿಸುತ್ತದೆ. ಜಿಪಿಎಸ್ ಮೂಲಕವೇ ನಾವಿರುವ ಜಾಗ ಸುರಕ್ಷಿತವೋ ಇಲ್ಲವೋ ಎಂಬುದನ್ನು ಪತ್ತೆಹಚ್ಚಿ, ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತದೆ.

ನೀವೇನಾದರೂ ಅಸು ರಕ್ಷಿತ ಜಾಗದಲ್ಲಿದ್ದರೆ ಲಾಗಿನ್ ಆಗುವ ವೇಳೆ ನೀವು ನೊಂದಾಯಿಸಿದ ನಿಮ್ಮ ಸ್ನೇಹಿತರ ಅಥವಾ ಕುಟುಂಬಸ್ಥರ ನಂಬರಿಗೆ ಸಂದೇಶವನ್ನು ರವಾನಿಸುತ್ತದೆ. ಅಲ್ಲದೇ ನೀವಿರುವ ಜಾಗದಿಂದ ತಲುಪಬೇಕಾದ ಸ್ಥಳಕ್ಕಿರುವ ಸುರಕ್ಷಿತ ಮಾರ್ಗವನ್ನೂ ಸೂಚಿಸುತ್ತದೆ. ರಾತ್ರಿ ವೇಳೆ ಪ್ರಯಾಣಿಸುವ ಹೆಣ್ಣುಮಕ್ಕಳಿಗೆ ಈ ಆ್ಯಪ್ ಸ್ನೇಹಿತನಿದ್ದಂತೆ. ನಿಮ್ಮ ಆಪ್ತರಿಗೆ ನೀವು ಸುರಕ್ಷಿತವಾಗಿ ಪ್ರಯಾಣಿಸುತ್ತಿದ್ದೀರಿ ಎಂಬ ಸುಳಿವು ದೊರೆತು ನಿರಾಳವಾಗಲು ಈ ಆ್ಯಪ್ ನೆರವಾಗುತ್ತದೆ.

ಮಹಿಳೆಯರ ಸುರಕ್ಷತೆಗಾಗಿ ಸರಕಾರದಿಂದಲೂ ‘ಎಸ್ ಗಾರ್ಡ್, ಸುರಕ್ಷಾ’ಸೇರಿದಂತೆ ಅನೇಕ ಆ್ಯಪ್‌ಗಳನ್ನು ಬಿಡುಗಡೆಗೊಳಿಸಿದ್ದಾರೆ.ಅವುಗಳನ್ನು ನಿಮ್ಮ ಸುರಕ್ಷತೆಗಾಗಿ ಸದ್ಬಳಕೆ ಮಾಡಿಕೊಳ್ಳಬಹುದು. ಆದರೆ, ಈ ಎಲ್ಲಾ ಆ್ಯಪ್‌ಗಳು ನಿಮಗೆ ಆಪತ್ತು ಎದುರಾದಾಗ, ಭಯಗ್ರಸ್ಥರಾಗಿರುವ ನಿಮಗೆ ಧೈರ್ಯ ತುಂಬುವುದಕ್ಕಷ್ಟೆ ಹೊರತು ನಿಮ್ಮನ್ನು ಸೂಪರ್‌ಮ್ಯಾನ್, ಸ್ಪೈಡರ್ ಮ್ಯಾನ್‌ನಂತೆ ಬಂದು ರಕ್ಷಿಸುತ್ತವೆ ಎಂದು ಭ್ರಮಾಲೋಕದಲ್ಲಿ ತೇಲದಿರಿ.
ತಡರಾತ್ರಿವರೆಗೂ ದುಡಿಯುವ ಹೆಣ್ಣುಮಕ್ಕಳು ಈ ಆ್ಯಪ್‌ಗಳ ನೆರವಿನಿಂದ ಆರಾಮದಾಯಕವಾಗಿ ಮನೆ ತಲುಪುಬಹುದಷ್ಟೆ.

click me!