Global Arms Sales: ಜಗತ್ತಿನ ಟಾಪ್ 100ರಲ್ಲಿ ಮೂರು ಭಾರತೀಯ ಕಂಪನಿಗಳು!‌

By Suvarna NewsFirst Published Dec 7, 2021, 11:35 AM IST
Highlights

*ಶಸ್ತ್ರಾಸ್ತ್ರ ಮಾರಾಟ: ಟಾಪ್‌ 100ರಲ್ಲಿ ಭಾರತದ 3  ಕಂಪನಿಗಳು
*ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ವರದಿ
*HAL, BEL ಹಾಗೂ Indian Ordnance Factories ಗೆ ಸ್ಥಾನ
 

ನವದೆಹಲಿ(ಡಿ. 07): 2020 ರಲ್ಲಿ ಜಾಗತಿಕ ಮಟ್ಟದಲ್ಲಿ ಒಟ್ಟಾರೆ  ಶಸ್ತ್ರಾಸ್ತ್ರ ಮಾರಾಟದಲ್ಲಿ (Global Arms Sales) ಮೂರು ಭಾರತೀಯ ಕಂಪನಿಗಳು ವಿಶ್ವದ ಅಗ್ರ 100 ರಲ್ಲಿ ಸೇರಿವೆ ಎಂದು ಜಾಗತಿಕ ಶಸ್ತ್ರಾಸ್ತ್ರ ವ್ಯಾಪಾರವನ್ನು ಟ್ರ್ಯಾಕ್ ಮಾಡುವ ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ( Stockholm International Peace Research Institute) ಹೊಸ ವರದಿ ಹೇಳಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (Hindustan Aeronautics Limited), ಇಂಡಿಯನ್ ಆರ್ಡನೆನ್ಸ್ ಫ್ಯಾಕ್ಟರಿಗಳು (Indian Ordnance Factories) ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (Bharat Electronics Limited) ಅಗ್ರ 100ರಲ್ಲಿ ಸ್ಥಾನ ಪಡೆದಿವೆ. ಈ ಮೂರು ಕಂಪನಿಗಳು 2019 ರಲ್ಲಿ ಕೂಡ ಶಸ್ತ್ರಾಸ್ತ್ರ ಮಾರಾಟದಲ್ಲಿ ಅಗ್ರ 100 ರೊಳಗೆ ಸ್ಥಾನ ಪಡೆದಿದ್ದವು.

ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ ( SIPRI) ವರದಿಯ ಪ್ರಕಾರ  ಶಸ್ತ್ರಾಸ್ತ್ರಗಳ ಮಾರಾಟದಲ್ಲಿ 2.97 ಬಿಲಿಯನ್‌ ಯುಎಸ್‌ ಡಾಲರ್‌ ವಹಿವಾಟು ( 2019 ರ ಮಾರಾಟಕ್ಕಿಂತ 1.5 ಶೇಕಡಾ ಹೆಚ್ಚಿಗೆ) ಮಾಡಿರುವ ಎಚ್‌ಎಎಲ್‌  42 ನೇ ಸ್ಥಾನದಲ್ಲಿದೆ. ಭಾರತೀಯ ಆರ್ಡನೆನ್ಸ್ ಫ್ಯಾಕ್ಟರಿಗಳು 60 ನೇ ಸ್ಥಾನದಲ್ಲಿದ್ದು,  1.9 ಬಿಲಿಯನ್  ಯುಎಸ್‌ ಡಾಲರ್‌ (ಹಿಂದಿನ ವರ್ಷಕ್ಕಿಂತ 0.2 ಶೇಕಡಾ ಹೆಚ್ಚು) ವಹಿವಾಟು ನಡೆಸಿವೆ. ಬಿಇಎಲ್ 66 ನೇ ಸ್ಥಾನದಲ್ಲಿದ್ದು 1.63 ಬಿಲಿಯನ್‌ ವಹಿವಾಟು (2019 ಕ್ಕೆ ಹೋಲಿಸಿದರೆ  ಶೇಕಡಾ 4 ರಷ್ಟು ಹೆಚ್ಚು) ನಡೆಸಿದೆ. ಇವುಗಳಲ್ಲಿ ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಧೀನ ಕೆಲಸ ಮಾಡುತ್ತಿದ್ದ ಆರ್ಡನೆನ್ಸ್ ಫ್ಯಾಕ್ಟರಿಗಳನ್ನು ಒಳಗೊಂಡಿರುವ ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್ (OFB) ಅನ್ನು ವಿಸರ್ಜಿಸಿ ಏಳು ಹೊಸ ಸಾರ್ವಜನಿಕ ವಲಯದ ಉದ್ಯಮಗಳನ್ನು (Public Sector Undertakings) ರಚಿಸಲಾಗಿತ್ತು.

ಟಾಪ್ 100 ನಲ್ಲಿ ಅತಿ ಹೆಚ್ಚು US ಕಂಪನಿಗಳು!

ಆದಾಗ್ಯೂ ರಕ್ಷಣಾ ಉತ್ಪಾದನಾ ಅಗ್ರ ರಾಷ್ಟ್ರಗಳಲ್ಲಿ ಭಾರತವು ಅತ್ಯಂತ ಚಿಕ್ಕ ಪಾಲನ್ನು ಹೊಂದಿದೆ. 41 ಶಸ್ತ್ರಾಸ್ತ್ರ ಕಂಪನಿಗಳೊಂದಿಗೆ, ಯುಎಸ್‌ಎ (USA) ವಿಶ್ವದಾದ್ಯಂತ ಟಾಪ್ 100 ನಲ್ಲಿ ಅತಿ ಹೆಚ್ಚು ಕಂಪನಿಗಳನ್ನು ಹೊಂದಿದೆ ಎಂದು SIPRI ವರದಿ ಹೇಳಿದೆ. ಒಟ್ಟಾರೆಯಾಗಿ, ಅವರ ಶಸ್ತ್ರಾಸ್ತ್ರ ಮಾರಾಟವು $ 285 ಬಿಲಿಯನ್ ಆಗಿದ್ದು  2019 ಕ್ಕೆ ಹೋಲಿಸಿದರೆ 1.9 ಶೇಕಡಾ ಹೆಚ್ಚಳವಾಗಿದೆ.

Anti-drone Technology ಭಾರತದಲ್ಲೇ ಅಭಿವೃದ್ಧಿ: ಶೀಘ್ರದಲ್ಲಿ ಭದ್ರತಾ ಪಡೆಗಳಿಗೆ ಹಸ್ತಾಂತರ : ಅಮಿತ್ ಶಾ!

US ಕಂಪನಿಗಳು ಅಗ್ರ 100 ರ ಒಟ್ಟಾರೆ ಶಸ್ತ್ರಾಸ್ತ್ರ ಮಾರಾಟದಲ್ಲಿ 54 ಪ್ರತಿಶತ ಪಾಲನ್ನು ಹೊಂದಿವೆ. ಚೀನಾವು (China) 13 ಪ್ರತಿಶತ ಪಾಲು ಹೊಂದಿದ್ದು ಎರಡನೇ ಸ್ಥಾನದಲ್ಲಿದೆ. ಯುಕೆ 7.1 ಪ್ರತಿಶತದಷ್ಟಿದೆ. ಅಗ್ರ 100 ಕಂಪನಿಗಳಿಗೆ ಒಟ್ಟಾರೆ  ಶಸ್ತ್ರಾಸ್ತ್ರ ಮಾರಾಟದಲ್ಲಿ ರಷ್ಯಾ (Russia) ಮತ್ತು ಫ್ರಾನ್ಸ್ (France) ಕ್ರಮವಾಗಿ 5 ಪ್ರತಿಶತ ಮತ್ತು 4.7 ರಷ್ಟು ಪಾಲು ಹೊಂದಿದ್ದು ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. 2020 ರಲ್ಲಿ ಜಾಗತಿಕವಾಗಿ ಶಸ್ತ್ರಾಸ್ತ್ರ ಮಾರಾಟದಲ್ಲಿ ಭಾರತದ ಪಾಲು ಶೇಕಡಾ 1.2 ರಷ್ಟಿತ್ತು. ಟಾಪ್ 100 ರಲ್ಲಿರುವ ಮೂರು ಭಾರತೀಯ ಕಂಪನಿಗಳ ಒಟ್ಟು 6.5 ಬಿಲಿಯನ್ ಡಾಲರ್‌ಗಳ ಶಸ್ತ್ರಾಸ್ತ್ರ ವಹಿವಾಟು ನಡೆದಿದ್ದು 2019 ಕ್ಕಿಂತ 2020 ರಲ್ಲಿ 1.7 ಶೇಕಡಾ ಹೆಚ್ಚಾಗಿದೆ ಮತ್ತು ಜಾಗತಿಕ ಮಟ್ಟದಲ್ಲಿ 1.2 ರಷ್ಟು ಪಾಲನ್ನು ಹೊಂದಿದೆ ಎಂದು ವರದಿ ತಿಳಿಸಿದೆ.

click me!